Posts

Showing posts from September, 2010

ದಯ ತೋರಲಿದುವೆ ವೇಳೆಯು, ದಾಶರಥಿ!

ದಯ ತೋರಲಿದುವೆ ವೇಳೆಯು, ದಾಶರಥೀ ||

ಜಗದ ಬವಣೆಯೆಂಬಾನೆಯ
ಸಿಂಗದೊಲು ನೀನಳಿಸುವೆ
ಜಗದಯ್ಯ ಆ ಬೊಮ್ಮನಿಗು
ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! ||

ಮುನ್ನ ನೀ ಕೊಟ್ಟಾಣತಿಯನು
ಮನಸಾರೆ ನಿದಾನದಲಿ ನಾ
ಸನ್ನಡತೆಯಲಿ ಪಾಲಿಸಿಹೆ! ಈ
-ಗೆನ್ನ ಬಳಿಸಾರಿ ಈ ತ್ಯಾಗರಾಜನಿಗೆ || ದಯ ತೋರಲಿದುವೆ ವೇಳೆಯು! ||

-ಹಂಸಾನಂದಿ


(ತ್ಯಾಗರಾಜರ ಗಾನವಾರಿಧಿ ರಾಗದ, ’ದಯಜೂಚುಟಕಿದಿ ವೇಳರಾ’ ಎಂಬ ರಚನೆಯ ಅನುವಾದ. ಸುಮಾರು ಮೂರು ವರ್ಷದ ಹಿಂದೆ ಮಾಡಿದ್ದು, ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹಾಕಿರುವೆ )

ತಿಗಣೆಗಂಜಿದ ದೇವರು!

ಅನ್ನಮಯ್ಯ ಒಂದು ಕೀರ್ತನೆಯಲ್ಲಿ, ಬೆಳಗಾಗುತ್ತಲೇ, ಹಾವಿನ ಹೆಡೆಯೇ ಸೊಳ್ಳೆಗಳಿಂದ ಕಾಯುವ ತೆರೆ (ಸೊಳ್ಳೆ ಪರದೆ ಎನ್ನಿ) ಆಗಿರುವ ಶ್ರೀಹರಿಗೆ ಹಾಲುಣಿಸುವುದನ್ನು ನೆನೆದಿದ್ದಾರಂತೆ. ಅನ್ನಮಯ್ಯ ಶ್ರೀಹರಿಯನ್ನು, ಭಕ್ತಕೋಟಿಯ ಕಷ್ಟಕೋಟಲೆಗಳನ್ನು ನಿವಾರಿಸಲು, ಸೊಳ್ಳೆಪರದೆಯಂತಿರುವ ಆದಿಶೇಷನ ಹೆಡೆಯನ್ನು ಸರಿಸಿ, ಹೊರಗೆ ಬಾ ಎನ್ನುವುದು ನನಗೇನೋ ಅದಂತೂ ಬಹಳ ಸಹಜವೇ ಅನ್ನಿಸ್ತಾ ಇದೆ.

ಯಾಕಂತೀರಾ?

ನಿಜ ಹೇಳಬೇಕೆಂದರೆ, ಶ್ರೀಹರಿ ಕ್ಷೀರಸಾಗರಕ್ಕೆ ಹೋಗಿ ಹಾವಿನ ಹಾಸಿಗೆಯ ಮೇಲೆ ಮಲಗಿದ್ದೇ, ಸೊಳ್ಳೆ, ತಿಗಣೆ ಹೀಗೆ ಹುಳುಹುಪ್ಪಟೆಗಳ ಕಾಟ ತಪ್ಪಿಸ್ಕೊಳ್ಳೋದಿಕ್ಕೆ. ಹೇಗೆ ಅಷ್ಟು ಖಾತ್ರಿಯಾಗಿ ಹೇಳ್ತೀಯಾ ಅಂತೀರಾ? ನನ್ನ ಹತ್ತಿರ ಪುರಾವೆ ಇದೆ ಸ್ವಾಮೀ!

ಇಲ್ಲಿ ನೋಡಿ ಒಂದು ಸಂಸ್ಕೃತ ಸುಭಾಷಿತ:

ಕಮಲೇ ಕಮಲಾ ಶೇತೇ
ಹರಃ ಶೇತೇ ಹಿಮಾಲಯೇ
ಕ್ಷೀರಾಬ್ದೌ ಚ ಹರಿಃ ಶೇತೇ
ಮನ್ಯೇ ಮತ್ಕುಣ ಶಂಕಯಾ
ಹಾಗಂದರೆ,ಕಮಲದಲಿ ಮಲಗುವಳು ಲಕುಮಿ
ಶಿವ ಮಲಗುವ ಹಿಮಾಲಯದಲಿ
ಪಾಲ ಕಡಲಲಿ ಪವಡಿಸುವನು ಹರಿ
ತಿಗಣೆ ಕಡಿತದ ಅಂಜಿಕೆಯಿಂದ!
ನೋಡಿದ್ರಲ್ಲ! ಹರಿ ಹಾಲ್ಗಡಲಿಗೆ ಹೋಗಿದ್ದೇ ಸೊಳ್ಳೆ, ತಿಗಣೆ ಹೀಗೆ ಹುಳುಹುಪ್ಪಟೆ, ಕ್ರಿಮಿಕೀಟಗಳಿಗೆ ಹೆದರಿ; ಅವುಗಳಿಂದ ತಪ್ಪಿಸ್ಕೊಳೋದಿಕ್ಕೆ ಅಂತ. ಅಲ್ಲಿ ಹೋದಮೇಲೆ ಏನಾಯ್ತು? ಬಹುಶಃ ತಿಗಣೆಗಳೇನೋ ಕಾಡಲಿಲ್ಲ ಅಂತ ಕಾಣತ್ತೆ. ಆದರೆ, ಹದಿನಾಲ್ಕೂ ಲೋಕಗಳನ್ನು ವ್ಯಾಪಿಸಿರುವ ಸೊಳ್ಳೆ ರಾಯರು ಅಲ್ಲೂ ಪ್ರತ್ಯಕ್ಷರಾಗಿರಬೇಕು.
ತಾನು ಮಲಗಿರುವ ಹಾವ…

ರಾಮನ ಸ್ವರ್ಗಾರೋಹಣ

ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್ರಾವಸ್ತಿ, ಕುಶಾವತಿ, ಲಕ್ಷ್ಮಣಾವತಿ, ಮಿಥಿಲೆ ಹೀಗೆ ಹಲವು ಸ್ಥಳಗಳ ಬಗ್ಗೆ ಟ್ವಿಟರಿನಲ್ಲಿ ಒಂದಷ್ಟು ಚಿಲಿಪಿಲಿಗುಟ್ಟಿಯೂ ಆಯ್ತು.
ಆಗಲೇ, ಹಿಂದೊಮ್ಮೆ ಇನ್ನಾವುದೋ ಬರಹಕ್ಕೆ ಹಾಕಿದ್ದ ರಾಮನ ಸ್ವರ್ಗಾರೋಹಣದ ಬಗ್ಗೆ ಟಿಪ್ಪಣಿಯೊಂದು ನೆನಪಾಗಿ, ಇಲ್ಲಿ ಮತ್ತೆ ಅದನ್ನು ಸ್ವಲ್ಪ ಹಿಗ್ಗಿಸಿ ಹಾಕ್ತಿದೀನಿ.
ರಾಮನ ಸ್ವರ್ಗಾರೋಹಣದ ಪ್ರಸಂಗ ಉತ್ತರಕಾಂಡದ ೧೦೦ ನೇ ಅಧ್ಯಾಯದಲ್ಲಿನ ಬರುತ್ತೆ. ಇದೇ ಉತ್ತರ ಕಾಂಡದ ಕೊನೆಯ ಅಧ್ಯಾಯ.
ಕೆಲವು ಶ್ಲೋಕಗಳ ಭಾವಾನುವಾದವನ್ನಿಲ್ಲಿ ಮಾಡಿರುವೆ.ಮೊದಲಿಗೆ,
ತೆರಳಿ ಅರೆ ಯೋಜನ ದೂರ ಪಡುವಲ ಹರಿವಿನ ಹೊಳೆಯನ್ನ
ಸರಯುವನು ಆ ಪುಣ್ಯನದಿಯನನು ಕಂಡನಾ ರಘುನಂದನ
ಸಂಸ್ಕೃತ ಮೂಲ:ಅಧ್ಯರ್ಧಯೋಜನಂ ಗತ್ಚಾ ನದೀ ಪಶ್ಚಾನ್ಮುಖಾಶ್ರಿತಾಮ್ |
ಸರಯೂಂ ಪುಣ್ಯಸಲಿಲಾಂ ದದರ್ಶ ರಘುನಂದನಃ || (ಅಧ್ಯಾಯ ೧೦೦; ಶ್ಲೋಕ ೧)
ಬಳಿಕ,
ಸರಯೂ ನದಿ ನೀರನ್ನು ರಾಮ ಪಾದಗಳಿಂ ತಾ ಹೊಕ್ಕನು (?)
ಸಂಸ್ಕೃತ ಮೂಲ:
ಸರಯೂ ಸಲಿಲಂ ರಾಮಃ ಪದ್ಭ್ಯಾಂ ಸಮುಪಚಕ್ರಮೇ|| (ಅಧ್ಯಾಯ ೧೦೦, ಶ್ಲೋಕ ೫)ಮತ್ತೇನಾಯ್ತು?
ಆಗ ಪೂರ್ವಿಕರ ಮಾತೊಂದು ಕೇಳಿ ಬಂದಿತು ಮೇಲಿನಾಆಗಸದಿಂದ
"ಮಂಗಳವಾಗಲಿ ವಿಷ್ಣುವೆ ನಿನಗೆ! ನಿನ್ನೆಡೆಗೇ ಮರಳಿ ಬರುವುದರಿಂದ&qu…

ಭಕ್ತಿ

Image
ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,
ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,
ಹದಿಬದೆಯು ತನ್ನ ಪತಿಯ ಜೊತೆ ಬಿಡದಿರುವಂತೆ,
ಬಳ್ಳಿ ಮರವನು ಹುಡುಕಿ ತಬ್ಬಿ ಹಬ್ಬುವಂತೆ,
ಕಡಲ ದಾರಿಯನರಸಿ ಹರಿದು ಸೇರುವ ಹೊಳೆಯಂತೆ,
ಓ ಶಿವನೆ, ಮನವೆನದು ಅರಸಿ ಅರಸಿ
ಕೊನೆಗೆ ಸೇರಿ ನಿಲ್ಲುವುದು ನಿನ್ನ ಅಡಿದಾವರೆಗಳಲೇ;
ಇದನೆ ತಾನೆ ಭಕ್ತಿಯೆಂದೆನುವುದು!


ಅಂಕೋಲೆ ಗಿಡ(Alangium decapetalum) ಚಿತ್ರ ಕೃಪೆ - ಹರಿಪ್ರಸಾದ್ ನಾಡಿಗ್
ಸಂಸ್ಕೃತ ಮೂಲ (ಶಂಕರಾಚಾರ್ಯರ ಶಿವಾನಂದಲಹರಿಯಿಂದ)

ಅಂಕೋಲಂ ನಿಜಬೀಜ ಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಂ
ಪ್ರಾಪ್ನೋತೀಹ ಯಥಾ ತಥಾ ಪಶುಪತೇ ಪಾದಾರವಿಂದದ್ವಯಂ
ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ

-ಹಂಸಾನಂದಿ

ಕೊ: ಅಂಕೋಲೆ ಮರದ (Alangium Salvifolium -ಇದರಲ್ಲಿ Alangium Hexapetalum Alangium decapetalum ಎಂಬ ಉಪ ಪ್ರಬೇಧಗಳೂ ಇರುವಂತೆ ಕಾಣುತ್ತದೆ) ಬೀಜಗಳು ಮರದ ತೊಗಟೆಗೇ ನೆಟ್ಟುಕೊಳ್ಳುತ್ತವಂತೆ. ಶಂಕರಾಚಾರ್ಯರು ಈ ವಿಷಯವನ್ನೇ ಮೊದಲ ಸಾಲಿನಲ್ಲಿ ಹೇಳಿರುವುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಗೂಗಲೇಶ್ವರನ ಮೊರೆಹೊಕ್ಕರೆ, ಹೀಗೆ ಬೀಜ ತೊಗಟೆಯಲ್ಲಿ ನೆಟ್ಟುಕೊಂಡ ಕೆಲ ಚಿತ್ರಗಳನ್ನು ನೋಡುವಿರಿ.

ಪಾಲುದಾರರು

ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವ
ಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!

ಸಂಸ್ಕೃತ ಮೂಲ:

ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:
ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ:

-ಹಂಸಾನಂದಿ

ಕೊ: ಈಗ ತಾನೇ ವಿಕಾಸ ಹೆಗಡೆ ಅವರ ಗೂಗಲ್ ಬಜ್ ನಲ್ಲಿ ಓದಿದ್ದಿದು. ಚೆನ್ನಾಗಿದೆ ಅನ್ನಿಸಿ ತಕ್ಷಣ ಹೀಗೆ ಅನುವಾದಿಸಿದೆ.

ಕೊಲ್ಲುವ ಕಣ್ಣ ನೋಟ

ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವು
ಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತ
ಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-
ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!

ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)

ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

-ಹಂಸಾನಂದಿ

ಕೊ: ಹಿಂದೆಂದೋ ಮಾಡಿದ ಅನುವಾದ; ಸ್ವಲ್ಪ ಬದಲಿಸಿದಾಗ ಇನ್ನೂ ಇಷ್ಟವಾಯಿತೆಂದು ಮತ್ತೆ ಹಾಕಿರುವೆ. ಮುಂಚೆ ಮಾಡಿದ್ದ ಅನುವಾದ ಇಲ್ಲಿದೆ.

ಕೊ.ಕೊ: ಈಗಲೂ ಮೂಲದ ಪೂರ್ತಿ ಸೊಗಸನ್ನು ತರಲಾಗಲಿಲ್ಲ. ಅದು ನನ್ನ ಕೊರತೆ.

ಮುನ್ನೆಚ್ಚರಿಕೆ

ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ
ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ?

ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)

ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||

-ಹಂಸಾನಂದಿ

ಕೊ: ಈ ಹಿಂದೆ ಸುಮಾರು ಇದೇ ಅರ್ಥ ಬರುವ ಇನ್ನೊಂದು ಸುಭಾಷಿತವನ್ನು ಇಲ್ಲಿ ಹಾಕಿದ್ದೆ.

ಜಯ ಗೌರೀ ಜಗದೀಶ್ವರಿ

Image
ನಾಳೆ ಗೌರಿ ಹಬ್ಬ. ಎಲ್ಲರಿಗೂ ಮೊದಲು ಪೂಜಿಸುವ ಗಣೇಶನ ಹಬ್ಬದ ಮುನ್ನಾದಿನವೇ ಗೌರಿ ಹಬ್ಬ. ಅದರಲ್ಲಿಯೂ ಈಕೆ ಬರೀ ಗೌರಿಯಲ್ಲ, ಸ್ವರ್ಣಗೌರಿ. ಅದಕ್ಕೇ ಮೊದಲಿಗೆ ಸ್ವರ್ಣಗೌರಿ ಚಿತ್ರದಿಂದ ಒಂದು ಸುಂದರ ಹಾಡನ್ನ ಕೇಳಿ.ಈ ಸ್ವರ್ಣಗೌರಿಯಂತೂ ಅಂತಿಂತಹವಳಲ್ಲ. ಬಹಳ ಚಾಕಚಕ್ಯತೆ ಉಳ್ಳವಳು. ಇವಳಿಲ್ಲದಿದ್ದರೆ ಶಿವನ ಗತಿ ಏನಾಗುತ್ತಿತ್ತೋ? ’ಶಿವನೇ ಗತಿ’ ಅಂತ ಅವನು ಹೇಳೋದಕ್ಕಾಗೋದಿಲ್ವಲ್ಲ? ಪುಣ್ಯಕ್ಕೆ ಅನ್ನಪೂರ್ಣೆಯಾದ ಗೌರಿ ಮನೆಯಲ್ಲಿ ಇರೋದ್ರಿಂದ ಅವನು ಬದುಕಿದ!

ತನ್ನದೈದು ಬಾಯಿ ಮಗನೊಬ್ಬನಿಗಾರು ಬಾಯಿ
ಇನ್ನೊಬ್ಬ ಮಗನಿಗಿದೆ ಆನೆಯ ಬಾಯಿ!
ಅನ್ನವನುಣಿಸುವ ಅನ್ನಪೂರ್ಣೆ ಮನೆಯಲ್ಲಿ
ಇಲ್ಲದಿರೆಂತು ಜೀವಿಪನು ಬಯಲನುಟ್ಟವನು*?

*ಬಯಲನುಟ್ಟವ - ದಿಗಂಬರ, ಆಕಾಶವನ್ನೇ ಬಟ್ಟೆಯಾಗಿ ಉಳ್ಳವನಾದ ಶಿವ

ಸಂಸ್ಕೃತ ಮೂಲ:
ಸ್ವಯಂ ಪಂಚಮುಖೋ ಪುತ್ರೌ ಗಜಾನನ ಷಡಾನನೌ
ದಿಗಂಬರಃ ಕಥಂ ಜೀವೇತ್ ಅನ್ನಪೂರ್ಣಾ ನ ಚ ಗೃಹೇ!

ಮಕ್ಕಳ ಜಗಳ ಯಾರ ಮನೇಲಿಲ್ಲ? ಮಕ್ಕಳ ಜಗಳ ಬಿಡಿಸೋಕೆ ತಾಯಿ ಬೇಕೇ ಬೇಕು. ಆದರೆ ಒಮ್ಮೊಮ್ಮೆ, ಆ ತಾಯಿ ಗೌರಿಗೂ ಅದು ಆಗೋದಿಲ್ವಂತೆ. ಒಬ್ಬ ಸುಭಾಷಿತಕಾರ ಹೇಳೋದನ್ನ ಕೇಳಿ:

ಅಯ್ಯೋ ಗಣೇಶ! ಯಾಕೋ ಅಳುವೆ? ನನ್ನ ಕಿವಿಗಳನ್ನ ಎಳೀತಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದ ಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!

ಸಂಸ್ಕೃ…

ವಾತಾಪಿ ಗಣಪತಿಂ ಭಜೇಹಂ

Image
ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳು ಗಣಪನನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ - 'ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ' ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ. ಅದೇ ಹಂಸದ್ವನಿ ರಾಗದಲ್ಲಿ, ಗಣಪತಿಯ ಮೇಲೆಯೇ ಮತ್ತೊಂದು ಪ್ರಖ್ಯಾತ ರಚನೆ ಇದೆ; ಅದು ಮುತ್ತುಸ್ವಾಮಿ ದೀಕ್ಷಿತರ ವಾತಾಪಿಗಣಪತಿಂ ಭಜೇಹಂ ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ, ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.

ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ ೩-೪ ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಬಹಳ ಸರಳವಲ್ಲದಿದ್ದರೂ, ಇವರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.


ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದ…

ಬ್ಲಾಗ್ ಮತ್ತೆ ಬರಹಗಳ ಗುಣಮಟ್ಟ

ನಾನಂತೂ ಕಾಲೇಜು ಮುಗಿದ ನಂತರ ಕಾಗದದಲ್ಲಿ, ಅದೂ ಕನ್ನಡದಲ್ಲಿ ಬರೆದದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ - ಸುಮಾರು ೯೬ ನೇ ಇಸವಿಯಲ್ಲಿ ಮಾಡಿದ್ದ ಒಂದು ಇಂಗ್ಲಿಷ್ ಕಥೆಯ ಅನುವಾದವಲ್ಲದೇ ಇನ್ನೇನನ್ನೂ ಕಾಗದದ ಮೇಲೆ ಬರೆದ ನೆನಪೇ ಇಲ್ಲ. ಎಷ್ಟೋ ಬಾರಿ ಒಳ್ಳೆಯ ಸುಭಾಷಿತಗಳನ್ನು ನೆನೆಸಿಕೊಂಡಾಗಲೆಲ್ಲ, ಅಥವಾ ಎಸ್ವಿ ಪರಮೇಶ್ವರ ಭಟ್ಟರ ಅಥವಾ ಪಾವೆಂ ಅವರ ಸುಭಾಷಿತಗಳ ಅನುವಾದಗಳನ್ನು ಓದಿದಾಗಲೆಲ್ಲ ನನಗೆ ಹೊಳೆದ ಕನ್ನಡಿಸುವ ಹೊಸ ಸಾಲುಗಳು ಹಾಗೇ ಗಾಳಿಯಲ್ಲೇ ಆರಿಹೋಗುತ್ತಿದ್ದಿದ್ದೂ ನಿಜ. ಈ ನಿಟ್ಟಿನಲ್ಲಿ ನೋಡಿದರೆ ಕಂಪ್ಯೂಟರಿನಲ್ಲಿ ಬರೆಯುವ, ಅಲ್ಲದೆ ಬರೆದದ್ದನ್ನು ನಾಲ್ಕಾರು ಜನ ಓದುವಂಥ ಅವಕಾಶ ಬಂದಿದ್ದು ಏನನ್ನಾದರೂ ಬರೆಯುತ್ತಿರಬೇಕೆಂಬ ಹುಮ್ಮಸ್ಸು ತಂದಿರುವುದಂತೂ ಅಷ್ಟೇ ನಿಜ. ಬ್ಲಾಗಿಷ್ಟನಾಗುವ ಮೊದಲು, ನಮ್ಮ ಕನ್ನಡಕೂಟದ ವಾರ್ಷಿಕ ಸಂಚಿಕೆಗೆ ಒಂದೋ ಎರಡೋ ಎರಡೋ ಬರಹವನ್ನೋ ಚುಟುಕವನ್ನೋ ಪ್ರಬಂಧವನ್ನೋ ಬರೆಯುತ್ತಿದ್ದ ನಾನು ಈಗ ಮೂರು ವರ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ಬ್ಲಾಗ್ ಪೋಸ್ಟುಗಳನ್ನು ಪೋಸ್ಟಿಸಿದ್ದೇನೆ! ಎಲ್ಲವೂ ಬಹಳ ಸೊಗಸಾಗಿದೆ ಎಂದು ಹೇಳಲಾರೆನಾದರೂ, ಎಲ್ಲವೂ ಜಳ್ಳಲ್ಲ ಅಂತ ಹೇಳುವಷ್ಟು ಧೈರ್ಯವಂತೂ ಇದೆ.

"ಬ್ಲಾಗು ’ಸಾಹಿತ್ಯ’ವೇ?" ಅಂತ ಹೀಗಳೆಯುವ ಗೋಜಿಲ್ಲ ಅನ್ನಿಸುತ್ತೆ ನನಗೆ. ಅಥವಾ, ಈ ಕಾರಣಕ್ಕೆ ಯಾವನೇ ಒಬ್ಬ ಬ್ಲಾಗಿಷ್ಟ ಕೊರಗುವ ಗೋಜೂ ಇಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗುವುದು ಮಾತ…

ಮರೆಯಲಾರದ ಹಳೆಯ ಕಥೆಗಳು - ’ನಾಸೀಂ ಬೇಗಂ’

ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.

ಇನ್ನು ಕೆಲವು ಕಥೆಗಳಿರುತ್ತವೆ. ಒಮ್ಮೆ ಓದಿದ ನಂತರ ಎಷ್ಟೋ ವರ್ಷಗಳವರೆಗೆ, ಮತ್ತೆ ಓದದೆಯೂ, ಕೇಳದೆಯೂ ನೆನಪಿನಲ್ಲಿ ಉಳಿಯುವಂತಹವು ಆ ಕಥೆಗಳು. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶಯ್ಯಂಗಾರರ ಅನೇಕ ಕಥೆಗಳು ಈ ಗುಂಪಿಗೆ ಸೇರುತ್ತವೆ ಎಂದು ನನ್ನ ಎಣಿಕೆ.

ಆದರೆ, ಇವತ್ತು ನಾನು ನೆನಪಿಸಿಕೊಂಡ ಕಥೆಗಳೇ ಬೇರೆ. ಅವುಗಳಲ್ಲೊಂದು ಅಶ್ವತ್ಥ ಅವರ ’ನಾಸೀಂ ಬೇಗಂ’ ಎಂಬ ಕಥೆ. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿನ (ಅಥವಾ ಇನ್ನೂ ಮೊದಲದ್ದೇ ಇರಬಹುದು) ಕಾಶ್ಮೀರದ ಚಿತ್ರಣ ಕೊಡುವ ಈ ಕಥೆ ವಿಶಿಷ್ಟವಾದ್ದು. ನಾಸೀಂ ಬೇಗಂ, ಗಡಿಯ ಬಳಿಯ ಹಳ್ಳಿಯೊಂದರಲ್ಲಿ ಚಹಾ ಮಾರುವ ಪೆಟ್ಟಿಗೆಯಂಗಡಿಯೊಂದನ್ನು ಇಟ್ಟಿರುವ ಇಳಿವಯಸ್ಸಿನ ಮುದುಕಿ. ಈ ಸಮಯದಲ್ಲಿ, ಅವಳ ಅಂಗಡಿಯಲ್ಲಿ ಚಾ ಕುಡಿಯಲು, ಭಾರತದ ಸೈನಿಕರ ಸಮವಸ್ತ್ರ ಧರಿಸಿದ ಐದಾರು ಸೈನಿಕರು ಬರುತ್ತಾರೆ. ಅವರಿಗೆ ಚಹಾ ಮಾಡುತ್ತ, ಅವರ ಮಾತಿನ ಧಾಟಿಯನ್ನು ಕೇಳಿದ ನಾಸೀಮಳಿಗೆ, ಇವರು ಮಾರುವೇಷದಲ್ಲಿರುವ ವಿರೋಧಿ ಪಡೆಯವರು ಎಂದು ಅರ್ಥವಾಗಿಬಿಡುತ್ತೆ. ತ…

ಹರಿ ಸ್ಮರಣೆ

ಇಂದು ಗೋಕುಲಾಷ್ಟಮಿ. ಅದಕ್ಕೇ ಹಿಂದೇ ಕನ್ನಡಿಸಿದ್ದ ಕೆಲವು ಕೃಷ್ಣ ಸ್ತೋತ್ರಗಳನ್ನು ಮತ್ತೆ ಹಾಕಿದ್ದೇನೆ.

ನೀರು ಹರಿಯುವುದು ಕಡಲಿನ ಕಡೆಗೆ
ಬಾನಿಂದ ಬೀಳುವ ಮಳೆಯ ನೀರೆಲ್ಲ ಕಡೆಗೆ ಹರಿವುದು ಕಡಲ ಕಡೆಗೆ
ನೀನಾವ ದೇವನಿಗೆ ಮಣಿವಾಗಲೂ ಅದು ತಲುಪುವುದು ಹರಿಯ ಕಡೆಗೆ!

ಸಂಸ್ಕೃತ ಮೂಲ:
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||


ಕಥೆ ಹೇಳುವ ಪರಿ!
ರಾಮ ಅಂತೊಬಿದ್ದ. ಹುಂ. ಅವನ ಹೆಂಡತಿ ಸೀತೆ. ಹುಂ. ಹುಂ.
ಅಪ್ಪನ ಮಾತಿಗೆ ಪಂಚವಟೀ ದಡದಲ್ಲಿದ್ದಾಗ ರಾವಣ ಅವಳ ಕದ್ದ.
ನಿದ್ದೆ ಬರಲಮ್ಮನ ಕಥೆಯ ಹುಂಗುಟ್ಟುತಿಂತು ಕೇಳುತಿರುವ ಹರಿಯ
"ಲಕ್ಷ್ಮಣಾ ಬಿಲ್ಲೆಲ್ಲಿ ನನಬಿಲ್ಲು" ಎಂಬಾವೇಶದ ಮಾತೆಮ್ಮ ಕಾಯಲಿಂದು

ಸಂಸ್ಕೃತ ಮೂಲ:
ರಾಮೋ ನಾಮ ಬಭೂವ ಹುಂ ತದಬಲಾ ಸೀತೇತಿ ಹುಂ ತಾಂ ಪಿತುಃ
ವಾಚಾ ಪಂಚವಟೀ ತಟೇ ವಿಹರತಃ ತಸ್ಯಾಹರದ್ರಾವಣಃ ||
ನಿದ್ರಾರ್ಥಂ ಜನನೀ ಕಥಾಮಿತಿ ಹರೇಃ ಹುಂಕಾರತಃ ಶ್ರುಣ್ವತಃ
ಸೌಮಿತ್ರೇ ಕ್ವ ಧನುರ್ಧನುರಿತಿ ವ್ಯಗ್ರಾ ಗಿರಃ ಪಾತು ವಃ ||

ದೇವನೊಬ್ಬ ನಾಮ ಹಲವು
ಆವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**

ಸಂಸ್ಕೃತ ಮೂಲ:…