Posts

Showing posts from 2011

ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

’ಹಂಸನಾದ’ ಬ್ಲಾಗೋದುಗರಿಗೆಲ್ಲ  ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ.

ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂ ಸಂಗೀತ ಹಾಸುಹೊಕ್ಕಾಗಿದ್ದರೆ, ಸಂತೋಷ ನೆಮ್ಮದಿಗಳು ಹೆಚ್ಚುತ್ತವೆ ಅನ್ನುವುದು ನನ್ನ ಎಣಿಕೆ.

ವರ್ಣ ಎಂದರೆ ಕರ್ನಾಟಕ ಸಂಗೀತದ ಒಂದು ರಚನಾ ಪ್ರಕಾರ. ಎಲ್ಲರಿಗೂ ಗೊತ್ತಿರುವಂತೆ ವರ್ಣ ಎಂದರೆ ಬಣ್ಣ ಎನ್ನುವುದು ಸಾಮಾನ್ಯಾರ್ಥ. ಆದರೆ ಸಂಗೀತದಲ್ಲಿ ಇದು ಹೇಗೆ ಒಂದು ಹಾಡುವ ರಚನೆಯಾಯಿತು? ಬಹುಶಃ ಒಂದು ರಾಗದ ಬಗೆ ಬಗೆಯ ಬಣ್ಣಗಳನ್ನ ತೋರಿಸೋದರಿಂದಲೇ ಈ   ಹೆಸರು ಬಂದಿರಬೇಕೆಂದು ತೋರುತ್ತೆ.  ಒಂದು ರಾಗದ ಬೇರೆ ಬೇರೆ ಸ್ವರೂಪಗಳನ್ನು ತೋರಿಸುವುದು, ಅದು ಒಳಗೊಳ್ಳುವ  ಬಗೆ ಬಗೆ ವಿನ್ಯಾಸಗಳನ್ನು ತೋರಿಸುವುದು ವರ್ಣಗಳ ಒಂದು ಗುರಿ ಎನ್ನಬಹುದು.

ಈ ರಚನಾಪ್ರಕಾರ ತುಂಬಾ ಹಳೆಯದ್ದೇನಲ್ಲ. ಕರ್ನಾಟಕ ಸಂಗೀತದಲ್ಲಿ ೧೮ ನೇ ಶತಮಾನದಲ್ಲಿ ಹುಟ್ಟಿಕೊಂಡದ್ದು.ರಾಗಭಾವ ವನ್ನು ಹೊಮ್ಮಿಸುವುದು, ಮತ್ತು ತಾನದ ಶೈಲಿಯನ್ನು ಅನುಕರಿಸುವ ತಾನವರ್ಣಗಳು, ಮತ್ತೆ ನೃತ್ಯಗಳಿಗೆ ಹೇಳಿ ಮಾಡಿಸಿದಂತಹ ಪದವರ್ಣಗಳು ಎಂಬ ಎರಡು ರೀತಿಯ ವರ್ಣಗಳು ಚಾಲ್ತಿಯಲ್ಲಿವೆ.

ಮೊದಮೊದಲು ವರ್ಣಗಳನ್ನು ರಚಿಸಿದವರಲ್ಲಿ ನಮ್ಮ ವೀಣೆ ಶೇಷಣ್ಣನವರ ಮನೆತನದ ಪೂರ್ವಜರಾದ ಪಚ್ಚಮಿರಿಯಂ ಆದಿಪ್ಪಯ್ಯ ಪ್ರಮುಖರು. ಅವರ ಭೈರವಿ ರಾಗದ …

ಸಾವಿನ ಕಣಿವೆ

Image
ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:


ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ!

ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು!


ಯುಎಸ್‍ಎ ಯಲ್ಲಿ ಅತಿ ಬಿಸಿಲು ಝಳವಿರುವ, ಅತಿ ತಗ್ಗಾದ (ಸಮುದ್ರ ಮಟ್ಟಕ್ಕಿಂತ ೨೮೨ ಅಡಿ ಕೆಳಗೆ) ಮತ್ತೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ. ಮೇಲಿನ ಪದ್ಯಗಳಿಗೆ ಕಾರಣವಾದ,  ಅಲ್ಲಿನ ಕೆಲ ಚಿತ್ರಗಳು ಇಲ್ಲಿವೆ.

ಚಿತ್ರ ಕೃಪೆ - ನನ್ನ ಸ್ಯಾಮ್ಸಂಗ್ ಗ್ಯಾಲಕ್ಸ್ಜಿ ಫೋನ್-ಹಂಸಾನಂದಿ

ಕೊ: ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರು ನೀಡಿದ ಸಲಹೆಗಳಿಗೆ ಧನ್ಯವಾದಗಳು!

ಕೊ.ಕೊ: Death Valley, California ಬಗ್ಗೆ ಹೆಚ್ಚಿನ ಮಾಹಿತಿ, ವಿಕಿಪೀಡಿಯಾದಲ್ಲಿ

ಚಳಿಗಾಲ

ಇವತ್ತು ’ಚಳಿಗಾಲದ ಮೊದಲ ದಿನ’ - ಅಥವಾ ಉತ್ತರಾಯಣದ ಮೊದಲ ದಿನ ಅಂತ ಬೇಕಾದರೂ ಅನ್ನೋಣ. ಅದಕ್ಕೆ ಸರಿಯಾಗಿ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆಗೆಂದು ಬರೆದ (ಸ್ವಂತ) ಪದ್ಯ, ಅನುವಾದವಲ್ಲ :)  - ಛಂದಸ್ಸಿಗೆ ತಕ್ಕಂತೆ ಬರೆವ ಮೊದಮೊದಲ ಯತ್ನ ಇಲ್ಲಿದೆ:


ಮಳಲುದಂಡೆಯ ಹೊಳೆಯ
ಕುಳಿರುಗಾಳಿಯ ಮೊರೆತ
ಬೆಳಗುತಿಹ ತಾರೆಗಳ ಬಾನ ಚೆಲುವು |
ಸುಳಿವ ಮರೆಸಿದ ರವಿಯು
ಕೆಳೆಯ ಬಯಸುವ ಇರುಳು
ಚಳಿಗಾಲದೊಳಗೆನಿತು ಮುದ ತರುವುವು ||


-ಹಂಸಾನಂದಿ


ಕೊ: ಇದು ಕುಸುಮ ಎಂಬ ಹೆಸರಿನ  ಷಟ್ಪದಿಯಲ್ಲಿದೆ. ಇನ್ನೂ ಹೆಚ್ಚಿನ ಕನ್ನಡ ಛಂದಸ್ಸುಗಳ ತಿಳುವಳಿಕೆಗೆ ಯುಟ್ಯೂಬ್ ನಲ್ಲಿ ಪದ್ಯಪಾನದ ರಾ.ಗಣೇಶ್ ಅವರ ವಿಡಿಯೋಗಳನ್ನ ನೋಡಿ


ಕೊ.ಕೊ: ಈ ದಿವಸವನ್ನು ಅಮೆರಿಕೆಯಲ್ಲಿ "The first day of winter" ಎಂದು ಕರೆಯುವ ರೂಢಿ ಇದೆ. ಹಾಗಾಗಿ ಚಳಿಗಾಲದ ಮೊದಲ ದಿನ ಎಂದಿದ್ದೇನೆ. ಮೇಲಿರುವ ಕೊಂಡಿಯಲ್ಲಿ ಅದರ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ಇದೆ,


ಕೊ.ಕೊ.ಕೊ: ನಾನು ಈಗ ಇರುವಲ್ಲಿ ಚಳಿಗಾಲವೇ ಮಳೆಗಾಲ! ಹಾಗಾಗಿ”ಬೆಳಗುತಿಹ ತಾರೆಗಳ ಬಾನ ಚೆಲುವು’ ಸವಿಯೋದು ಕಷ್ಟವೇ!  ಆದರೆ ಕರ್ನಾಟಕದಲ್ಲಿ ಆಕಾಶವನ್ನು ನೋಡೋಕೆ ಬಹಳ ಒಳ್ಳೇ ಕಾಲ. ಹಾಗಿದ್ಮೇಲೆ ತಡ ಯಾಕೆ? ಹೊರಡಿ ಹೊರಕ್ಕೆ!

ಬುವಿಯಲ್ಲಿ ಅಮೃತ

ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿಮುಂಗೈಯ ಈ ಚೆಲುವೆ ಹಿಡಿದೆಳೆವಳು;ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳಮುತ್ತಿಟ್ಟವನಿಗಿಲ್ಲೆ ಅಮೃತವಿಹುದು; ಇದನೊಂದು ತಿಳಿಯದಾ ತಿಳಿಗೇಡಿಗಳು ತಾನೆ ಕಡಲ ಸುಮ್ಮನೆ ಕಡೆದ ದೇವತೆಗಳು! ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ ಪದ್ಯ-36 ):ಸಂದಷ್ಟಾಧರಪಲ್ಲವಾ ಸಚಕಿತಮ್ ಹಸ್ತಾಗ್ರಮಾಧುನ್ವತೀಮಾಮಾಮುಂಚಶಠೇತಿ ಕೋಪವಚನೈರಾನರ್ತಿತಭ್ರೂಲತಾ |ಶೀತ್ಕಾರಾಂಚಿತಲೋಚನಾಸರಭಸಂ ಯೈಶ್ಚುಂಬಿತಾಮಾನಿನೀಪ್ರಾಪ್ತಂತೈರಮೃತಂ ಶ್ರಮಾಯಮಥಿತೋ ಮೂಢೈಃ ಸುರೈಃ ಸಾಗರಃ ||-ಹಂಸಾನಂದಿಕೊ: ಅನುವಾದದಲ್ಲಿ ನೆರವಾದ ಗೆಳೆಯರಾದ ಮಂಜುನಾಥ ಕೆ.ಎಸ್. ಅವರಿಗೆ ನಾನು ಆಭಾರಿ.

ಹಬ್ಬಗಳ ಲೆಕ್ಕಾಚಾರ

Image
ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ -  ಇದು ಹಬ್ಬದ ದಿನವೇ ಹಬ್ಬ ಆಚರಿಸುವವರ ಬಗ್ಗೆ - ಅನುಕೂಲಕ್ಕೆಂದು ವೀಕೆಂಡ್ ಹಬ್ಬ ಆಚರಿಸುವರ ಬಗ್ಗೆ ಅಲ್ಲ ಅನ್ನೋದನ್ನ ಮೊದಲೇ ಸ್ಪಷ್ಟ ಪಡಿಸಿಬಿಡ್ತೇನೆ!
ನಮ್ಮ ಮನೆಗಳಲ್ಲಿ ಮಾಡುವ ಯುಗಾದಿಹಬ್ಬ, ದೀಪಾವಳಿ ಹಬ್ಬ, ಗಣೇಶನ ಹಬ್ಬ, ಬೊಂಬೆ ಹಬ್ಬ ಹೀಗೆ ಹಲವು ದೊಡ್ಡ ಹಬ್ಬಗಳು ಚಂದ್ರ ನಮಗೆ ಹೇಗೆ ಕಾಣುತ್ತಿದ್ದಾನೆ ಎಂಬ ಲೆಕ್ಕಾಚಾರದ ಮೇಲೆಯೇ ನಿಂತಿವೆ. ಚಂದ್ರಮಾನ ಲೆಕ್ಕಾಚಾರಗಳಲ್ಲಿ ಒಂದು ದಿನ ಪಾಡ್ಯ ಮುಗಿದು, ಚಂದ್ರ ಬಿದಿಗೆಗೆ ಹೋದರೆ, ಆ ದಿನವೆಲ್ಲ ಹಬ್ಬದ ಆಚರಣೆಗೆ ಪಾಡ್ಯ ಎಂಬ ಲೆಕ್ಕ. (ನನ್ನ ತಿಳುವಳಿಕೆಯ ಮಟ್ಟಿಗೆ ಬರೆದಿರುವೆ - ತಪ್ಪಿದ್ದರೆ, ತಿಳಿದವರು ತಿದ್ದಬಹುದು). ಒಂದು ವೇಳೆ, ಪಾಡ್ಯ ಬೆಳಗ್ಗೆ ಹತ್ತು ಗಂಟೆಗೇ ಮುಗಿದು ಹೋದರೂ ಆ ದಿನವೆಲ್ಲ ಪಾಡ್ಯ ಅಂತಲೇ ಲೆಕ್ಕ ಹಬ್ಬ ಮಾಡೋದಿಕ್ಕೆ. ಪಾಡ್ಯ ಬಿದಿಗೆ ಎಲ್ಲ ಚಂದ್ರನ ಎಷ್ಟು ಭಾಗ ಕಾಣುತ್ತೆ ಅನ್ನೋದರ ಮೇಲೆ ಇರೋದ್ರಿಂದ, ಅದು ನೇರವಾಗಿ ಗಣಿತದ ಲೆಕ್ಕ ಅಷ್ಟೇ. ಅದರಲ್ಲಿನ್ನೇನೂ ಅದಕ್ಕಿಂತ ಆಳವಾದ ಮಾತಿಲ್ಲ.

ಆದರೆ, ಕ್ಯಾಲಿಫೋರ್ನಿಯಾಗಿಂತ ಸುಮಾರು ಅರೆದಿನ ಮುಂದೆ ಇರುವಂತಹ ಕರ್ನಾಟಕದಲ್ಲಿ ಯಾಕೆ ಪಾಡ್ಯ ಬಿದಿಗೆ ತಡವ…

ಪುಳಿಯೋಗರೆ ಮತ್ತು ಬಿಸಿಬೇಳೇ ಹುಳಿಯನ್ನ ....

Image
ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ ಮಾಡೋಹಾಗಿದ್ರೆ ನಿಮಗೆ ಹೇಳೋದಂತೂ ಮರೆಯೋದಿಲ್ಲ! ಈಗ ಈ ಹಳೇ ಒಂದು ವಿಷಯದ ನೆನಪು ನನ್ನ ತಲೆಯೊಳಗೆ ಹೊಕ್ಕಿತ್ತು. ಅದಕ್ಕೇ ಅಂತಾನೇ ಈ ಪುಳಿಯೋಗರೆ ಮತ್ತೆ ಬಿಸಿಬೇಳೆ ಹುಳಿಯನ್ನದ ಪುರಾಣ ಹೇಳೋಕೆ ಹೊರಟಿದ್ದು.


ನನಗಂತೂ ಅನ್ನವಿಲ್ಲದೇ ಒಂದು ಇದ್ದರೂ ಏನೋ ಕಳೆದುಕೊಂಡ ಹಾಗಾಗುತ್ತೆ. ದಿನಾಲೂ ತಿನ್ನೋ ಆ ಅನ್ನಕ್ಕೆ ಅಷ್ಟು ಸತ್ವ ಇರುತ್ತೆ ಅಂತ ಗೊತ್ತಾಗಿದ್ದು ನಾನು ಮಹಾರಾಷ್ಟ್ರದಲ್ಲಿ ಕೆಲಸ ಮಾಡಲು ಹೋದಾಗಲೇ. ಇನ್ನೂ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಯಾವುದೋ ಒಂದು ಹಾಸ್ಟೆಲ್ ನಲ್ಲಿ ವಾಸ, ಮತ್ತೆ ಒಂದು ಮೆಸ್ ನಲ್ಲಿ ಊಟ. ಆ ಮೆಸ್ ನಡೆಸುವಾಕೆಯಂತೂ ಚಪಾತಿ ಪಲ್ಯವನ್ನು ಬಡಿಸುವಾಗ ಅಷ್ಟೇನೂ ಹಿಂದೆಗೆಯದಿದ್ದರೂ, ಅನ್ನ ಬಡಿಸಲು ಮಾತ್ರ ಕಪಿಮುಷ್ಟಿಯೇ ಸರಿ! ಚಮಚಾಗಳ ಲೆಕ್ಕದಲ್ಲಿ ಅನ್ನ ಹಾಕಿದರೆ ದಿನಾ ಅನ್ನ ತಿನ್ನುವಂತಹವರಿಗೆ ಅದೆಷ್ಟು ಹಿಂಸೆ ಆಗಬಹುದು ಅಂತ ಗೊತ್ತಾಗಿದ್ದೇ ಆಗ. ಒಂದು ೩-೪ ವಾರ ಗಳಲ್ಲಿ ಮನೆ ಬಾಡಿಗೆಗೆ ಸಿಕ್ಕಿ, ನಾನು ನನ್ನ ಕೈಯಡುಗೆಯನ್ನೇ ತಿನ್ನುವಂತಾದ ಮೇಲೆ ಬದುಕಿದೆ.


ಒಂದೆರಡು ತಿಂಗಳಲ್ಲಿ ಬರೀ ಬದುಕುವಷ್ಟೇ ಅಲ್ಲದೆ ಚೆನ್ನಾಗೇ ಬದುಕುವಷ್ಟೂ ಅಡುಗೆ ಕೈ ಹತ್ತಿತು ಅನ್ನಿ. ನನ್ನ ಕೈ ರುಚಿ ನನ್ನ ಜೊತೆ ಕೆಲಸ ಮಾಡುತ್ತಿದ್ದವರಿಗೂ ಹತ್ತಿ, ಸಂಜೆ ಭೇಟ…

ಗುಪ್ತಗಾಮಿನಿ ಸರಸ್ವತೀ ನದಿಯ ಹುಡುಕಾಟದಲ್ಲಿ...

Image
ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ ಅಲ್ಲದೆ, ಬರಿಗಣ್ಣಿಗೆ ಕಾಣದ ಸರಸ್ವತೀ ಕೂಡ ಅಲ್ಲೇ ಸೇರುತ್ತೆ. ಅದು ಗುಪ್ತ ಗಾಮಿನಿ, ಹಾಗಾಗಿ ಇದಕ್ಕೆ ತ್ರಿವೇಣಿ ಸಂಗಮ ಅಂತ ಹೆಸರು (ವೇಣಿ = ಜಡೆ. ಜಡೆಗೆ ಮೂರು ಕಾಲುಗಳಿರುವುದರಿಂದ ಈ ಹೆಸರು ಇರಬೇಕು)ಅಂತೆಲ್ಲ ಅವರು ಹೇಳುತ್ತಿದ್ದು ನೆನಪಿದೆ.


ಈ ರೀತಿ ಎಷ್ಟೋ ಕಡೆಗಳಲ್ಲಿ ಎರಡು ನದಿಗಳು ಸೇರುವ ಕಡೆ ಮೂರನೆಯ ಗುಪ್ತಗಾಮಿನಿಯನ್ನು ಹೇಳುವುದನ್ನು ನೋಡಿರಬಹುದು. ಉದಾಹರಣೆಗೆ ನಮ್ಮ ಕರ್ನಾಟಕದಲ್ಲೇ ಕೊಡಗಿನ ಭಾಗಮಂಡಲದಲ್ಲಿ ಕಾವೇರಿ ಕನ್ನಿಕೆ ಕೂಡುವಲ್ಲಿ ಅವುಗಳ ಜೊತೆಯಲ್ಲೇ ಕಣ್ಣಿಗೆ ಕಾಣದ ಸುಜ್ಯೋತಿ. ಮತ್ತೆ ತಿರುಮಕೂಡಲು ನರಸೀಪುರದಲ್ಲಿ (ತಿರು=ಪವಿತ್ರವಾದ ಮುಕ್ಕೂಡಲ್ = ಮೂರು ಹೊಳೆ ಸೇರುವೆಡೆ), ಕಾವೇರಿ ಕಪಿಲೆಯರ ಜೊತೆ ಅದೃಶ್ಯವಾದ ಸ್ಫಟಿಕ(ಸರೋವರ), ಇವುಗಳನ್ನು ನೆನೆಸಿಕೊಳ್ಳಬಹುದು. ಪಕ್ಕದ ತಮಿಳುನಾಡಿನ ಈರೋಡಿನಲ್ಲಿ ಕಾವೇರಿ ಭವಾನಿ ಸಂಗಮದಲ್ಲೇ ಕಣ್ಣಿಗೆ ಕಾಣದ ಗುಪ್ತಗಾಮಿನಿ ಅಮುದಾ ಇದೆಯೆಂಬ ನಂಬಿಕೆ ಇದೆಯಂತೆ. ಇವುಗಳಲ್ಲದೇ ಬೇರೆ ಕಡೆಗಳಲ್ಲೂ ಇರಬಹುದು ಅನ್ನಿ.

 ಎಲ್ಲಿಂದಲೋ ಎಲ್ಲಿಗೋ ಹೋದೆ. ಅಜ್ಜಿಯನ್ನ ಕಣ್ಣಿಗೆ ಕಾಣದೆ ನದ…

ಬೆಂಗಳೂರು v/s Bangalore

Image
ಅದೆಲ್ಲೋ  ಇರುವ ಸ್ಟೆಲೇರಿಯಂ ನವರಿಗೆ  ಬೆಂಗಳೂರನ್ನ ’ಬೆಂಗಳೂರು’ ಅಂತ ಬರೆಯೋಕೆ ಗೊತ್ತಿದೆ:

ಆದ್ರೆ  ಬೆಂಗಳೂರಿನಲ್ಲೇ ಇರುವ ಡೆಕನ್ ಹೆರಾಲ್ಡ್ ನವರಿಗೆ ಗೊತ್ತಿಲ್ಲ!


ಇದಕ್ಕೆ ಏನು ಹೇಳೋಣ?
-ಹಂಸಾನಂದಿ

ದಿಟದ ಒಡವೆಗಳು

Image
ಕೈಗಳಿಗೆ ದಾನವದು ಬಲುಸೊಗಸಿನಾ  ಒಡವೆ
ಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿ
ಮತ್ತೆ ಕಿವಿಗಳಿಗೊಡವೆ  ಕೇಳುವರಿವೆಂಬುವುದೆ
ಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?
ಸಂಸ್ಕೃತ ಮೂಲ:

ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂ
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ ಭೂಷಣೈಃ ಕಿಂ ಪ್ರಯೋಜನಮ್ ||

-ಹಂಸಾನಂದಿ

ಚಿತ್ರ  ಕೃಪೆ:  ಇಲ್ಲಿಂದ, ಸ್ವಲ್ಪ ಬಣ್ಣ ಬದಲಾಯಿಸಿದೆ, ಅಷ್ಟೇ!

ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು...

ಮಗುವೆಂದು ತಿಳಿಯುತ್ತ
ಮುತ್ತಿಟ್ಟ ಗೋಪಿಯರ
ತುಟಿಕಂಪ  ಸವಿಯುವನು ಈತ!

ಮಗುವೆಂದು ಅಪ್ಪಿದರೆ
ಬರಸೆಳೆದು ಕುತ್ತಿಗೆಯ
ಬಣ್ಣ ಕೆಂಪೇರಿಸಿದ ಈತ!

ಮಗುವೆಂದು  ಮುದ್ದಿನಲಿ
ತೊಡೆಮೇಲೆ ಏರಿಸಲು
ಮುಟ್ಟುತಲೆ ನಾಚಿಸುವ ಈತ!

ಕೇಡಿಗನು ಈ ಮಗುವೆ
ಕಳುಹಿಸಲಿ ಬಲುದೂರ
ನಮ್ಮೆಲ್ಲ  ಕೇಡುಗಳ ಈಗ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-68 ):

ಓಷ್ಟಂ ಜಿಘ್ರನ್ ಶಿಶುರಿತಿ ಧಿಯಾ ಚುಂಬಿತೋ ವಲ್ಲವೀಭಿಃ
ಕಂಠಂ ಗೃಹ್ಣನ್ ಅರುಣಿತ ಪದಂ ಗಾಢಮಾಲಿಂಗಿತಾಂಗಃ |
ದೋಷ್ಣಾ ಲಜ್ಜಾಪದಮಭಿಮೃಶನ್  ಅಂಕಮಾರೋಪಿತಾತ್ಮಾ
ಧೂರ್ತಸ್ವಾಮೀ ಹರತು ದುರಿತಂ ದೂರತೋ ಬಾಲಕೃಷ್ಣಃ ||

-ಹಂಸಾನಂದಿ

ಕೊ: ಹೊಗಳಬೇಕಾದವರನ್ನು ಮೇಲ್ನೋಟಕ್ಕೆ ಬೈಯುತ್ತ ಹೊಗಳುವುದಕ್ಕೆ "ನಿಂದಾ ಸ್ತುತಿ" ಎಂದು ಹೆಸರು. ಇಂತಹದ್ದರಲ್ಲಿ ಹರಿದಾಸರು ಪ್ರವೀಣರು. ಪುರಂದರದಾಸರು, ಕನಕದಾಸರು ಮೊದಲಾದವರು ಹಲವಾರು ದೇವರನಾಮಗಳನ್ನು ನಿಂದಾಸ್ತುತಿಯ ರೂಪದಲ್ಲಿ ರಚಿಸಿರುವುದು ತಿಳಿದಿರುವ ಸಂಗತಿಯೇ.

ಕೊ.ಕೊ: ’ಮೆಲ್ಲ ಮೆಲ್ಲನೆ ಬಂದನೆ’  ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ . ಅದರಲ್ಲಿ ಬರುವ  "ಹಾಲು ಮಾರಲು ಹೋದರೆ ನಿನ್ನಯ ಕಂದ ಶಾಲೆಯ ಸೆಳೆದುಕೊಂಡು ಪೋದನೆ" , "ಶಶಿಮುಖಿಯರನೆಲ್ಲ ಬಸಿರು ಮಾಡಿದನೀತ" ಮೊದಲಾದ ಸಾಲುಗಳಲ್ಲಿ ಕಂಡುಬರುವ ಭಾವವೇ ಈ ಪದ್ಯದಲ್ಲೂ ನನಗೆ ಕಂಡಿದ್ದರಿಂದ ಆ ರಚನೆಯ ಅನುಪಲ್ಲವಿಯ ಸಾಲನ್ನೇ ಇಲ್ಲಿ ತಲೆಬರಹವಾಗಿ ಕೊಟ್ಟಿದ್ದೇನೆ.

ಕೊ.ಕೊ…

’ಹಂಸನಾದ’ಕ್ಕೆ ಮುನ್ನುಡಿ

Image
ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!

ಆಸಕ್ತರಿಗೆ:

ನನ್ನ ಪುಸ್ತಕ ಹಂಸನಾದ  ಆಕೃತಿ ಆನ್ಲೈನ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ. ಕೊಂಡು ಓದಿ. ಅಥವಾ,  ನಿಮ್ಮ ಆತ್ಮೀಯರಲ್ಲಿ ಯಾರಿಗಾದರೂ ಈ ಸಾಹಿತ್ಯಪ್ರಕಾರ ಹಿಡಿಸುವುದಿದ್ದರೆ, ಅವರಿಗೆ ಉಡುಗೊರೆಯಾಗಿ ಕೊಡಿ!

ಓದಿದವರ ಅನಿಸಿಕೆಗಳನ್ನು ಕೇಳಲು ನಾನು ಕಾತರನಾಗಿದ್ದೇನೆ.

-ಹಂಸಾನಂದಿ

ಬಗೆ ಬಗೆಯ ಜನರು

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;
ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.
ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;
ಕಾರಣವಿರದೆಯೇ ಪರರ ಕೆಡುಕನು ಬಯಸುವರ ಕರೆವುದೇನೆಂದರಿಯೆನು!

ಸಂಸ್ಕೃತ ಮೂಲ ( ಭರ್ತೃಹರಿಯ ನೀತಿಶತಕದಿಂದ):

ಏತೇ ಸತ್ಪುರುಷಾಃ ಪರಾರ್ಥಘಟಕಾಃ ಸ್ವಾರ್ಥಂ ಪರಿತ್ಯಜ್ಯ ಯೇ
ಸಾಮಾನ್ಯಾಸ್ತು ಪರಾರ್ಥಮುದ್ಯಮಭೃತಃ ಸ್ವಾರ್ಥಾವಿರೋಧೇನ ಯೇ|
ತೇಮೀ ಮಾನವರಾಕ್ಷಸಾಃ ಪರಹಿತಂ ಸ್ವಾರ್ಥಯ ನಿಘ್ನಂತಿ ಯೇ
ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇ ನ ಜಾನೀಮಹೇ ||

-ಹಂಸಾನಂದಿ

ಹಂಬಲ

Image
ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ
ಬಿದಿರಾಗಿ ಯಮುನೆಯ ದಡದ ಮೆಳೆಯೊಳಗೆ;
ಆ  ಬಿದಿರು ಕೊಳಲಾಗಿ ಪಡೆದರೂ ಪಡೆದೀತು
ಗೋಪಕುವರನ ರನ್ನ ತುಟಿಗೊತ್ತುವಾ ಸೊಗಸು!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ೨-೯):

ಅಪಿ ಜನುಷಿ ಪರಸ್ಮಿನ್ನಾತ್ತಪುಣ್ಯೋ ಭವೇಯಂ
ತಟ ಭುವಿ ಯಮುನಾಯಾಸ್ತಾದೃಶೋ ವಂಶನಾಳಃ |
ಅನುಭವತಿ ಯ ಏಷಶ್ಶ್ರೀಮದಾಭೀರ ಸೂನೋಃ
ಅಧರಮಣಿ ಸಮೀಪನ್ಯಾಸಧನ್ಯಾಮವಸ್ಥಾಂ ||

-ಹಂಸಾನಂದಿ

ಕೊ: ಅನುವಾದದಲ್ಲಿ  ಸಲಹೆ ನೀಡಿದ, ಮತ್ತೆ ಅವರು ತೆಗೆದ ಚಿತ್ರವನ್ನು ಬಳಸಲು ಸಮ್ಮತಿಸಿದ ಗೆಳೆಯ ಶ್ರೀನಿವಾಸ್ ಪಿ ಎಸ್ ಅವರಿಗೆ ನಾನು ಆಭಾರಿ.

ನಂದನ ಕಂದನಿಗೆ

Image
ಪೊಂಗೊಳಲ ರಂಧ್ರಗಳ
ಚೆಂಬೆರಳ ತುದಿಗಳಲಿ
ಮುಚ್ಚುತಾ ತೆರೆಯುತಿಹನ

ತಿರುತಿರುಗಿ ಮರಮರಳಿ
ತನ್ನುಸಿರ ಗಾಳಿಯನು
ಕೊಳಲಿನಲಿ ತುಂಬುವವನ

ಅರಳಿದ ತಾವರೆಯ
ಹೋಲುವಾ ಕಂಗಳಿಹ
ಚೆಂದದಾ ನಿಲುವಿನವನ

ವಂದಿಸುವೆ ನಾನೀಗ
ಬೃಂದಾವನದಿ ನಲಿವ
ನಂದಗೋಪನ ಕಂದನ


ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):
ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ
ವಾರಂ ವಾರಂ ವದನಮರುತಾ ವೇಣುಮಾಪೂರಯಂತಂ | ವ್ಯತ್ಯಸ್ತ್ಯಾಂಘ್ರಿಂ ವಿಕಚಕಮಲಚ್ಛಾಯವಿಸ್ತಾರ ನೇತ್ರಂ ವಂದೇ ವೃಂದಾವನಸುಚರಿತಂ ನಂದಗೋಪಾಲ ಸೂನುಂ ||

-ಹಂಸಾನಂದಿ

ಚಿತ್ರ ಕೃಪೆ: ಅನೂಪ್ ಹುಲ್ಲೇನ ಹಳ್ಳಿ ಅವರ ಸುಂದರ ಫೋಟೋ ಬ್ಲಾಗ್, ಅನುಬಿಂಬ್ ; ಸೋಮನಾಥಪುರದ ಹೊಯ್ಸಳ ಶೈಲಿಯ ಗೋಪಾಲ ಕೃಷ್ಣನ ವಿಗ್ರಹ. ಪದ್ಯದಲ್ಲಿ ಹೇಳಿರುವ "ವ್ಯತ್ಯಸ್ಥ್ಯಾಂಘ್ರಿಂ" ಅನ್ನುವುದಕ್ಕೆ ಈ ವಿಗ್ರಹ ಒಳ್ಳೇ ಉದಾಹರಣೆಯೆನಿಸಿತು.

ಕೊ: ಇದು ಕೃಷ್ಣಕರ್ಣಾಮೃತದ ಐದನೇ ಪದ್ಯ. ಈ ಮೊದಲು ಮಾಡಿದ್ದ ಈ ಅನುವಾದವು ಈ ಪದ್ಯದ ನಂತರ ಬರುವ ಪದ್ಯ.

ಆಸೆ

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :

ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||

-ಹಂಸಾನಂದಿ

ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

ಕೊ.ಕೊ: ಕನ್ನಡ ಚಿತ್ರ ’ಮನಸಾರೆ’ ನೋಡಿದ್ದಿರಾ? ಅಲ್ಲಿ ಬರುವ ಒಂದು ಮುಖ್ಯವಾದ ಸನ್ನಿವೇಶ (ನಾಯಕ ನ ಪಕ್ಕದ ಮನೆಯ ಹುಡುಗಿಯ ಮದುವೆಯ ಸಮಯದಲ್ಲಿ ಬರುತ್ತೆ), ಅಲ್ಲಿ ಬರುವ ಮಾತುಗಳು ನೇರವಾಗಿ ಭರ್ತೃಹರಿಯ "ಯಂ ಚಿಂತಯಾಮಿ ಸತತಮ್ ಮಯಿ ಸಾ ವಿರಕ್ತಾ" ಎಂದು ಮೊದಲಾಗುವ ಶ್ಲೋಕದ ಅಚ್ಚು. ಆ ಸನ್ನಿವೇಶವನ್ನು ಬರೆಯುವಾಗ ಯೋಗರಾಜ ಭಟ್ಟರು ಭರ್ತೃಹರಿಯಿಂದ ಚೆನ್ನಾಗೇ ಪ್ರೇರಿತರಾಗಿದ್ದಾರೆ ಎಂದರೆ ಅಡ್ಡಿಯಿಲ್ಲ!

ಕೊ.ಕೊ.ಕೊ: ಸಂಸ್ಕೃತ ಕಾವ್ಯಗಳಿಂದ ಸಾಮಾಜಿಕ ಚಿತ್ರಗಳ ನಿರ್ದೇಶಕರು ಪ್ರೇರಿತರಾಗಿರುವುದರಲ್ಲಿ ಯೋಗರಾಜ ಭಟ್ಟರೇನೂ ಮೊದಲಿಗರೇನಲ್ಲ. ಕಾಲು ಶತಮಾನ ಮುನ್ನವೇ ಬಂದಿದ್ದ ತಮಿಳಿನ ’ಅಪೂರ್ವ ರಾಗಂಗಳ್’, ಅದರ ಹಿಂದೀ ಅವತರಣಿಕೆ ’ಏಕ್ ನಯೀ ಪಹೇಲಿ’ ಇದರಲ್ಲಿ ವೇತಾಳಪಂಚವಿ…

ಮಳೆಗಾಲದ ಅಗಲಿಕೆ

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;
ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!
ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ ಬಿದ್ದ ಸೊಗಸಿನ ಕಣ್ಣೆವೆಯ ಮುಗುದೆಯರು ನಲ್ಲನಗಲಿಕೆಯಲಿ?

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):
ಇತೋ ವಿದ್ಯುದ್ವಲ್ಲೀ ವಿಲಸಿತಂ ಇತಃ ಕೇತಕೀತರೋಃ ಸ್ಫುರನ್ಗಂಧಃ ಪ್ರೋದ್ಯಜ್ಜಲದ ನಿನದ ಸ್ಫೂರ್ಜಿತಂ ಇತಃ | ಇತಃ ಕೇಕೀಕ್ರೀಡಾ ಕಲಕಲರವಃ ಪಕ್ಷ್ಮಲದೃಶಾಂ ಕಥಂ ಯಾಸ್ಯಂತ್ಯೇತೇ ವಿರಹ ದಿವಸಾಃ ಸಂಭೃತರಸಾಃ ||
-ಹಂಸಾನಂದಿ
ಕೊ:  ಮೂಲದಲ್ಲಿ  ಒಂದೂವರೆ ಪಾದದಲ್ಲಿರುವ ಅಂಶವನ್ನು ಅನುವಾದದಲ್ಲಿ ಎರಡು ಸಾಲಾಗಿ ಹಿಗ್ಗಿಸಿರುವುದರಿಂದ, ಅಲ್ಲಿ ಇಲ್ಲದ ಕೆಲವು ಪದಗಳು ಬಂದಿವೆಯಾದರೂ, ಅದು ಅರ್ಥಕ್ಕೆ ಪೂರಕವಾಗಿದೆಯೆಂದು ಹಾಗೇ ಉಳಿಸಿದೆ

ಹುಬ್ಬೆಂಬ ಬಿಲ್ಲಿನ ಚುರುಕು ಬಾಣಗಳು

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  !


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :

ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||


-ಹಂಸಾನಂದಿ

ಕೊ. ಹಿತೋಪದೇಶದಲ್ಲೂ ಇದೇ ಪದ್ಯದ ಪಾಠಾಂತರವೊಂದು ಇರುವಂತೆ ತೋರುತ್ತದೆ.

ಕೊ.ಕೊ:  "ಶ್ರವಣಪಥಗತಾ ನೀಲ ಪಕ್ಷ್ಮಾಣ" ಮೊದಲಾದ ಪದಪುಂಜಗಳಿಗೆ ಪ್ರತಿಪದಾರ್ಥವಿಲ್ಲದಿದ್ದರೂ, ನಡಿಗೆ ಸ್ವಲ್ಪ ಎಡವುತ್ತಿದ್ದರೂ,  ಪದ್ಯದ ಭಾವವನ್ನು ಹಿಡಿದಿಡುವ ಪ್ರಯತ್ನವಿಲ್ಲಿದೆ.

ಇವಳದೆಂಥ ಇನಿಯೆ?

ಬೇಗುದಿ ತರುವಳು ನೆನಪಿನಲೆ   ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ? 

ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):
ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ | ಸ್ಪೃಷ್ಟಾ ಭವತಿ ಮೋಹಾಯ ಸಾ ನಾಮ ದಯಿತಾ ಕಥಮ್ ||
-ಹಂಸಾನಂದಿ

ಹಾತೊರೆತ


ಕಿವಿಯಲವನ ಹೆಸರು ಬಿದ್ದರೂ
ಮೈ ಮಿಂಚಾಡುವುದು ನವಿರೆದ್ದು;
ಕಂಡರವನ ಮೊಗಚಂದಿರವು
ಚಂದ್ರಶಿಲೆಯಂತೆ ಕರಗುವುದು!

ಇನಿಯ ಬಳಿಬಂದೆನ್ನ ಕೊರಳನು
ಅವನ ತೋಳಲಿ ಸೆಳೆದು ಅಪ್ಪಲು
ಒಡೆದ ಈ ಮನಕುಂಟು ತಲ್ಲಣ
ತಿರುಗಿ ಪೆಡಸಾದೇನೆಂಬ ಕಳವಳ

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ)

ಶ್ರುತ್ವಾ ನಾಮಾಪಿ ಯಸ್ಯ ಸ್ಫುಟಘನಪುಲಕಂ ಜಾಯತೇಂSಗಂ ಸಮಂತಾತ್
ದೃಷ್ಟ್ವಾ ಯಸ್ಯಾನನೇಂದುಂ ಭವತಿ ವಪುರಿದಂ ಚಂದ್ರಕಾಂತಾನುಕಾರಿ |
ತಸ್ಮಿನ್ನಾಗತ್ಯ ಕಂಠಗ್ರಹಣಸರಭಸಸ್ಥಾಯಿನಿ ಪ್ರಾಣನಾಥೇ
ಭಗ್ನಾ ಮನಸ್ಯ ಚಿಂತಾ ಭವತಿ ಮಯಿ ಪುನರ್ ವಜ್ರಮಯ್ಯಾಮ್ ಕದಾ ನು ||

श्रुत्वा नामापि यस्य स्फुटघनपुलकं जायतेऽङ्गं समन्तात् दृष्ट्वा यस्याननेन्दुं भवति वपुरिदं चन्द्रकान्तानुकारि  । तस्मिन्नागत्य कण्ठग्रहणसरभसस्थायिनि प्राणनाथे भग्ना मानस्य चिन्ता भवति मम पुनर्वज्रमय्याः कदा नु || 
-ಹಂಸಾನಂದಿ ಕೊ: ಮೂರನೇ ಸಾಲಿಗೆ "ತಸ್ಮಿನ್ನಾಗತ್ಯ ಕಂಠಗ್ರಹನಿಕಟ ಪದಸ್ಥಾಯಿನಿ ಪ್ರಾಣನಾಥೇ" ಎಂಬ ಪಾಠಾಂತರವಿರುವಂತೆ ತೋರುತ್ತದೆ.

ಕೊ.ಕೊ: ಚಂದ್ರಶಿಲೆ (Moonstone) ಎಂಬ ಖನಿಜವು ಚಂದ್ರನ ಬೆಳಕಲ್ಲಿ ತೇವಗೊಳ್ಳುತ್ತದೆ, ಮೃದುವಾಗುತ್ತದೆ ಎಂಬುದೊಂದು ಕವಿಸಮಯ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸತ್ಯ ಎನ್ನುವುದು ನನಗೆ ಗೊತ್ತಿಲ್ಲ!

ಕೊ.ಕೊ.ಕೊ: ಕೊನೆಯ ಸಾಲಿನಲ್ಲಿರುವ "ಭಗ್ನಾ ಮನಸ್ಯ ಚಿಂತಾ" ಎಂಬ ಮಾತುಗಳು, ಯಾವುದೋ ಕಾ…

ದೊಣ್ಣೆ ಹಿಡಿಯದ ದೇವರು

ಆವ ಕಾಯ್ವ ಗೊಲ್ಲನಂತೆ
ದೈವ ಕೋಲನು ಹಿಡಿಯದು ;
ಯಾವನ ಕಾಪಿಡಲು ಬೇಕೋ
ಅವಗೆ ಬುದ್ಧಿಯ ಈವುದು!

ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತಮ್||

-ಹಂಸಾನಂದಿ

ಕೊ: ಆವು = ಹಸು; ಆಕಳು ಎಂಬ ಬಹುವಚನವನ್ನು ನೆನೆಸಿಕೊಳ್ಳಿ

ಕೊ.ಕೊ: ಸಂಸ್ಕೃತದಲ್ಲಿ ಪಶು ಎಂದರೆ ಯಾವ ಪ್ರಾಣಿಗೆ ಬೇಕಾದರೂ ಹೇಳಬಹುದು. ಇಲ್ಲಿ ನಾನು ಬಳಸಿದ "ಆವು" ಪದದಿಂದ ಅದರ ಹರಹು ಕಡಿಮೆ ಆಗಿರಬಹುದೆನಿಸಿದರೂ, ಅರ್ಥಕ್ಕೆ ಅಂತಹದ್ದೇನೂ ಅಡ್ಡಿ ಬಂದಿಲ್ಲ ಎಂದು ಭಾವಿಸಿರುವೆ.

ಬದುಕುವ ದಾರಿ

ವಿಷವಿರದ ಹಾವಾದರೂ
ಹಿರಿದಾಗಿ ಹೆಡೆ ಎತ್ತಲಿ;
ವಿಷವು ಇಹುದೋ ಇಲ್ಲವೋ
ಹಗೆಯ ಹೆದರಿಸಿ ಗೆಲ್ಲಲಿ ;

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):

ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |
ವಿಷಮಸ್ತು ನ ಚಾಪ್ಯಸ್ತು ಫಟಾಟೋಪೋ ಭಯಂಕರಃ ||

-ಹಂಸಾನಂದಿ

ಕೊ: ಚಾಣಕ್ಯ ನೀತಿಯನ್ನು ಬರೆದ ಚಾಣಕ್ಯ ಪಂಡಿತನು ಚಂದ್ರಗುಪ್ತನ ಗುರುವಾದ, ಅರ್ಥಶಾಸ್ತ್ರವನ್ನು ಬರೆದ ಕೌಟಲ್ಯನೇ ಎಂದು ಒಂದು ಮತ. ಈ ಚಾಣಕ್ಯ ಪಂಡಿತ ಬೇರೊಬ್ಬ ನಂತರ ಬಂದ ಕವಿ ಎಂಬುದು ಇನ್ನೊಂದು - ಹೀಗೆ ಎರಡೂ ಅಭಿಪ್ರಾಯಗಳು ಚಲಾವಣೆಯಲ್ಲಿವೆ.

ಹಣೆಬರಹ

ಒಲವು ತುಂಬಿದ ಸಂಜೆ ಹೆಣ್ಣಿನ
ಕಣ್ಣ ಮುಂದೆ ಇನಿಯ ನೇಸರು;
ಅಯ್ಯೋ ಹಣೆಬರಹವಿದೆಯಲ್ಲ
ಒಟ್ಟು ಸೇರಲು ಬಿಡುವುದಿಲ್ಲ!


ಸಂಸ್ಕೃತ ಮೂಲ (ರಾಮಾಯಣ, ಕಿಷ್ಕಿಂದಾ ಕಾಂಡ):

ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಸ್ಸರಃ |
ಅಹೋ ದೈವಗತಿಃ ಕೀದೃಕ್ ತಥಾಪಿ ನ ಸಮಾಗಮಃ ||

-ಹಂಸಾನಂದಿ

ಕೊ: ಈ ಪದ್ಯವು ಆನಂದವರ್ಧನನ ಧ್ವನ್ಯಾಲೋಕದ್ದು ಎಂದು ತೀನಂಶ್ರೀ ಅವರ  "ಕಾವ್ಯಮೀಮಾಂಸೆ" ಎಂಬ ಪುಸ್ತಕದಲ್ಲಿ ನೋಡಿದ್ದೇನೆ.

ಕೊ.ಕೊ: ಶತಾವಧಾನಿ ಗಣೇಶ್ ಅವರ ಒಂದು ಭಾಷಣದಲ್ಲಿ ಈ ಪದ್ಯವು ರಾಮಾಯಣದ ಕಿಷ್ಕಿಂದಾಕಾಂಡದಲ್ಲಿದೆಯಂದು ನನಗೆ ತಿಳಿದು ಬಂತು. ಆನಂದ ವರ್ಧನನು, ಇದನ್ನು ಅಲ್ಲಿಂದ ಉದಾಹರಣೆಗೆ ಎತ್ತಿಕೊಂಡಿರಬಹುದು.

ಕೊ.ಕೊ.ಕೊ: ಮೂಲ ಯಾವುದಾದರೇನು? ಒಳ್ಳೆಯ ಸಂಗತಿಗಳು ಎಲ್ಲಿದ್ದರೂ ತಿಳಿಯೋಣ ಎನ್ನುವ ಕಾರಣಕ್ಕೆ ಕನ್ನಡಿಸಿದೆ!

ಸಂಕೋಲೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಕಡೆಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ

ಕೊ: ಇದು ಶೃಂಗಾರ ಶತಕದ ಎರಡನೇ ಪದ್ಯ.  ಆಸಕ್ತರಿಗೆ ಶೃಂಗಾರ ಶತಕದ ಮೊದಲ ಪದ್ಯದ ಅನುವಾದ ಇಲ್ಲಿದೆ ಮತ್ತೆ ಮೂರನೆ ಪದ್ಯದ ಅನುವಾದ ಇಲ್ಲಿದೆ.

ಕೊ.ಕೊ: ಯೋಗರಾಜ ಭಟ್ಟರಿಗೂ ಈ ಅನುವಾದಕ್ಕೂ ಯಾವುದೂ ಸಂಬಂಧವಿಲ್ಲ ಅನ್ನೋದನ್ನ ಒಮ್ಮೆ ಸ್ಪಷ್ಟ ಪಡಿಸಿಬಿಡುತ್ತೇನೆ !

ವಿಷವಾಗುವ ಅಮೃತ

ಕಣ್ಣ ಮುಂದಿರುವ ತನಕ ಈಕೆ
ಅಮೃತ ತುಂಬಿದ ಬಿಂದಿಗೆ;
ಕಣ್ಣ ಹಾದಿಯಲಿರದೆ ಹೋದರೆ 
ವಿಷಕ್ಕಿಂತಲೂ ಹೆಚ್ಚಿಗೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):

ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ |
ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ ಅತಿರಿಚ್ಯತೇ ||-ಹಂಸನಾದ

ಕೊ:ಮೂಲದಲ್ಲಿಲ್ಲದ "ಬಿಂದಿಗೆ" ಅನ್ನುವ ಪದವು ಮೂಲದಲ್ಲಿ ಇಲ್ಲದಿದ್ದರೂ, ಅರ್ಥವನ್ನು ಹೊಮ್ಮಿಸುತ್ತದೆಂದು ಬಳಸಿದ್ದೇನೆ.

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ...

Image
ಮೆಲ್ಲಮೆಲ್ಲನೆ ಕೊಳಲಿನಿಂಚರದಿ  ಬೃಂದಾವನವೆಲ್ಲವ ತುಂಬಿದನ
ಮಂದೆ ಮಂದೆ ಆಕಳನೋಡಾಡಿಸುತ ಹಿಂಡಲಿ ನಲಿವ ಕಂದನ
ಇಂದ್ರ ಯಾಗಗಳ ಬೀಳುಗಳೆಯಲೈದ ರಕ್ಕಸರ  ಕೊಂದಿಹನ
ಚಂದದಿ ನೆನೆ  ನಾಲಿಗೆ ನೀ ಗೊಲ್ಲತಿಯರ ಹೆಗಲೇರಿ ಮೆರೆವನ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತದಿಂದ):

ಮಂದಂ ಮಂದಂ ಮಧುರ ನಿನದೈಃ ವೇಣುಮ್ ಆಪೂರಯಂತಂ
ಬೃಂದಂ ಬೃಂದಾವನಭುವಿ ಗಾವಂ ಚಾರಯಂತಂ ಚರಂತಂ |
ಛಂದೋಭಾಗೇ ಶತಮಖಮುಖ  ಧ್ವಂಸಿನಾಂ ದಾನವಾನಾಂ
ಹಂತಾರಂ ತಂ ಕಥಯ ರಸನೇ ಗೋಪಕನ್ಯಾ ಭುಜಂಗಂ ||

-ಹಂಸಾನಂದಿ

ಕೊ: 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ' ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ.

ಕೊ.ಕೊ: ಮೂಲದಲ್ಲಿ ಇಲ್ಲದ ಕೆಲವು ಪದಗಳು ಅನುವಾದದಲ್ಲಿದ್ದರೂ ಭಾವಕ್ಕೆ ಅಷ್ಟು ಅಡ್ಡಿಯಾಗಿಲ್ಲವೆಂದುಕೊಂಡಿರುವೆ.

ಕೊ. ಕೊ. ಕೊ : ನನ್ನ ಆರಿಸಿದ ಅನುವಾದಗಳ ಪುಸ್ತಕ ’ಹಂಸನಾದ’ ಕೊಳ್ಳಲು ಇಲ್ಲಿ ಚಿಟಕಿಸಿ.

(ಚಿತ್ರ ಕೃಪೆ: http://www.exoticindiaart.com/sculptures/fluting_krishna_rk46.jpg)

ತಂಗಾಳಿಯಂತಹ ನಲ್ಲ

ತುರುಬ ಕೆಡಿಸೀತು
ಕಂಗಳ ಮುಚ್ಚಿಸೀತು
ಅರಿವೆಗಳನೊತ್ತಾಯದಲಿ ಸೆಳೆದೀತು;

ಮೈಯ ನವಿರೇಳಿಸೀತು
ಮೆಲ್ಲನ್ನ ನಡುಕವನು ತಂದೀತು
ತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;

ಬೀಸುತಿಹ ಕುಳಿರುಗಾಲದ
ತಂಗಾಳಿಯೆಂಬುದು ಪೆಣ್ಗಳಲಿ
ಇನಿಯನಂತೆಯೇ ನಡೆದುಕೊಂಡೀತು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :
ಕೇಶಾನಾಕುಲಯನ್ ದೃಶೋರ್ಮುಕುಲಯನ್ ವಾಸೋ ಬಲಾದಾಕ್ಷಿಪನ್
ಆತನ್ವನ್ ಪುಲಕೋದ್ಗಮಮ್ ಪ್ರಕಟಯನ್ನಾವೇಗಕಂಪಂ ಶನೈಃ
ವಾರಂವಾರಮುದಾರಸೀತ್ಕೃತಕೃತೋ ದಂತಚ್ಛದಾನ್ಪೀಡಯನ್
ಪ್ರಾಯಃ ಶಿಶಿರಃ ಏಷ ಸಂಪ್ರತಿ ಮರುತ್ಕಾಂತಾಸು ಕಾಂತಾಯತೇ

-ಹಂಸಾನಂದಿ

ಒತ್ತಾಸೆ

"ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?"
"ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ"
"ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?"
"ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ  ಪದ್ಯ-71 ):
ಕ್ವ ಪ್ರಸ್ಥಿತಾಹಿ ಕರಭೋರು ಘನೇ ನಿಶೀಥೇ
ಪ್ರಾಣಾಧಿಕೋ ವಸತಿ ಯತ್ರ ಜನಃ ಪ್ರಿಯೋ ಮೇ |
ಏಕಾಕಿನೀ ವದ ಕಥಂ ನ ಬಿಭೇಷಿ ಬಾಲೇ
ನನ್ವಸ್ತಿ ಪುಂಖಿತಶರೋ ಮದನಃ ಸಹಾಯಃ ||

-ಹಂಸಾನಂದಿ

ಕೊ: ಈ ಪದ್ಯವು ಇಬ್ಬರು ಗೆಳತಿಯರ ನಡುವೆ ನಡೆಯುವ ಮಾತುಕತೆ. ಕಾರ್ಗತ್ತಲಿನಲ್ಲಿ ನಲ್ಲನನ್ನು ನೋಡಹೊರಟಿರುವಳೊಬ್ಬಳು, ಅವಳನ್ನು ಪ್ರಶ್ನಿಸುವ ಅವಳ ಗೆಳತಿಯೊಬ್ಬಳು.

ಕೊ.ಕೊ: ಕಮ್ಮಗೋಲ - ಗಮಗಮಿಸುವ ಹೂಗಳ ಬಾಣವನ್ನು ಹಿಡಿದು ಬರುತ್ತಾನೆಂದು ಪ್ರಸಿದ್ಧನಾದ ಮನ್ಮಥ. ನಮ್ಮಮ್ಮ ಶಾರದೆ ಉಮಾಮಹೇಶ್ವರಿ ಎಂಬ ಪ್ರಸಿದ್ಧ ಕನಕದಾಸರ ಪದದಲ್ಲಿ ಗಣೇಶನನ್ನು "ಕಮ್ಮಗೋಲನ ವೈರಿ ಸುತನಾದ" (ಎಂದರೆ ಮನ್ಮಥನನ್ನು ಸುಟ್ಟ ಶಿವನ ಮಗ) ಎಂದು ಹಾಡಿ ಹೊಗಳಿರುವುದನ್ನು ನೆನೆಸಿಕೊಳ್ಳಿ. ಮೂಲದಲ್ಲಿರುವ ಪುಂಖಿತ ಶರೋ = ರೆಕ್ಕೆಗಳುಳ್ಳ ಬಾಣಗಳು = ಹೂವಿನ ರೇಕುಗಳ ಎಂದು ಅರ್ಥೈಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ. ಹಾಗೇ ಮೂಲದಲ್ಲಿರುವ "ಕರಭೋರು" - ಸೊಂಡಿಲಿನಂತಹ ತೊಡೆಯವಳೇ ಎನ್ನುವ ಮಾತನ್ನು ಕನ್ನಡಕ್ಕೆ ಹೊಂದುವಂತೆ ’ತೋರ ತೊಡೆಯವಳೇ ಎಂದು ಹೇಳಿದ್ದೇನೆ.

ನೆರವಿಗೆ ಬರುವವರು

ಕಿರಿಯರಾದರೇನು? ನೆರವಾದಾರು;
ಹಿರಿಯರಿಂದಾಗದಿದ್ದರೆ ಏನು?
ದಾಹವಾರಿಸಲು ಆಗದು ಕಡಲಿಗೆ
ಬಾವಿನೀರದನು ತಣಿಸದೇನು?


ಸಂಸ್ಕೃತ ಮೂಲ:

ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ ।
ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥

उपकर्तुं यथा स्वल्पः समर्थो न तथा महान् ।
प्रायः कूपस्तृषां हन्ति न कदापि तु वारिधिः ॥

-ಹಂಸಾನಂದಿ

ಮಾರವೈರಿ ರಮಣಿ

Image
ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ.

ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳದ ಮಾರವೈರಿ ರಮಣಿ ಎನ್ನುವ ರಚನೆ. ಮೊದಲು ಸಾಹಿತ್ಯವನ್ನು ಓದಿ.

ಪಲ್ಲವಿ:
ಮಾರವೈರಿ ರಮಣಿ ಮಂಜು ಭಾಷಿಣೀ ||ಮಾರವೈರಿ||

ಅನುಪಲ್ಲವಿ:
ಕ್ರೂರ ದಾನವೇಭವಾರಣಾರೀ ಶ್ರೀಗೌರೀ ||ಮಾರವೈರಿ||

ಚರಣ:
ಕರ್ಮಬಂಧವಾರಣ ನಿಷ್ಕಾಮಚಿತ್ತ ವರದೇ
ಧರ್ಮವರ್ಧನೀ ಸದಾ ವದನಹಾಸೇ ಶುಭಫಲದೇ ||ಮಾರವೈರಿ||

ಇದನ್ನು ’ತ್ಯಾಗರಾಜರದ್ದು’ ಎನ್ನಲಾದ ಎಂದು ಬರೆದಿದ್ದಕ್ಕೆ ಒಂದು ಕಾರಣವಾಗಿದೆ. ಸಾಮಾನ್ಯವಾಗಿ ತ್ಯಾಗರಾಜರ ರಚನೆಗಳಲ್ಲಿ ಕಂಡುಬರುವ ತ್ಯಾಗರಾಜರ ಮುದ್ರೆ ಇದರಲ್ಲಿ ಕಂಡುಬರುವುದಿಲ್ಲ. ತ್ಯಾಗರಾಜರ ಮುದ್ರೆ ಇರುವ ಕೆಲವು ರಚನೆಗಳನ್ನೂ ಅವರಲ್ಲದೆ, ಅವರ ನಂತರ ಕೆಲವು ವಾಗ್ಗೇಯಕಾರರು ತ್ಯಾಗರಾಜರ ಹೆಸರಿಟ್ಟು ರಚಿಸಿರುವ ಉದಾಹರಣೆಗಳಿವೆ. ಇಂತಹ ಸಂದರ್ಭಗಳಲ್ಲಿ ರಚನಾ ಕೌಶಲ,ಸಾಹಿತ್ಯ ಮೊದಲಾದುವುಗಳನ್ನು ಕಂಡು ಆ ರಚನೆಗಳು ಯಾರದ್ದಿರಬೇಕೆಂಬ ಊಹೆಯನ್ನೂ ಮಾಡಲಾಗಿದೆ. ತ್ಯಾಗರಾಜರ ಮುದ್ರೆಯಿದ್ದರೂ ಸಾಹಿತ್ಯದಲ್ಲಿರುವ ಕುಂದುಕೊರತೆಗಳಿಂದ ಅಥವಾ ಕಂಡುಬರುವ ಬೇರೆ ಗುಣಗಳನ್ನು ಕಂಡು ರಚನೆ ಯಾರದ್ದಿರಬಹುದೆಂದು ಊಹೆ ಮಾಡುತ್ತಾರೆ. ಅಂತಹದ್ದರಲ್ಲಿ, ತ್ಯಾಗರಾಜರ ಮುದ್ರೆಯೇ ಇಲ್ಲದ ಒಂದು ರಚನೆಯ ಬಗ್ಗೆ ಅನುಮಾನ ಹುಟ್ಟುವುದು ಸ…

ಆಸೆ

ಆಸೆಯೆಂಬುದಕೆ ತೊತ್ತಾದವರು ಎಲ್ಲ ಲೋಕಗಳಿಗಾಗುವರು ತೊತ್ತು; ಆಸೆಯಾರಿಗೆ ತೊತ್ತಾಗುವುದೋ ಅವರಿಗಿಡೀ ಜಗವಾದೀತು ತೊತ್ತು!
ಸಂಸ್ಕೃತ ಮೂಲ:
ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ | ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||
आशाया ये दासास्ते दासाः सर्वलोकस्य ।आशा येषां दासी तेषाम् दासायते लोकः ॥
-ಹಂಸಾನಂದಿ

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

Image
ಇವತ್ತಿನ (ಆಗಸ್ಟ್ ೨೮, ೨೦೧೧) ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.-ಹಂಸಾನಂದಿ

ಕಾರ್ಗಾಲದ ಹಂಬಲ

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)
ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ ನವಕುಟಜ ಕದಂಬಾಮೋದಿನೋ ಗಂಧವಾಹಾಃ | ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ ||
-ಹಂಸಾನಂದಿ
ಕೊ: ಕಂದಲಿನ್ಯೋ - ಕಂದಲಿ ಎಂಬುದು ಮಳೆಗಾಲದಲ್ಲಿ ಅರಳುವ ಒಂದು ಹೂಜಾತಿ. ನೆಲದ ಮೇಲೆ ಹರಡಿ ಬೆಳೆಯುವ ಈ ಕಾಡು ಹೂಗಳ ಹಲವು ಜಾತಿಗಳು ಇವೆಯೆಂದು ತೋರುತ್ತದೆ. ಅದರಲ್ಲಿ ಒಂದು ಜಾತಿ ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುತ್ತದಂತೆ! ಆದರೆ ಈ ಪದ್ಯದಲ್ಲಿ ಪ್ರತಿವರ್ಷ ಹೂವರಳುವ, ನೆಲವನ್ನೆಲ್ಲ ಹೂ ಹಾಸಿಗೆಯಂತಾಗಿಸುವ ಬೇರೆ ಹೂಗಳ ಬಗ್ಗೆ ಹೇಳಿದ್ದಾನೆಂದು ನನ್ನೆಣಿಕೆ. ಅದಕ್ಕಾಗಿ, ಕಂದಲಿ ಹೂಗಳ ಬದಲು, ಹೆಸರಿಸದೇ "ಹೂಗಳ ಹಾಸು" ಎಂದು ಹೇಳಿದ್ದೇನೆ.
ಕೊ.ಕೊ: ಕದಂಬ = ಕರ್ನಾಟಕದ ಮೊದಲ ಅರಸುಮನೆತನವಾದ ಕದಂಬರಿಗೆ ಆ ಹೆಸರು ಬರಲು ಕಾರಣವಾದ ಮರ ಇದೇ. ಹೆಚ್ಚಿನ ವಿವರಕ್ಕೆ, ವಿಕಿಪೀಡಿಯಾದಲ್ಲಿರುವ ಈ ಬರಹವನ್ನು ನೋಡಿ. ಜೊತೆಗೆ, ಕುಟಜ ಎನ್ನುವುದು ಮಲ್ಲಿಗೆಯ ಹೋಲುವ, ಕಂಪಾದ ಹೂವುಗಳನ್ನು ಬಿಡುವ ಒಂದು ಗುಂಪಿನ ಗಿಡಗಳು. ಇವುಗಳಲ್ಲಿ ಎರಡರ ಚಿತ್ರವನ್ನು ಇಲ್ಲಿ , ಮತ್ತೆ ಇಲ್ಲಿ ನೋಡಬಹುದು.

ವಸಂತನ ತಪ್ಪು

ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದಂತೆ ನಂಜು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||

-ಹಂಸಾನಂದಿ

ಕೊ: ಮೂರನೇ ಸಾಲಿನಲ್ಲಿ ಪ್ರಹಿಣಸ್ತಿ, ಪ್ರಣಿಹಂತಿ - ಹೀಗೆ ಎರಡು ಪಾಠಾಂತರಗಳು ಇದ್ದಹಾಗೆ ತೋರುತ್ತದೆ. ಹತ್ತಿರದಲ್ಲಿ ನಿಘಂಟು ಇಲ್ಲದ್ದಿಂದ, ಇದರಲ್ಲಿ ಯಾವುದು ಹೆಚ್ಚು ಸೂಕ್ತ ಎಂದು ತಿಳಿಯಲಾಗಲಿಲ್ಲ.

ಕೊ.ಕೊ: ಮಲಯಪರ್ವತದ ಗಾಳಿಯನ್ನು ನಾನು ಮಲೆನಾಡ ಗಾಳಿಯನ್ನಾಗಿ ಬದಲಾಯಿಸಿದ್ದೇನಾದರೂ, ಸಾರಾಂಶ ಅದೇ ಆಗಿದೆ.

ಕೊಳಲನೂದುವ ಚದುರನಾರೇ?

ಕೇಳ್ದವರ ಹಿಗ್ಗಿಸಿತು ನಾದದಲಿ ವೇದಗಳ ಹೊಮ್ಮಿಸುತ ಮರಗಿಡಗಳನೂ ನಲಿಸಿತು;
ಕಲ್ಲ ಕರಗಿಸಿತು ನೆರೆನಿಂತ ಮಿಗಗಳ ಮೈಮರೆಸುತ ತುರುಗಳಿಗೆ ಸಂತಸವೀಯಿತು;
ಗೋವಳರ ಸಡಗರಿಸಿ ಮತ್ತೆಲ್ಲ ಮುನಿಗಳಿಗೆ ನೆಮ್ಮದಿ ತರುತ ಸಪ್ತ ಸ್ವರಗಳನೆಲ್ಲೆಲ್ಲು ಹರಡಿತು;
ಆ ಮಗುವಿನ ಕೊಳಲುಲಿ ಸಕಲ ಲೋಕಗಳನೂ ಗೆಲ್ಲುತಲಿ ಓಂಕಾರದೊಳಹುರುಳ ಸಾರಿತು!
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತದ ಶ್ಲೋಕ 2-110):
ಲೋಕಾನುನ್ಮುದಯನ್ ಶ್ರುತೀರ್ಮುಖರಯನ್ ಕ್ಷೋಣೀರುಹಾನ್ ಹರ್ಷಯನ್
ಶೈಲಾನ್ವಿದ್ರವಯನ್ ಮೃಗಾನ್ವಿವಶಯನ್ ಗೋಬೃಂದಮಾನಂದಯನ್ |
ಗೋಪಾನ್ಸಂಭ್ರಮಯನ್ ಮುನೀನ್ ಮುಕುಲಯನ್ ಸಪ್ತಸ್ವರಾನ್ಜೃಂಭಯನ್
ಓಂಕಾರಾರ್ಥಮುದೀರಯನ್ವಿಜಯತೇ ವಂಶೀನಿನಾದಃ ಶಿಶೋಃ ||
-ಹಂಸಾನಂದಿ
ಕೊ: 'ಕೊಳಲನೂದುವ ಚದುರನಾರೇ ಪೇಳಮ್ಮ’ ಎನ್ನುವುದು ವ್ಯಾಸರಾಯರ ಒಂದು ಜನಪ್ರಿಯ ಪದ
ಕೊ.ಕೊ: ಮೂಲದ ಲಾಲಿತ್ಯ ಕನ್ನಡ ದಲ್ಲಿ ಕಾಣಸಿವುದಕ್ಕಾಗದಿದ್ದರೂ, ಅದರ ಅರ್ಥವನ್ನು ಆದಷ್ಟೂ ಸರಳವಾಗಿ ತರಲು ಒಂದು ಪ್ರಯತ್ನ ಮಾಡಿರುವೆ ಅಷ್ಟೆ. ಕೃಷ್ಣ ಹುಟ್ಟಿದ ಶ್ರಾವಣ ಕೃಷ್ಣ ಅಷ್ಟಮಿ ಬರುವ ಮುನ್ನ ಈ ಅನುವಾದ ಮಾಡಿದ ಹಿಗ್ಗು ನನಗಿದೆ.
ಕೊ.ಕೊ.ಕೊ: ಕೃಷ್ಣನ ಕೊಳಲು ಕಲ್ಲನ್ನೂ ಕರಗಿಸಬಲ್ಲುದಂತೆ. ಅಂತೆಯೇ ಬಾಲಮುರಳಿಕೃಷ್ಭ ಅವರ ಹಾಡುಗಾರಿಕೆಯೂ ಅಂದರೆ ಹೆಚ್ಚೇನಿಲ್ಲ. ಕೃಷ್ಣ ಕರ್ಣಾಮೃತದ ಈ ಶ್ಲೋಕ, ನಂತರ ಕನಕ ದಾಸರ ಒಂದು ದೇವರ ನಾಮವನ್ನು ಇಲ್ಲಿ ಕೇಳಿ ಈ ವರ್ಷದ ಕೃಷ್ಣಾಷ್ಟಮಿಯ ಸಂತಸದಲ್ಲಿ!
http://www.youtube.com/watch?…

ಹಣೆ ಬರಹ

ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ ನೇಸರಚಂದಿರಗಿಹ ರಾಹುಕೇತುಗಳ ಕಾಟ ಜೊತೆಗೆ ಅರಿವುಳ್ಳವರ ಬಡತನವ ನೋಡಿ ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)
ಗಜ ಭುಜಂಗ ವಿಹಂಗಮ ಬಂಧನಂ ಶಶಿ ದಿವಾಕರಯೋರ್ಗ್ರಹ ಪೀಡನಂ | ಮತಿಮತಾಂ ಚ ನಿರೀಕ್ಷ್ಯ ದರಿದ್ರತಾಂ ವಿಧಿರಹೋ ಬಲವಾನ್ ಇತಿ ಮೇ ಮತಿಃ ||
-ಹಂಸಾನಂದಿ

ಲಕುಮಿಯ ನೋಟ

ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ
ಮರಳಿ ಮರಳಿ ಬರುವ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಆ ಕಡಲಣುಗೆಯ ಸೊಗದ ನೋಟದ ಮಾಲೆ
ತೋರುತಿರಲಿ ನನಗೆ ಸಕಲ ಸಂಪದಗಳನೆ!

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ):

ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋ ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾಯಾಃ ||

-ಹಂಸಾನಂದಿ

ಕೊ: ನೈದಿಲೆಯ ಹೂವಿಗೆ ಮುತ್ತುವ ದುಂಬಿ ಹೇಗೆ ಹೂವಿನ ಒಳಗೂ ಹೊರಗೂ ಹಾರಾಡುತ್ತಿರುತ್ತದೆಯೋ, ಅದೇ ರೀತಿ ಲಕ್ಷ್ಮಿಯ ನೋಟವು ಹರಿಯ ಕಡೆಗಿರುವ ಪ್ರೀತಿಯಿಂದ ಹತ್ತಿರಕ್ಕೂ , ನಾಚಿಕೆಯಿಂದ ದೂರಕ್ಕೂ, ಮರಳಿ ಮರಳಿ ಹೋಗುತ್ತಿರುವುದನ್ನೇ ಶಂಕರಾಚಾರ್ಯರು ಒಂದು ಚೆನ್ನಾಗಿ ಪೋಣಿಸಿ ಹೆಣೆದ ಹೂವಿನ ಹಾರಕ್ಕೆ ಹೋಲಿಸಿದ್ದಾರೆ.

ಕೊ.ಕೊ: ನಾಳೆ ವರಮಹಾಲಕ್ಷ್ಮಿ ಹಬ್ಬ. ಕಳೆದ ಮೂರು ವರ್ಷಗಳಲ್ಲೂ ಈ ಹಬ್ಬದ ದಿನ (೨೦೦೮, ೨೦೦೯, ೨೦೧೦) ಒಂದು ಬರಹವನ್ನು ಹಾಕಿದ್ದರಿಂದ, ಇವತ್ತೂ ಒಂದು ಹಾಕುವುದಕ್ಕೆ ಮನಸ್ಸಾಯಿತು.

ಕೊ.ಕೊ.ಕೊ: ಮೂಲ ಶ್ಲೋಕದಲ್ಲಿರುವ ಲಾಲಿತ್ಯ ಅನುವಾದದಲ್ಲಿ ಕಡಿಮೆಯಾಗಿದೆ ಎಂಬ ಕೊರತೆ ಇದ್ದರೂ, ಹಬ್ಬದ ದಿನಕ್ಕೊಂದು ಅನುವಾದ ಇರಲಿ ಎಂಬ ಕಾರಣಕ್ಕೆ ಹಾಕಿಬಿಡುತ್ತಿದ್ದೇನೆ!
ಅರಿವಿನ ಅಲೆಗಳು - ಸ್ಟೆಲೇರಿಯಂ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಚಯ ದಲ್ಲಿ ಪ್ರತಿ ಆಗಸ್ಟ್ ನ ಮೊದಲ ಹದಿನಾಲ್ಕು ದಿನಗಳೂ ಪ್ರತಿನಿತ್ಯ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರಹಗಳು ಬರುತ್ತಿವೆ.

ಆ ಅರಿವಿನ ಅಲೆಗಳಲ್ಲಿ, ಇಂದು ನಾನು ಬರೆದ ಮುಕ್ತ ತಂತ್ರಾಂಶಕ್ಕೆ ಆಗಸವೇ ಎಲ್ಲೆ ಎಂಬ ಬರಹ ಪ್ರಕಟವಾಗಿದೆ. ಓದಲು ಈ ಕೊಂಡಿಯನ್ನು ಚಿಟಕಿಸಿ.

-ಹಂಸಾನಂದಿ

ಉಳಿಸಬಾರದವುಗಳು

ಆರಿಸದೇ ಉಳಿದುರಿ ತೀರಿಸದ ಕಡ
ಮನದಲುಳಿದ ವೈರ ಇವು ಮೂರು
ಇರುವಲ್ಲೇ ಬೆಳೆಯುತ ಹೋಗುವುವು
ಅದಕೇ ಇವುಗಳ ಉಳಿಸದಿರು


ಸಂಸ್ಕೃತ ಮೂಲ:

ಅಗ್ನಿ ಶೇಷಂ ಋಣಃ ಶೇಷಂ
ಶತ್ರು ಶೇಷಂ ತಥೈವ ಚ |
ಪುನಃ ಪುನಃ ಪ್ರವರ್ಧಂತೇ
ತಸ್ಮಾಚ್ಛೇಷಂ ನ ರಕ್ಷಯೇತ್ ||

-ಹಂಸಾನಂದಿ

ಕೊರತೆ ಮರೆಯಿಸುವ ಗುಣಗಳು

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರುವೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ

ಕೊ: ಇದು ಕುಮಾರಸಂಭವದ ಮೊದಲ ಸರ್ಗದಲ್ಲಿ, ಕಾಳಿದಾಸ ಮಾಡುವ ಹಿಮಾಲಯದ ಪ್ರಶಂಸೆಯಲ್ಲಿ ಬರುವ ಒಂದು ಪದ್ಯ. ಹಿಮಾಲಯದಲ್ಲಿ ತಡೆಯಲಾರದಷ್ಟು ಚಳಿ, ಸುತ್ತ ಹಿಮರಾಶಿ ಇರುವುದು ನಿಜ. ಆದರೆ, ಆ ಪರ್ವತಶ್ರೇಣಿಯು ಸಕಲ ರತ್ನಗಳೂ ಸಿಗುವ ಜಾಗವಾಗಿದ್ದರಿಂದ, ಈ ಹಿಮರಾಶಿಯೊಂದು ಕೊರೆ, ತೊಂದರೆ ಎಂದು ಕಾಣುವುದೇ ಇಲ್ಲ ಅನ್ನುವುದು ಕವಿಯ ಅಂಬೋಣ.

ಕೊ.ಕೊ: ಚಂದಿರನ ಮೇಲೆ ಕಾಣುವ, ನಾವು ಈಗ ಮೊಲ, ಅಥವಾ ಜಿಂಕೆಯ ರೀತಿಯ ಚಿತ್ತಾರವನ್ನು ಕಲ್ಪಿಸಿಕೊಳ್ಳುವ, ಕರಿ ನೆರಳುಗಳನ್ನೇ ಇಲ್ಲಿ, ಚಂದಿರನ ಮೇಲಿನ ಮಚ್ಚೆ ಎಂದು ಕವಿ ಕರೆದಿದ್ದಾನೆ.

ಕೊ.ಕೊ. ಕೊ : : ಈ ಕಾಳಿದಾಸನ ಪದ್ಯವನ್ನೋದಿದ ಇನ್ನಾರೋ ಕವಿ ಅವನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ ಕೆಳಗಿನ ಪದ್ಯದಲ್ಲಿ:

एको हि दोषो गुणसन्निपाते निमज्जतींदोः इति यो बभाषे
नूनम् न द्रुष्टं कविनापि तेन दारिद्रय दोषो गुणराशिनाशी

ಇದನ್ನು ನಾನು ಹಿಂದೆ ಈ ರೀತಿ ಅನುವಾದ ಮಾಡಿದ…

ಅರುಂಧತೀ ದರ್ಶನ

Image
ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸಿನೊಳಗೇ ನಕ್ಕಿದ್ದೇನೆ ಕೂಡ!

ಹಾಗಂತ ನನ್ನ ಸಂಪ್ರದಾಯಗಳನ್ನ ಕಂಡ್ರೆ ಮೂಗುಮುರಿಯೋವ್ನು ಅಂತ ಅಂದ್ಕೋಬೇಡಿ. ಕೆಲವು ಸಂಪ್ರದಾಯಗಳು ಅವುಗಳ ಒಳ ಅರ್ಥಕ್ಕೆ ಚೆನ್ನು. ಇನ್ನು ಕೆಲವು, ಅವು ನಡೆಯುವ ಸೊಬಗಿಗೆ ಚೆನ್ನು. ಮತ್ತೆ ಕೆಲವು, ಯಾರೋ ಹಿರಿಯರಿಗೋ, ಬೇಕಾದವರಿಗೋ ಹಿತವಾಗುತ್ತೆ ಅನ್ನೋ ಕಾರಣಕ್ಕೆ ಚೆನ್ನು. ಅಂತೂ ಯಾರಿಗೂ ತೊಂದ್ರೆ ಆಗ್ದೇ ಇದ್ರೆ ಕೆಲವು ಸಂಪ್ರದಾಯಗಳನ್ನ ಹಾಗೇ ಇಟ್ಕೋಬಹುದು. ಇಲ್ಲ ಇದ್ಯಾಕಪ್ಪ ಅಂತ ಬಿಟ್ಬಿಡಬಹುದು. ಅವರವರ ಇಷ್ಟ ಅನ್ನಿ.

ಇರ್ಲಿ. ಅದೇನೋ ಎಲ್ಲಿಂದಲೋ ಎಲ್ಲೋ ಹೋದೆ. ಇನ್ನು ಅರುಂಧತೀ ದರ್ಶನಕ್ಕೆ ಬರೋಣ. ಪುರೋಹಿತರು ಮದುವೆಯ ಕಲಾಪಗಳ ನಡುವೆ ಗಂಡು ಹೆಣ್ಣಿಗೆ ಹೀಗೆ ಅರುಂಧತೀ ದರ್ಶನ ಮಾಡಿಸೋದರ ಹಿಂದೆ ಒಂದು ಆಸಕ್ತಿ ಮೂಡಿಸುವ ವಿಷಯವಿದೆ. ಪುರಾಣಗಳಲ್ಲಿ ವಸಿಷ್ಟ ಅರುಂಧತಿಯರ ಹೇಗೆ ಅವರು ಗಂಡ ಹೆಂಡತಿ ಒಬ್ಬರಿಗೊಬ್ಬರು ಇಂಬಾಗಿದ್ದರು, ಎಂತಹ ಅನುರೂಪ ದಾಂಪತ್ಯ ಅವರದ್ದು ಅನ್ನುವ ಬಗ್ಗೆ ಹೇಳಿದ್ದಾರಂತೆ. ಹಾಗಾಗಿ, ಆಕಾಶದಲ್ಲಿ ಇರುವ ಸಪ್ತರ್ಷಿ ಮಂಡಲದಲ್ಲಿ ಏಳು ಋಷಿಗಳನ್ನು ಗುರ್ತಿಸುವುದಿದ್ದರೂ, ಅವರಲ್ಲಿ ವಸಿಷ್ಠರಿಗೆ ಮಾತ್ರ ಜೊತೆಯಲ್ಲೇ ಪತ್ನಿ ಅರುಂಧತಿಯೂ ಇದ್ದಾಳೆ. ಇಂತಹ ಪತಿಪತ…

ಕೊಂಕು ನೋಟದವಳ ಜಾಣ್ಮೆ

ಮೋಡಿಗೊಳಿಸುವರು ಅಮಲೇರಿಸುವರು
ಮೇಲೆ ಕಟಪಟೆಯ ಕಟಕಿಯಾಡುವರು;
ಭಯವಡಗಿಸುವರು ರಮಿಸಿ ಸುಖಿಸುವರು
ಜೊತೆಗೆ ನೀಗದಿಹ ನೋವನೂ ನೀಡುವರು;
ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡುವರು? ಏನೇನ ಮಾಡಾರು? ಅದೇನೇನ ಮಾಡುವರು! ಏನೇನ ಮಾಡಾರು !

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):

ಸಮ್ಮೋಹಯಂತಿ ಮದಯಂತಿ ವಿಡಂಬಯಂತಿ
ನಿರ್ಭರ್ತ್ಸಯಂತಿ ರಮಯಂತಿ ವಿಷಾದಯಂತಿ |
ಏತಾಃ ಪ್ರವಿಶ್ಯ ಸದಯಂ ಹೃದಯಂ ನರಾಣಾಮ್
ಕಿನ್ನಾಮ ವಾಮನಯನಾ ನ ಸದಾಚರಂತಿ ||
-ಹಂಸಾನಂದಿ

ಬಲೆಯಲಾಡುವವನ ಹಾಡು

ಏಕೆಂದವತಾರವನೆತ್ತಿದೆನೋ?
ಏನು ಕಾರಣವೋ? ಜಾಲದೊಳು ನಾ||ನೇಕೆಂದವತಾರವನೆತ್ತಿದೆನೋ||

ಬಜ್ಜಿನಲ್ಲಿ ಗುಞ್ ಗುಡಲಿಕೋ? ಫೇಸ್
ಬುಕ್ಕಿನ ಗೋಡೆಯಲಿ ಬರೆಯಲಿಕೋ?
ಟ್ವಿಟ್ಟರಿನಲಿ ಚಿಂವ್ ಚಿಂವ್ ಎನ್ನಲಿಕೋ
ಮತ್ತೆ ಗೂಗಲ್ ಪ್ಲಸ್ಸಿನಲಿ ಹರಿಯಲಿಕೋ ನಾ ||ನೇಕೆಂದವತಾರವನೆತ್ತಿದೆನೋ||

ಹಿನ್ನೆಲೆ ತಿಳಿವಾಗದಿದ್ದವರು ಈ ಹಳೆಯ ಬರಹವನ್ನು ನೋಡಿ :-) - ಏಲಾವತಾರಮೆತ್ತಿತಿವೋ
ಇದನ್ನು ಇಲ್ಲಿಯವರೆಗೆ ಓದಿದ್ದರೆ ನಿಮಗೆ ಇದೂ ಹಿಡಿಸಬಹುದು - ಬ್ಲಾಗಿಗೆ ಮರುಳಾದೆಯಾ?

ಮತ್ತೊಮ್ಮೆ ಪುರಂದರದಾಸರ ಮತ್ತು ತ್ಯಾಗರಾಜರ ಕ್ಷಮೆ ಬೇಡುತ್ತ

-ಹಂಸಾನಂದಿ

ಹಿಗ್ಗುವ ಹರಿ

Image
"ಯಮುನೆಯ ಮರಳಲಿ ಆಡಪೋಗಿಹ
ಅಣ್ಣ ಬಲರಾಮ ಬರುವ ಮುನ್ನವೇ
ಬಟ್ಟಲ ಹಾಲನು ಕುಡಿದರೆ ನಿನ್ನಯ
ಕೂದಲು ಬೆಳೆವುದು ಸೊಂಪಾಗಿ"

ಬಣ್ಣಿಸಿ ಇಂತು ಯಶೋದೆ ನುಡಿದಿರೆ
ಬಟ್ಟಲ ಹಾಲನು ವೇಗದಿ ಕುಡಿಯುತ
ಮುಟ್ಟುತ ಜುಟ್ಟನು ಬೆಳೆದಿಹುದೆನ್ನುತ
ಹಿಗ್ಗುವ ಹರಿಯೇ ಎಮ್ಮ ಕಾಯಲಿ!


ಸಂಸ್ಕೃತ ಮೂಲ:(ಲೀಲಾಶುಕನ ಕೃಷ್ಣಕರ್ಣಾಮೃತ- ಶ್ಲೋಕ ೬೦)

ಕಾಲಿಂದೀ ಪುಲಿನೋದರೇಶು ಮುಸಲೀ ಯಾವದ್ಗತಃ ಖೇಲಿತುಂ
ತಾವತ್ ಕಾರ್ಪರಿಕಂ ಪಯಃ ಪಿಬ ಹರೇ ವರ್ಧಿಷ್ಯತೇ ತೇ ಶಿಖಾ |
ಇತ್ಥಂ ಬಾಲತಯಾ ಪ್ರತಾರಣಪರಾಃ ಶ್ರುತ್ವಾ ಯಶೋದಾಗಿರಃ
ಪಾಯಾನ್ನಸ್ವಶಿಖಾಂ ಸ್ಪೃಶನ್ ಪ್ರಮುದಿತಃ ಕ್ಷೀರೋರ್ಧಪೀತೇ ಹರಿಃ ||

-ಹಂಸಾನಂದಿ

(ಚಿತ್ರ ಕೃಪೆ Image source :http://www.indianhandicrafts.co.in/somalatha-tanjore-art/tanjore-Krishna-painting/tanjore-lord-Krishna-painting.php )

ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ

Image
ಎಷ್ಟೋ ದಿನಗಳ ಹಿಂದೆ ಹಂಸನಾದ ಅಂದ್ರೇನು ಅನ್ನುವ ಒಂದು ಪೋಸ್ಟ್ ಹಾಕಿದ್ದೆ. ಹಂಸನಾದ ಅಂದರೆ ಕರ್ನಾಟಕ ಸಂಗೀತದ ಒಂದು ಒಂದು ಜನಪ್ರಿಯ ರಾಗ. ನಂತರ, ನನ್ನ ಬ್ಲಾಗಿಗೆ ಅದೇ ಹೆಸರನ್ನು ನಾನು ಕೊಟ್ಟಿದ್ದೆ. ನನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮೂರು ನಾಲ್ಕು ವರ್ಷಗಳಿಂದ ಗೀಚ್ತಾ ಹೋಗಿದ್ದೆ ಅನ್ನಿ.
ಹೀಗೆ ನಾನು ಬರೆದ ಬರವಣಿಗೆಯಲ್ಲಿ ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.
ಪುಸ್ತಕದ ಹೆಸರು ಕೂಡ ಹಂಸನಾದ ಅಂತಲೇ!
ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿಯ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಈ ಸಂತಸವನ್ನು ಇನ್ನೂ ಹೆಚ್ಚಿಸಲು ನೀವು ತಪ್ಪದೇ ಬರಬೇಕು, ನಮ್ಮೊಂದಿಗೆ ಇರಬೇಕು. .
ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ, ಕೆಲವರ ಮಿಂಚಂಚೆ ವಿಳಾಸ ಇರದೆಯೋ, ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ.ಕಾರ್ಯಕ್ರಮದಂದು ನಿಮ್ಮನ್ನು ಭೇಟಿಯಾಗಲು ನಾನು ಕಾದಿರುತ್ತೇನೆ. ದಯವಿಟ್ಟು ಬನ್ನಿ.

-ಹಂಸಾನಂದಿ

ನಲಿವಿನ ಇರುಳು

ಗಲ್ಲಕ್ಕೆ ಗಲ್ಲ ಹಚ್ಚಿ ನಲುಮೆದುಂಬಿದ ಮಾತುಗಳಲಿ ಮೆಲ್ಲ ಮೆಲ್ಲನೆ ದನಿಯ ಸವಿಯ ತಲ್ಲೀನತೆಯಲಿ
ಅಪ್ಪುಗೆಯ ಬಿಗಿಯಲ್ಲಿ ಸಂತಸಿಪ ತೋಳ್ಗಳಲಿ ಗೊತ್ತಿರದೇ ಉರುಳಿತಿರುಳು ಅದೆಂಥ ನಲಿವಿನಲಿ!

ಸಂಸ್ಕೃತ ಮೂಲ ( ಭವಭೂತಿಯ ಉತ್ತರರಾಮಚರಿತದಿಂದ)
ಕಿಮಪಿ ಕಿಮಪಿ ಮಂದಂ ಮಂದಮಾಸಕ್ತಿ ಯೋಗಾತ್ ಅವಿರಲಿತ ಕಪೋಲಮ್ ಜಲ್ಪತೋರಕ್ರಮೇಣ |
ಅಶಿಥಿಲ ಪರಿರಂಭ ವ್ಯಾಪೃತೇಕೈಕದೋಷ್ಣೋಃ ಅವಿದಿತ ಗತಯಾಮಾ ರಾತ್ರಿರೇವ ವ್ಯರಂಸ್ತೀತ್ ||

ಕೊ: ಈ ಪದ್ಯವು ಭವಭೂತಿಯ ಉತ್ತರ ರಾಮಚರಿತ ನಾಟಕದ್ದು. ರಾಮನು ಸೀತೆಗೆ ತಾವು ವನವಾಸದಲ್ಲಿ ಕಳೆದ ನಲಿವಿನ ರಾತ್ರಿಗಳ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಬರುತ್ತದೆ.

ಕೊ.ಕೊ: ಇದರ ನಾಲ್ಕನೇ ಸಾಲಿಗೆ "ಅವಿದಿತ ಗತಯಾಮಾ ರಾತ್ರಿರೇವಂ ವ್ಯರಂಸ್ತೀತ್" ಎಂಬ ಇನ್ನೊಂದು ಪಾಠಾಂತರವೂ ಇದೆಯಂತೆ.

ಕೊ.ಕೊ.ಕೊ: ಈ ಪದ್ಯಕ್ಕೆ ಎರಡು ಪಾಠಾಂತರಗಳು ಇರುವ ಹಿನ್ನೆಲೆಯಲ್ಲೇ ಇರಬೇಕು, ಒಂದು ಒಳ್ಳೆ ಕುತೂಹಲಕಾರಿಯಾದ ಕಥೆಯನ್ನೇ ಕಟ್ಟಿಬಿಟ್ಟಿದ್ದಾರೆ ನಮ್ಮ ಹಿಂದಿನವರು. ಭವಭೂತಿಯೂ, ಕಾಳಿದಾಸನೂ ಬೇರೆ ಬೇರೆ ಕಾಲದಲ್ಲಿದ್ದವರು ಅನ್ನುವುದು ಚರಿತ್ರೆಯನ್ನು ನೋಡಿದರೆ ತಿಳಿಯುತ್ತದೆ. ಆದರ ಈ ಕಥೆಯನ್ನು ಕೇಳುವಾಗ ಆ ವಿಷಯವನ್ನು ಸ್ವಲ್ಪ ಬದಿಗೊತ್ತಿಬಿಡಿ.

ಭವಭೂತಿ, ಕಾಳಿದಾಸ ಇಬ್ಬರೂ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ನವಮಣಿಗಳಲ್ಲಿ ಇಬ್ಬರು. ಭವಭೂತಿಗೆ ಕಾಳಿದಾಸನ ಹತ್ತಿರ ಹೊಗಳಿಸಿಕೊಳ್ಳಬೇಕೆಂಬ ಆಸೆ. ಹಾಗಾಗಿ, ಉತ್ತರ ರಾಮಚರಿತವನ್ನು …

’ಅಣ್ಣ’ನ ದಿನ

ಹೋದ ವರ್ಷ ಬರೆದ ಬರಹದ ಮರು-ಪೋಸ್ಟಿಂಗ್: "ಅಣ್ಣ"ನ ದಿನಕ್ಕಾಗಿ!
------------------------------------------------------------------------------------------------------------------------------------------------ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ ಕೆಲಸ ಸರಿಯಾಗಬೇಕಾದರೆ ಅದೃಷ್ಟ ಬೇಕೇ ಬೇಕು. ಹೇಗೆ? ನಾವು ಬತ್ತದ ಪೈರು ಬೆಳೀಬೇಕು ಅಂತಿಟ್ಕೊಳ್ಳಿ. ಮೊದಲು ನಮ್ಮದೇ ಆಗ ಜಮೀನಿರ್ಬೇಕು, ಅಥವಾ ಗುತ್ತಿಗೆ ತೊಗೊಬೇಕು. ಮತ್ತೆ ಅದನ್ನ ಉತ್ತು, ಬಿತ್ತು, ನಾಟಿ ಮಾಡಿ, ಕಳೆ ತೆಗೆದು ಎಲ್ಲಾ ಕೆಲಸ ಆಗಬೇಕಾದ ಸಮಯದಲ್ಲಿ ಮಾಡಬೇಕು. ಜೊತೆಗೆ ಸರಿಯಾದ ಸಮಯದಲ್ಲಿ ಮಳೆಯೂ ಬರಬೇಕು. ಈಗ ಮಳೆ ಸುರಿಯೋದು ನಮ್ಮ ಕೈಲಿದೆಯೇ? ಇಲ್ಲ. ಅದೇ ಅದೃಷ್ಟ. ಆದರೆ, ಮಳೆ ಚೆನ್ನಾಗಿ ಬರುವಾಗ, ಅದಕ್ಕೆ ಮೊದಲು ಮಾಡಬೇಕಾದ ಉತ್ತು ಬಿತ್ತುವ ಕೆಲಸಗಳನ್ನು ಮಾಡಿರದಿದ್ದರೆ ಪಯಿರನ್ನ ಬೆಳೆಯೋಕೆ ಸಾಧ್ಯವೇ?"

ಮನುಷ್ಯ ಪ್ರಯತ್ನ ಎಷ್ಟು ಅಗತ್ಯ ಅನ್ನೋದರ ಬಗ್ಗ ಕೇಳುಗರು ಫೋನ್ ನಲ್ಲಿ ಮಾತಾಡಿ ತಮ್ಮ ನಿಲುವು, ಅನುಭವ ಇವುಗಳನ್ನ ಇತರ ಕೇಳುಗರ ಜೊತೆ ಹಂಚಿಕೋತಿದ್ದರು. ನಾನೂ ಕೂಡ ಫೋನಿಸಿ, ಎಡ…

ವೀಣೆ ಎಂಬ ಸವತಿ

Image
ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆ
ಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆ
ಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ
ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!


ಸಂಸ್ಕೃತ ಮೂಲ ( ಭಾಸನ ಚಾರುದತ್ತ ನಾಟಕ, ಮೂರನೇ ಅಂಕ):

ಉತ್ಕಂಠಿತಸ್ಯ ಹೃದಯಾನುಗತಾ ಸಖೀವ
ಸಂಕೀರ್ಣದೋಷರಹಿತಾ ವಿಷಯೇಷು ಗೋಷ್ಟೀ |
ಕ್ರೀಡಾರಸೇಷು ಮದನವ್ಯಸನೇಷು ಕಾಂತಾ
ಸ್ತ್ರೀಣಾಂ ತು ಕಾಂತರತಿವಿಘ್ನಕರೀ ಸಪತ್ನೀ ||

-ಹಂಸಾನಂದಿ

ಚಿತ್ರ ಕೃಪೆ: http://www.reocities.com/Vienna/8896/veenai.gif

ನಯಾಗರ ಫಾಲ್ಸ್ ನಲ್ಲಿ ಮಸಾಲೆ ದೋಸೆ ಗಾಡಿ!

Image
(ಕೊ: ಇದು ಸುಮಾರು ನಾಲ್ಕು ವರ್ಷ ಹಳೆಯ ಬರಹ - ಈ ಬ್ಲಾಗಿನಲ್ಲಿ ದಾಖಲಾಗಿರಲಿಲ್ಲ. ಇವತ್ತು ಗೆಳೆಯ ವಿಕಾಸರ ವಿಕಾಸವಾದದಲ್ಲಿ ಓದಿದ ಬರಹದಿಂದಾಗಿ ಇದರ ನೆನಪಾಗಿ, ಇಲ್ಲಿ ಹಾಕಿದ್ದೇನೆ)

----------------------------------------------------------------------------------

ಕಳೆದ ತಿಂಗಳು ಅಮೆರಿಕೆಯ ಪೂರ್ವ ಕರಾವಳಿಗೆ ನೆಂಟರ ಮದುವೆಗೆಂದು ಹೋಗಬೇಕಾಗಿತ್ತು. ಹೇಗೂ ಅಲ್ಲಿಯವರೆಗೆ ಹೋಗುವೆನಲ್ಲ, ಮತ್ತೆ ಐನೂರು ಮೈಲಿ ಯಾವ ಲೆಕ್ಕ ಎಂದು, ನಯಾಗರಾ ಫಾಲ್ಸ್ ಗೂ ಹೋಗುವ ಪ್ರೋಗ್ರಾಮ್ ಹಾಕಿದ್ದಾಯಿತು.ನಯಾಗರಾ ಫಾಲ್ಸ್ ಎರಡು ದೇಶಗಳಲ್ಲಿ ಹರಡಿಕೊಂಡಿರುವ ಜೋಡಿ-ನಗರ. ನಡುವೆ ನಯಾಗರ ನದಿ. ಬರೀ ೩೦-೨೫ ಮೈಲುದ್ದದ ಈ ನದಿಯಲ್ಲಿ ಉತ್ತರ ಅಮೆರಿಕೆಯ ೭೫% ನೀರು ಹಾದು ಹೋಗುತ್ತಂತೆ. ಈರೀ ಸರೋವರದಿಂದ ಆಂಟೋರಿಯೀ ಸರೋವರದ ನಡುವೆ ಇರುವ ಈ ಸಣ್ಣ ನದಿ, ಸುಮಾರಾಗಿ ಸಪಾಟಾಗಿರುವ ಈ ಭಾಗದಲ್ಲಿ, ಎತ್ತರ ಹೆಚ್ಚಿಲ್ಲದಿದ್ದರೂ, ಅದ್ಭುತವಾದ ಜಲಪಾತವನ್ನು ಸೃಷ್ಟಿಸಿರುವುದೊಂದು ಸೋಜಿಗ.

ನದಿಯ ಪಶ್ಚಿಮಕ್ಕೆ ಕೆನಡ ಆದರೆ, ಪೂರ್ವಕ್ಕೆ ಯು.ಎಸ್.ಎ. ಊರಿನ ಕೇಂದ್ರ ಬಿಂದು ಎಂದರೆ ನಯಾಗರ ಜಲಪಾತ. ಅದರಲ್ಲೂ ಎರಡು ಭಾಗ. ಸುಮಾರು ೯೦% ನೀರು ಹರಿಯುವ ಕೆನಡಿಯನ್ ಫಾಲ್ಸ್, ಮತ್ತು ಮಿಕ್ಕ ೧೦% ಹರಿಯುವ ಅಮೆರಿಕನ್ ಫಾಲ್ಸ್. ಎತ್ತರ ೨೦೦ ಅಡಿಗೂ ಕಮ್ಮಿ ಇದ್ದರೂ, ಅದರ ಅಗಲ ಜಲಪಾತಕ್ಕೆ ಅಪಾರ ಗಾಂಭೀರ್ಯ ತಂದು ಕೊಡುತ್ತದೆ.

ಇದು ಐದು ವರ್ಷಗಳಲ್ಲಿ ನಾನು ನಯಾಗರ ಫಾಲ್ಸ್ …

ಮೇಲೆ - ಕೆಳಗೆ

ಕೊಡುವುದರಲ್ಲಿರುವಂಥ ಮೇಲ್ಮೆ
ಕೂಡಿಡುವುದರಲ್ಲಿಲ್ಲವೆ ಇಲ್ಲ;
ಮೋಡವು ನೀರ ನೀಡುತ ಮೇಲಿರೆ
ಕೂಡಿಡುವ ಕಡಲು ಕೆಳಗಿಹುದಲ್ಲ !

ಸಂಸ್ಕೃತ ಮೂಲ:

ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |
ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಧಮಃ ಸ್ಥಿತಿಃ ||

-ಹಂಸಾನಂದಿ

ತಿರುಕನ ಕುರುಹು

ಎಡವುವ ನಡಿಗೆ ಸೊರಗಿದ ದನಿಯು
ಒಡಲಲಿ ಬೆವರು ಅಂಜಿದ ತನುವು
ಮಡಿಯುವ ವೇಳೆಯ ಈ ಕುರುಹುಗಳೇ
ಬೇಡುವವನಲೂ ಕಾಣುವುವು!

ಸಂಸ್ಕೃತ ಮೂಲ:

ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್
ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ

-ಹಂಸಾನಂದಿ

ಮರೆಯಲಾರದ ಹಳೆಯ ಕಥೆಗಳು: ೫

ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರೂ ಒದಬಹುದಿತ್ತು. ರಾತ್ರಿ ಆದರೆ, ಕಿಟಕೀ ಬದಿಯಲ್ಲಿ ಕುಳಿತು ಹೊರಗಡೆ ನೋಡೋದು ಇನ್ನೇನನ್ನ? ಆದರೆ ಬರೀ ಕಾರಿನಲ್ಲಿ ಪ್ರಯಾಣಿಸೋದೇ ಹೆಚ್ಚಾದ ಮೇಲೆ ದಾರಿಯಲ್ಲಿ ಓದೋದು ಅನ್ನೋದು ಕಷ್ಟವೇ -ದೂರದ ಪ್ರಯಾಣದಲ್ಲಿ ಹೆಚ್ಚು ಕಡಿಮೆ ಯಾವಾಗಲೂ ಕಾರನ್ನ ನಾನೇ ಓಡಿಸೋದ್ರಿಂದ!

ಕೆಲವು ದಿನಗಳ ದೇಶದ ಈ ತುದಿಯಿಂದ ಆ ತುದಿಗೆ ವಿಮಾನದಲ್ಲಿ ಪ್ರಯಾಣ ಮಾಡೋ ಸ್ವಲ್ಪ ದೊಡ್ಡ ಪ್ರಯಾಣದಲ್ಲಿ ತ್ರಿವೇಣಿ ಅವರ ಮೊದಲ ಹೆಜ್ಜೆ ಕಾದಂಬರಿಯನ್ನ ಓದಿದೆ. ಈ ಸಲದ ಹೆಚ್ಚಾಯ ಅಂದರೆ ಇದನ್ನ ಓದಿದ್ದು ಪುಸ್ತಕವಾಗಿ ಅಲ್ಲ, ಬದಲಿಗೆ ಇ-ಪ್ರತಿ ಯಾಗಿ. ಕಿಂಡಲ್ ಮೇಲೆ. ಓದಬೇಕು ಅಂತ ಕಿಂಡಲ್ ನಲ್ಲಿ ಹಾಕಿಕೊಂಡಿರುವ ಹಲವು ಪಿಡಿಎಫ್ ಪುಸ್ತಕಗಳ ಪೈಕಿ ಇದೂ ಒಂದಾಗಿತ್ತು. ಅಂತೂ ಪ್ರಯಾಣದ ನೆವದಲ್ಲಿ ಓದುವುದಕ್ಕೊಂದು ಕಾಲ ಬಂತು ಅನ್ನಿ.

ಸುಮಾರು ೫೦ ವರ್ಷಗಳ ಹಿಂದೆ ತ್ರಿವೇಣಿ ಅವರು ಬರೆದಿರುವ ವಿಷಯದ ಹರಹನ್ನು ನೋಡಿದರೆ ಬಹಳ ಆಶ್ಚರ್ಯವಾಗುತ್ತೆ. ಶರಪಂಜರ, ಬೆಳ್ಳಿಮೋಡ , ಹಣ್ಣೆಲೆ ಚಿಗುರಿದಾಗ ಮೊದಲಾದ ಕಾದಂಬರಿಗಳಷ್ಟು ಜನಪ್ರಿಯವಲ್ಲದೇ ಇರಬಹುದಾದ ಈ ಕಾದಂಬರಿಯಲ್ಲಿ , ೧೯೪೦-೬೦ರ ಸಮಯದ ಸಾಮಾಜಿಕ ಹಿನ್ನೆಲೆಯಲ್ಲಿ ಅಪರೂಪ ಎನ್ನಿಸಬಹುದಾದ ಮ…

ದಂಡದ ಕೆಲಸಗಳು

ಸೊಕ್ಕಿದ ಸಲಗವ ಕಮಲದ ದಂಟಿನಲಿ
ಕಟ್ಟಿ ಹಿಡಿಯಲುಜ್ಜುಗಿಸುವಂತೆ

ಗಟ್ಟಿ ವಜ್ರವನು ಹೂವಿನ ದಳದಲಿ
ಪಟ್ಟೆನಿಸಿ ಮುರಿಯ ತೊಡಗುವಂತೆ

ಉಪ್ಪಿನ ಕಡಲನು ಜೇನ ಹನಿಯಿಂದ
ಹೆಚ್ಚು ರುಚಿಗೊಳಿಸ ಬಯಸುವಂತೆ

ಒಳ್ಳೆ ಮಾತಿನಲಿ ಮೂಳರ ದಾರಿಗೆ
ಜಗ್ಗಿಸಿ ತರುವುದು ದಂಡವಂತೆ!


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ವ್ಯಾಲಂ ಬಾಲ ಮೃಣಾಲ ತಂತುಭಿರಸೌ ರೋದ್ಧುಂ ಸಮುಜ್ಜೃಂಭತೇ
ಭೇತ್ತುಮ್ ವಜ್ರಮಣಿಂ ಶಿರೀಶಕುಸುಮ ಪ್ರಾಂತೇನ ಸನ್ನಹ್ಯತೇ||
ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಂಬುಧೇರೀಹತೇ
ಮೂರ್ಖಾನ್ ಯಃ ಪ್ರತಿನೇತುಮಿಚ್ಛತಿ ಬಲಾತ್ ಸೂಕ್ತೈಃ ಸುಧಾಸ್ಯಯಂದಿಭಿಃ ||

-ಹಂಸಾನಂದಿ

ಜೀವದ ಗೆಳೆಯರು

ಹಾಲದು ತನ್ನೊಳು ಬೆರೆಸಿದ ನೀರಿಗೆ
ತನ್ನ ನಡತೆಯನೆಲ್ಲವ ನೀಡುವುದು
ಹಾಲ ಕಾಯಿಸಲು ನೀರು ಗೆಳೆಯನ
ನೋವಿಗೆ ಮರುಗಿ ಹಬೆಯಾಡುವುದು

ನೀರಿನ ಪಾಡನು ನೋಡುತ ಹಾಲು
ಉಕ್ಕುತ ಬೆಂಕಿಗೆ ಹಾರುವುದು
ಬೆರೆಸಲು ಅದಕೆ ತುಸುವೇ ನೀರನು
ಕೂಡಲೆ ತಣಿವನು ಹೊಂದುವುದು!

ಒಳ್ಳೆಯ ಗೆಳೆಯರ ನಡುವೆ ಗೆಳೆತನ
ಎಂದಿಗು ಇರುವುದು ಹೀಗೆ;
ನೋವುನಲಿವಲಿ ಜೊತೆಯನು ಬಿಡದಿಹ
ಹಾಲಿನ ನೀರಿನ ಹಾಗೆ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಕ್ಷೀರೇಣಾತ್ಮಗತೋದಕಾಯ ಯಿ ಗುಣಾಃ ದತ್ತಾಃ ಪುರಾ ತೇSಖಿಲಾಃ
ಕ್ಷೀರೇ ತಾಪಮವೇಕ್ಷ್ಯ ತೇನ ಪಯಸಾ ಹ್ಯಾತ್ಮಾ ಕೃಶಾನೌ ಹುತಃ |
ಗಂತುಂ ಪಾವಕಮುನ್ಮನಸ್ತದಭವದ್ದೃಷ್ಟ್ವಾ ತು ಮಿತ್ರಾಪದಂ
ಯುಕ್ತಂ ತೇನ ಜಲೇನ ಶಾಮ್ಯತಿ ಸತಾಂ ಮೈತ್ರೀ ಪುನಸ್ತ್ವೀದೃಶೀ ||

क्षीरेणात्मगतोदकाय हि गुणाः दत्ताः पुरा तेऽखिलाः
क्षीरे तापमवेक्ष्य तेन पयसा ह्यात्मा कृशानौ हुतः ।
गन्तुं पावकमुन्मनस्तदभवद्दृष्ट्वा तु मित्रापदम्
युक्तं तेन जलेन शाम्यति सतां मैत्री पुनस्त्वीदृशी ॥

-ಹಂಸಾನಂದಿ

ಕೊ: ಮೂಲದಲ್ಲಿಲ್ಲದ ವಿವರಗಳು ಅನುವಾದದಲ್ಲಿದ್ದರೂ, ಅದು ಅರ್ಥಕ್ಕೆ ಪೂರಕವಾಗಿದೆಯೆಂದು ಎಣಿಸುವೆ

ಒಂದು ಕಿವಿಮಾತು

ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟ
ಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆ
ಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;
ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!

ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಅಗ್ರೇ ಗೀತಂ ಸರಸ ಕವಯಃ ಪಾರ್ಶ್ವತೋ ದಾಕ್ಷಿಣಾತ್ಯಾಃ
ಪಶ್ಚಾಲ್ಲೀಲಾವಲಯರಣಿತಣಂ ಚಾಮರಗ್ರಾಹಿಣೀನಾಂ|
ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ
ನೋಚೇಚ್ಚೇತಃ ಪ್ರವಿಶ ಸಹಸಾ ನಿರ್ವಿಕಲ್ಪೌ ಸಮಾಧೌ||

-ಹಂಸಾನಂದಿ

ಕೊ: ಇವತ್ತು ತಾನೇ ಸಿಂಹ ಎಸ್ ಎನ್ ಅವರ ಗೂಗಲ್ ಬಜ್ ನಲ್ಲಿ ಓದಿದ ಶ್ಲೋಕ. ನಿರ್ವಿಕಲ್ಪ ಸಮಾಧಿಗೆ ನನ್ನ ಅನುವಾದ ಏನೇನೂ ಚೆನ್ನಾಗಿಲ್ಲವೆಂದು ಗೊತ್ತಿದ್ದೂ ಹಾಕುವ ಧೈರ್ಯ ಮಾಡಿದ್ದೇನೆ!

ವಾಣಿಯ ವೈಪರೀತ್ಯ

ನಿಕ್ಕುವದಿ ವಾಣಿಯ ಹೋಲುವ
ಬೊಕ್ಕಸವು ಬೇರೆಲ್ಲೂ ಇಲ್ಲ;
ವೆಚ್ಚ ಮಾಡಿದರೆ ಹೆಚ್ಚುತಲಿದ್ದು
ಬಚ್ಚಿಡಲು ಸೊರಗುವುದಲ್ಲ!

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):

ಅಪೂರ್ವಃ ಕೋsಪಿ ಕೋಶೋಯಂ ವಿದ್ಯತೇ ತವ ಭಾರತಿ|
ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್ ||

-ಹಂಸಾನಂದಿ

ಶಿವನ ಒಲಿಸುವ ಪರಿ

Image
ದಟ್ಟಕಾಡಲೊಬ್ಬಂಟಿ ಅಲೆವರು
ಬೆಟ್ಟದ ತುದಿಗೂ ಏರುವರು

ಕೊಳದಾಳದಲಿ ಮುಳುಗುವರು,
ತಿಳಿಗೇಡಿಗಳು ಹೂಗಳಿಗೆಂದು!

ಮನದ ಕೊಳದಲೇ ಅರಳಿದ
ಹೂವೊಂದ ನೆಚ್ಚಿ ಮುಡಿಸಲು

ಉಮೆಯರಸ ಮೆಚ್ಚಿ ನಲಿವ-
ನೆಂಬುದನಿವರು ಅರಿವರೆಂದು?

ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯)

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

-ಹಂಸಾನಂದಿ

ಕೊ: ಉಮೆಯೊಡನೆ ನಂದಿಯೇರಿರುವ ಶಿವ, ಹೊಯ್ಸಳೇಶ್ವರ ದೇವಾಲಯ, ಹಳೇಬೀಡು
ಕೊ.ಕೊ: ವೈಶಾಖ ಶುದ್ಧ ಪಂಚಮಿಯಂದು ಶಂಕರಜಯಂತಿ, ಅಂದರೆ ಆದಿಶಂಕರರು ಹುಟ್ಟಿದ ದಿನ. ಅದು ನೋಡಿದಾಗ ಶಿವಾನಂದ ಲಹರಿಯ ನಾಲ್ಕಾರು ಶ್ಲೋಕಗಳನ್ನು ಓದಿದೆ. ಅದರಲ್ಲಿ ಒಂದರ ಅನುವಾದ ಇದು.

ಚಿತ್ರ ಕೃಪೆ: http://upload.wikimedia.org/wikipedia/commons/2/2d/Halebidu_shiva.jpg

ಬೇಡುವವನ ಪಾಡು

ಎಡವುವ ನಡಿಗೆ ಅಡಗಿದ ಗಂಟಲು
ಒಡಲಲಿ ಬೆವರು ಬೆದರಿದ ತನುವು
ಸಾವು ಬಳಿಸಾರೆ ಕಾಂಬ ಗುರುತುಗಳು
ಬೇಡುವನಲೂ ಕಾಣ ಸಿಕ್ಕಾವು!

ಸಂಸ್ಕೃತ ಮೂಲ:

ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |
ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ ||

-ಹಂಸಾನಂದಿ

ಕಳ್ಳಹೊಳೆ ಮತ್ತು ಹೇಮಾವತಿ

Image
ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.

ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು - ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇ…