Posts

Showing posts from June, 2010

ನಾಟ್ಯಗುರುವಿಗೊಂದು ನಮನ

Image
"ಕುಡಿ ಹುಬ್ಬಿನವಳೇ, ಬಳ್ಳಿದೋಳುಗಳ ಹೀಗೆ ನೀಡು, ನಿಲುವಿರಲಿ ಇಂತು;
ಮಣಿವಾಗ ಕೈಚಾಚದಿರು, ಕಾಲ್ಬೆರಳ ಬಾಗಿಸು; ಒಮ್ಮೆ ನೋಡು ನನ್ನನ್ನು"
ಮೋಡ ಮೊರೆವಂತೆ ಅವನ ಮೃದಂಗದನಿಯಲಿ ನುಡಿಯುತಿಹ ಪರಶಿವನ
ಕುಣಿವ ಹೆಜ್ಜೆಗಳ ನಡುವೆ ಕೇಳುತಿಹ ಕೈ ಚಪ್ಪಾಳೆಗಳು ಕಾಯಲೆಮ್ಮನ್ನು!

ಸಂಸ್ಕೃತ ಮೂಲ:

ಏವಂ ಸ್ಥಾಪಯ ಸುಭ್ರು ಬಾಹುಲತಿಕಾಂ ಏವಂ ಕುರು ಸ್ಥಾನಕಂ
ನಾತ್ಯುಚ್ಚೈರ್ನಮ ಕುಂಚಯಾಗ್ರಚರಣೌ ಮಾಮ್ ಪಶ್ಯ ತಾವತ್ ಕ್ಷಣಮ್ ।
ಏವಂ ನರ್ತಯತಃ ಸ್ವವಕ್ತ್ರಮುರಜೇನಾಂಬೋಧರಧ್ವಾನಿನಾ
ಶಂಭೋರ್ವಃ ಪರಿಪಾಂತು ನರ್ತಿತಲಯಚ್ಛೇದಾಹತಾಸ್ತಾಲಿಕಾ ॥एवं स्थापय सुभ्रु बाहुलतिकामॆवं कुरु स्थानकं
नात्युच्चैर्नम कुञ्चयाग्रचरणौ मां पश्य तावत्क्षणम् ।
एवं नर्तयतः स्ववक्त्रमुरजॆनाम्बॊधरध्वानिना
शंभॊर्वः परिपान्तु नर्तितलयच्छॆदाहतास्तालिकाः ॥

-ಹಂಸಾನಂದಿ

(ಕೊನೆಯ ಕೊಸರು: ಈ ಸುಭಾಷಿತವನ್ನೂ, ಮತ್ತದರ ಇಂಗ್ಲಿಷ್ ಅನುವಾದವನ್ನೂ ತೋರಿಸಿಕೊಟ್ಟ ಕೃಷ್ಣಪ್ರಿಯ ಅವರಿಗೆ ನಾನು ಆಭಾರಿ)
ಚಿತ್ರ ಕೃಪೆ: http://www.exoticindiaart.com/product/BH21/ ಮತ್ತು
http://shalinbharat.ning.com/photo

ಕೊರತೆ ಮರೆಯಿಸುವ ಗುಣಗಳು

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರುವೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ

ಕೊ: ಇದು ಕುಮಾರಸಂಭವದ ಮೊದಲ ಸರ್ಗದಲ್ಲಿ, ಕಾಳಿದಾಸ ಮಾಡುವ ಹಿಮಾಲಯದ ಪ್ರಶಂಸೆಯಲ್ಲಿ ಬರುವ ಒಂದು ಪದ್ಯ. ಹಿಮಾಲಯದಲ್ಲಿ ತಡೆಯಲಾರದಷ್ಟು ಚಳಿ, ಸುತ್ತ ಹಿಮರಾಶಿ ಇರುವುದು ನಿಜ. ಆದರೆ, ಆ ಪರ್ವತಶ್ರೇಣಿಯು ಸಕಲ ರತ್ನಗಳೂ ಸಿಗುವ ಜಾಗವಾಗಿದ್ದರಿಂದ, ಈ ಹಿಮರಾಶಿಯೊಂದು ಕೊರೆ, ತೊಂದರೆ ಎಂದು ಕಾಣುವುದೇ ಇಲ್ಲ ಅನ್ನುವುದು ಕವಿಯ ಅಂಬೋಣ.

ಕೊ.ಕೊ: ಚಂದಿರನ ಮೇಲೆ ಕಾಣುವ, ನಾವು ಈಗ ಮೊಲ, ಅಥವಾ ಜಿಂಕೆಯ ರೀತಿಯ ಚಿತ್ತಾರವನ್ನು ಕಲ್ಪಿಸಿಕೊಳ್ಳುವ, ಕರಿ ನೆರಳುಗಳನ್ನೇ ಇಲ್ಲಿ, ಚಂದಿರನ ಮೇಲಿನ ಮಚ್ಚೆ ಎಂದು ಕವಿ ಕರೆದಿದ್ದಾನೆ.

ಕೊ.ಕೊ. ಕೊ : : ಈ ಕಾಳಿದಾಸನ ಪದ್ಯವನ್ನೋದಿದ ಇನ್ನಾರೋ ಕವಿ ಅವನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ ಕೆಳಗಿನ ಪದ್ಯದಲ್ಲಿ:

एको हि दोषो गुणसन्निपाते निमज्जतींदोः इति यो बभाषे
नूनम् न द्रुष्टं कविनापि तेन दारिद्रय दोषो गुणराशिनाशी

ಇದನ್ನು ನಾನು ಹಿಂದೆ ಈ ರೀತಿ ಅನುವಾದ ಮಾಡಿದ್ದೆ - ಮ…

ನಾಳೆಗಾಗಿ ಇಂದೇ ದುಡಿ!

ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,
ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,
ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,
ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,
ಅರಿತವರು ಆಗಲೇ ದುಡಿಯುತಲಿ ಇರಬೇಕು;
ತಮ್ಮ ಏಳಿಗೆಯನ್ನು ತಾವೆ ತರುತಿರಬೇಕು!
ಇದನು ಮಾಡದೆ ಹೋಗಿ ಮನೆ ಹತ್ತಿ ಉರಿವಾಗ
ಬಾವಿ ತೋಡಲು ಹೊರಡುವುದೆಂತಹ ಕೆಲಸ?


ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಯಾವತ್ಸ್ವಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ
ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ |
ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾ-
ನ್ನೋದೀಪ್ತೇ ಭವನೇ ತು ಕೂಪಖನನಂ ಪ್ರತ್ಯುದ್ಯಮಃ ಕೀದೃಶಃ ||

ರಾಜಸಿಂಹ, ವಿರೂಪಾಕ್ಷ, ಮತ್ತು ಕೈಲಾಸ

Image
ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು?
ಇಲ್ಲೇ ಇರುವುದು ಸ್ವಾರಸ್ಯ. ಬ್ರಿಟಿಶರು ಬರುವವರೆಗೆ ಭಾರತದಲ್ಲಿ ಒಂದುದೇಶವೆಂಬ ಭಾವನೆಯೇ ಇರಲಿಲ್ಲ ಎನ್ನುವವರಿದ್ದಾರೆ. ಆರ್ಯ-ದ್ರಾವಿಡ ಎಂಬ ವಿಂಗಡಣೆ ಮಾಡಿ, ಅಲ್ಲಿಗೂ ಇಲ್ಲಿಗೂ ಕೊಟ್ಟು-ಕೊಳ್ಳುವುದಿರಲಿಲ್ಲ, ಇದ್ದರೂ, ಅದು ಬೇಡ ಎನ್ನುವವರಿದ್ದಾರೆ. ನಿಜಸ್ಥಿತಿ ಏನೆಂದರೆ ರಾಜಕೀಯವಾಗಿ ನಮ್ಮ ದೇಶ ಹಲವಾರು ’ದೇಶ’ಗಳಾಗಿ ಭಾಗವಾಗಿದ್ದಿರಬಹುದು. ಹಲವು ದೇಶಭಾಷೆಗಳ ನಡುವೆಯೂ, ಬೇರೆ ಬೇರೆ ರಾಜರ ಆಳ್ವಿಕೆಗಳ ನಡುವೆಯೂ ಭಾರತ ಸಾಂಸ್ಕೃತಿಕವಾಗಿ ಅದು ಒಂದೇ ಆಗಿತ್ತು ಎನ್ನುವುದನ್ನು ಮನವರಿಕೆ ಮಾಡಲಿಕ್ಕೆ ನಮ್ಮ ಕಲಾಪ್ರಕಾರಗಳು, ಸಂಪ್ರದಾಯಗಳು ಒಳ್ಳೆ ಉದಾಹರಣೆ. ಅದಿಲ್ಲದೆ ಹೋದರೆ, ಕನ್ನಡಿಗ ಪುರಂದರ ದಾಸರು ಕರ್ನಾಟಕ (ದಾಕ್ಷಿಣಾತ್ಯ) ಸಂಗೀತದ ಪಿತಾಮಹರೆನ್ನಿಸಿಕೊಳ್ಳುತ್ತಿರಲಿಲ್ಲ. ಇನ್ನೊಬ್ಬ ಕನ್ನಡಿಗ ಗೋಪಾಲನಾಯಕ ಹಿಂದೂಸ್ತಾನಿ (ಉತ್ತರಾದಿ) ಸಂಗೀತದ ಮೂಲಪುರುಷರಲ್ಲೊಬ್ಬನೆನಿಸಿಕೊಳ್ಳುತ್ತಿರಲಿಲ್ಲ. ಒರಿಸ್ಸಾದ ಪುರಿ ದೇವಾಲಯದಲ್ಲಿ ಜಯದೇವನ ಅಷ್ಟಪದಿಗಳನ್ನು ಹಾಡಿ, ನರ್ತಿಸುವ ನರ್ತಕಿಯರು ಕರ್ನಾಟಕ ಸಂಗೀತದ ರಾಗಗಳನ್ನು ಉಪಯೋಗಿಸುತ್ತಿರಲಿಲ್ಲ. ಕೇರಳದ ಕೂಡಿಯಾಟ್ಟಂ ನಲ್ಲಿ ಸಂಸ್ಕೃತ ನಾಟಕಗಳ ಪ್ರದರ್ಶ…

ನರಕಕ್ಕೆ ಸುಲಭದ ದಾರಿ

ಮರಗಳ ಕಡಿದು ಪಶುಗಳ ಕೊಂದು
ನೆತ್ತರ ಕೆಸರನು ಮಾಡಿದವರಿಗೂ
ಸ್ವರ್ಗದ ಬಾಗಿಲು ತೆರೆದಿಹುದಾದರೆ
ಮತ್ತಾರು ನರಕಕೆ ಹೋಗುವರು?

ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:

ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್ದಮಂ |
ಯದ್ಯೇವಂ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ||

वृक्षान्श्चित्वा पशून्हत्वा कृत्वा रुधिरकर्दमं ।
यद्देवम् गम्यते स्वर्गे नरकः केन गम्यते ॥

-ಹಂಸಾನಂದಿ

ಕೊಸರು: ಪಶು ಅನ್ನುವುದರ ತದ್ಭವ ಕನ್ನಡದಲ್ಲಿ ಹಸು ಎಂದಿದ್ದರೂ, ಕನ್ನಡದಲ್ಲಿ ಪಶು-ಹಸು ಈ ಎರಡೂ ಪದಗಳೂಬಳಕೆಯಲ್ಲಿವೆ; ಕನ್ನಡದಲ್ಲಿ ಪಶು ಅನ್ನುವ ಪದವನ್ನು ಸಂಸ್ಕೃತದಲ್ಲಿಯ ಹಾಗೇ ಯಾವುದೇ ಪ್ರಾಣಿಯನ್ನೂ ಸೂಚಿಸಲು ಬಳಸಬಹುದು.

ಜನ್ಮಾಂತರದ ನೆನಹು

ಕಣ್ಣು ಸೊಗಸನು ಕಂಡಾಗ ಕಿವಿಗೆ ಇನಿದು ಕೇಳ್ದಾಗ
ನೆಮ್ಮದಿಯಲಿಹ ಮನಕೂ ಚಡಪಡಿಕೆ ಉಂಟಾಗೆ
ನಿಚ್ಚಯದಿ ಆ ಮನವು ಅರಿಯದೇ ನೆನೆದಿಹುದು
ಮುನ್ನವಾವುದೋ ಹುಟ್ಟಿನ ಹಿತದ ಸಂಗತಿಗಳನು!

ಸಂಸ್ಕೃತ ಮೂಲ - ಕಾಳಿದಾಸನ 'ಅಭಿಜ್ಞಾನ ಶಾಕುಂತಲ' ನಾಟಕ (ಐದನೇ ಅಂಕ)
ರಮ್ಯಾಣಿ ವೀಕ್ಷ್ಯ ಮಧುರಾಂಶ್ಚ ನಿಶಮ್ಯ ಶಬ್ದಾನ್
ಪರ್ಯುತ್ಸುಕೀ ಭವತಿ ಯತ್ ಸುಖಿತೋSಪಿ ಜಂತುಃ |
ತಚ್ಚೇತಸಾ ಸ್ಮರತಿ ನೂನಮ್ ಅಬೋಧ ಪೂರ್ವಂ
ಭಾವ ಸ್ಥಿರಾಣಿ ಜನನಾಂತರ ಸೌಹೃದಾನಿ ।।

रम्याणि वीक्ष्य मधुरांश् च निशम्य शब्दान्
पर्युत्सुकी-भवति यत् सुखेतेऽपि जन्तुः ।
तच् चेतसा स्मरति नूनम् अबोध-पूर्वं
भाव-स्थिराणि जननान्तर-सौहृदानि ।।

-ಹಂಸಾನಂದಿ

ಬಿಡುಗಡೆಯ ಬೇಡಿ

ಇದ್ದರೆ ಆಸೆಯು ಮನುಜರಲಿ ಅದು
ಅಚ್ಚರಿ ತರಿಸುವ ಸಂಕಲೆಯಂತೆ;
ತೊಟ್ಟವರದನು ಓಡುತಲಿರುವರು
ಬಿಚ್ಚಲು ನಿಲುವರು ಹೆಳವರಂತೆ!

ಸಂಸ್ಕೃತ ಮೂಲ:

ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |
ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್ಠಂತಿ ಪಂಗುವತ್ ||

-ಹಂಸಾನಂದಿ