Posts

Showing posts from April, 2010

ಅರಿವೆನ್ನುವ ಅಂಕುಶ

ಸಿಕ್ಕೆಡೆ ಅಲೆವುದು ಮನಸೆನ್ನುವುದು
ಸೊಕ್ಕು ಏರಿರುವ ಆನೆಯೊಲು
ಬುದ್ಧಿಗೆ ಇರಲು ಅರಿವಿನ ಅಂಕುಶ
ಇದ್ದಲ್ಲೇ ಅದು ನಿಲಬಹುದು!

ಸಂಸ್ಕೃತ ಮೂಲ (ಸುಭಾಷಿತರತ್ನ ಭಾಂಡಾಗಾರದಿಂದ):

ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್
ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ

-ಹಂಸಾನಂದಿ

ಬಾಯ್ಬಿಡದ ಗುಟ್ಟು

"ಹೀಗೆ ಬೆವೆತಿಹೆಯಲ್ಲ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಣಲ್ಲೆ"
"ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ"
"ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ"
ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌರಿ ಕಾಯಲೆಮ್ಮನ್ನು!

ಸಂಸ್ಕೃತ ಮೂಲ: (ಸುಭಾಷಿತ ರತ್ನಕೋಶದಿಂದ)

ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ
ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।
ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ
ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥


स्वॆदस्तॆ कथमीदृशः प्रियतमॆ त्वन्नॆत्रवह्नॆर्विभॊ
कस्माद्वॆपितमॆतदिन्दुवदनॆ भॊगीन्द्रभीतॆर्भव ।
रॊमाञ्चः कथमॆष दॆवि भगवन् गङ्गाम्भसां शीकरैर्
इत्थं भर्तरि भावगॊपनपरा गौरी चिरं पातु वः ॥

-ಹಂಸಾನಂದಿ

ಕೊ: ನಾನು ಈ ಮೊದಲು ಓದಿರದ ಈ ಶ್ಲೋಕವನ್ನು ಅನುವಾದಿಸಲು, ಡೇನಿಯಲ್ ಇಂಗಲ್ಸ್ ನ ಇಂಗ್ಲಿಷ್ ಅನುವಾದದ ಸಹಾಯ ತೆಗೆದುಕೊಂಡಿರುವೆ ಎಂದು ತಿಳಿಸಲು ಹಿಂಜರಿಕೆಯೇನಿಲ್ಲ :)

ಕೊ.ಕೊ: ಇದಕ್ಕೊಂದು ಸರಿಯಾದ ತಲೆಬರಹ ಕೊಡಲಾರದೇ ಹೆಣಗಾಡುತ್ತಿದ್ದಾಗ ನೆರವಿಗೆ ಬಂದ ಇ-ಗೆಳೆಯರೆಲ್ಲರೆಲ್ಲರಿಗೂ ಧನ್ಯವಾದಗಳು!

ಸಾಟಿಯಿಲ್ಲದ ಬಿಲ್ಲಾಳು

ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಮದನನೊಬ್ಬನೆ ಇಲ್ಲಿ ಆ ತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!

ಸಂಸ್ಕೃತ ಮೂಲ:

ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।
ಧನ್ವೀ ಸ ಮಾರ ಏವೈಕೋ ದ್ವಯೋಃ ಐಕ್ಯಃ ಕರೋತಿ ಯಃ ॥

एकवस्तुम् द्विधा कर्तुम् बहवः सन्ति धन्विनः ।
धन्वी स मार एवैको द्वयोः ऐक्यः करोति यः ॥

-ಹಂಸಾನಂದಿ

ಕೊಸರು: ಮನ್ಮಥನು ವಸಂತಕಾಲದಲ್ಲಿ ಕಬ್ಬಿನ ಬಿಲ್ಲಿನಲ್ಲಿ ಐದು ಹೂಗಳ ಬಾಣವನ್ನು (ಅರವಿಂದ, ಅಶೋಕ, ಚೂತ, ನವಮಲ್ಲಿಕಾ ಮತ್ತು ನೀಲೋತ್ಪಲ) ಹೂಡಿ ಪ್ರೇಮಿಗಳ ಮೇಲೆ ಗುರಿಯಿಡುವನೆಂಬುದು ಕವಿಸಮಯ.

ಸಲಿಗೆ ತಂದೀತು ಅನಾದರ!

ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;
ಹಲವು ಬಾರಿ ಹೋದರೆ ಉದಾಸೀನ.
ಮಲೆಯ ಮೇಲಿರುವ ಬೇಡತಿ ಮನೆಯಲಿ
ಒಲೆಯ ಉರಿಸಲು ಗಂಧದ ಕಟ್ಟಿಗೆ!

ಸಂಸ್ಕೃತ ಮೂಲ:

ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೇ ಭಿಲ್ಲ ಪುರಂಧ್ರೀ ಚಂದನತರು ಕಾಷ್ಟಂ ಇಂಧನಂ ಕುರುತೇ||

-ಹಂಸಾನಂದಿ

ಮುಕ್ತಿ

ನೀಡುವುದಕೆ ಕೈ ಹೊರತು ಕಡಗ ತೊಡುವುದಕಲ್ಲ
ಮೀಯುವುದು ಶುಚಿ ಹೊರತು ಗಂಧಪೂಸುವುದಲ್ಲ;
ಮನ್ನಣೆ ಮನ ತಣಿಸುವುದು ಹೊರತು ತಿಂಡಿತಿಸಿಸಲ್ಲ
ಅರಿವಿಂದ ಬಿಡುಗಡೆ ಹೊರತು ತಲೆ ಬೋಳಿಸುವದಲ್ಲ!

ಸಂಸ್ಕೃತ ಮೂಲ:

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ||

-ಹಂಸಾನಂದಿ

ಕೊ: ಎಂದೋ ಓದಿದ್ದ ಈ ಸುಭಾಷಿತವನ್ನು ಮತ್ತೆ ನೆನಪಿಗೆ ತರಿಸಿದ ವೇದಸುಧೆ ಬ್ಲಾಗಿಗೆ ನಾನು ಆಭಾರಿ.

ಕತ್ತಲು ಕಳೆಯುವ ಒಬ್ಬನೆ ಚಂದಿರ

ಸದ್ಗುಣಿ ಕೂಸೊಂದಿರುವುದೆ ಮಿಗಿಲು
ಬುದ್ಧಿಗೇಡಿ ನೂರಿರುವುದಕಿಂತ;
ಚುಕ್ಕಿ ಸಾಸಿರವು ಕಳೆಯದ ಕತ್ತಲು
ಚಂದ್ರನೊಬ್ಬನೇ ಕಳೆಯುವನು!

ಸಂಸ್ಕೃತ ಮೂಲ:

ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ |
ಏಕಶ್ಚಂದ್ರಸ್ತಮೋ ಹಂತಿ ನತಿ ತಾರಾಗಣೋSಪಿ ಚ ॥

वरमेको गुणी पुत्रो न च मूर्खशतान्यपि।
एकश्चन्द्रस्तमो हन्ति न च तारागणोऽपि च॥

-ಹಂಸಾನಂದಿ

ವಿದ್ಯೆಯೆಂಬ ಸಿರಿ

ತುಡುಗ ಕದಿಯಲಾರದ ಅರಸ ಕಸಿಯಲಾರದ
ಸೋದರರಲಿ ಪಾಲಾಗದ ಹೊರಲು ಭಾರವಿರದ
ಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವ
ವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!


ಸಂಸ್ಕೃತ ಮೂಲ:

ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ |
ವ್ಯಯೇ ಕೃತೇ ವರ್ಧತ ಏವ ನಿತ್ಯಮ್
ವಿದ್ಯಾಧನಂ ಸರ್ವಧನಪ್ರಧಾನಂ ||

न चोरहार्यं न च राजहार्यं
न भ्रातृभाज्यं न च भारकारी |
व्यये कृते वर्धत एव नित्यं
विद्याधनं सर्वधनप्रधानम् ||

-ಹಂಸಾನಂದಿ

ಕೊ: ನನ್ನ ಹಲವಾರು ಬ್ಲಾಗೋದುಗರು ಜುಲೈ ಹದಿನಾರರಂದು ಬೆಂಗಳೂರಿನಲ್ಲಿ ನಡೆದ ’ಹಂಸನಾದ’ ಪುಸ್ತಕ ಬಿಡುಗಡೆಗೆ ಬಂದಿದ್ದಿರಿ. ಕಾರ್ಯಕ್ರಮದ ಗದ್ದಲದಲ್ಲಿ ಎಲ್ಲರನ್ನೂ ನನ್ನ ಮನಸ್ಸಿಗೆ ಸಮಾಧಾನವಾಗುವಷ್ಟು ಮಾತನಾಡಿಸಲು ಆಗಲಿಲ್ಲ. ಅದಕ್ಕೆ ಕ್ಷಮೆ ಇರಲಿ. ಇನ್ನೂ ಹಲವರು ಇ-ಮೆಯ್ಲ್ ನಲ್ಲಿ ಶುಭ ಕೋರಿದ್ದಿರಿ. ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು.