Posts

Showing posts from January, 2011

ಬೆಲೆ ಅರಿಯದವರು

ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹ
ಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;
ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆ
ಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?

ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)

ಸಿಂಹೋ ವ್ಯಾಕರಣಸ್ಯ ಕರ್ತುರಹರತ್ ಪ್ರಾಣಾನ್ ಪ್ರಿಯಂ ಪಾಣಿನೇಃ
ಮೀಮಾಂಸಾಕೃತಂ ಉನ್ಮಮಾಥಸಹಸಾ ಹಸ್ತೀ ಮುನಿಂ ಜೈಮಿನಿಮ್ |
ಛಂದೋಜ್ಞಾನನಿಧಿಂ ಜಘಾನ ಮಕರೋ ವೇಲಾತಟೇ ಪಿಂಗಲಮ್
ಅಜ್ಞಾನಾವೃತ ಚೇತಸಾಮತಿರುಷಾಂ ಕೋSರ್ಥಸ್ತಿರಸ್ಚಾಂ ಗುಣೈಃ ||

-ಹಂಸಾನಂದಿ

(ಈ ಅನುವಾದದಲ್ಲಿ ನೆರವು ನೀಡಿದ ಗೆಳೆಯ ಶ್ರೀನಿವಾಸ್ ಅವರಿಗೆ ಧನ್ಯವಾದಗಳು)

ಹೊಟ್ಟೆ ತುಂಬಿಸದ ಭಾಷೆ

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು. ಒಬ್ಬರಿಗೆ ಸಂಗೀತ ಅಂದ್ರೆ ಆಗದು. ಇನ್ನೊಬ್ಬರಿಗೆ ಹಾಡನ್ನ ಕೇಳ್ದೇ ಇದ್ರೆ ತಲೆನೋವು ಬರುತ್ತೆ. ಈ ಯಾರಿಗೂ ಕ್ರಿಕೆಟ್ಟೇ ಆಗಲೀ, ಹಾಡು ಕೇಳೋದೇ ಆಗಲಿ, ಅನ್ನ ಕೊಡುವ ಕೆಲಸಗಳಲ್ಲ. ಆದರೂ ಅವರವರ ಸಂತೋಷಕ್ಕೆ ಅವರವರು ಮಾಡುವುದಷ್ಟೇ. ಎಷ್ಟೋ ಬ್ಲಾಗರುಗಳ ತುಂಬಾ ಒಳ್ಳೇ ಬರಹಗಳನ್ನ ಓದಿದೀನಿ. ಅದರಲ್ಲಿ ಎಷ್ಟು ಜನಕ್ಕೆ ಬರವಣಿಗೆ ಅನ್ನ ಕೊಡ್ತಿದೆಯೋ ಇಲ್ಲವೋ ನಾ ಕಾಣೆ. ಆದರೆ ನಾನು ಓದಿದಾಗ, ನನಗಂತೂ ಖುಷಿ ಅಂತೂ ಆಗ್ತಿದೆ. ಒಟ್ಟಿನಲ್ಲಿ ಅವರ ಹಾಡಿಗೆ ಅವರದೇ ಶ್ರುತಿ, ಅವರದೇ ತಾಳ ಅಂದುಕೊಳ್ಳೋಣ.

ಆದ್ರೆ ಯಾವತ್ತೂ ’ಭಾಷೆ’ಯೊಂದರಿಂದ ಅನ್ನ ಕಾಣೋದು ಕಷ್ಟ ಅನ್ನೋದು ಇವತ್ತಿನ ವಿಷಯವಲ್ಲ, ಬಹಳ ಹಿಂದಿನಿಂದಲೂ ಈ ದೂರು ಇದ್ದಿದ್ದೇ ಅನ್ನೋದಕ್ಕೆ ಈ ಸುಭಾಷಿತವೇ ಸಾಕ್ಷಿ!

ಭುಭುಕ್ಷಿತೈರ್ವ್ಯಾಕರಣಂ ನ ಭುಜ್ಯತೇ
ಪಿಪಾಸಿತೈಃ ಕಾವ್ಯರಸೋ ನ ಪೀಯತೇ |
ನಚ್ಛಂದಸಾ ಕೇನಚಿದುದ್ಧೃತಂ ಕುಲಂ
ಹಿರಣ್ಯಮೇವಾರ್ಜ್ಯಯ ನಿಷ್ಫಲಾಃ ಕಲಾಃ ||

(ಇದು ಮಾಘ ಕವಿ ಬರೆದ ಸುಭಾಷಿತವೆಂದು ಕ್ಷೇಮೇಂದ್ರನೆಂಬ ಕವಿ ಹೇಳಿದ್ದಾನಂತೆ)

ಇದನ್ನ ಹೀಗೆ ಕನ್ನಡಕ್ಕೆ ತಂದಿರುವೆ:

ಹಸಿದಾಗ ವ್ಯಾಕರಣವನುಣಲಾಗದು
ಬಾಯಾರಿಕೆಯಿಂಗಿಸದು ಸೊಗದ ಕವಿತೆ;
ಛಂದಸ್ಸಿನಿಂ…

ಊರಿಗೆ ಪ್ರೀತಿಯ ಕರೆಯೋಲೆ

ಜನವರಿಯ ಜಾತ್ರೆ. ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. ಚಳಿಗಾಲದ ಕಾವಳ. ಅದರ ಜೊತೆಗೆ ಸೊಗಡಿನ ಅವರೇಕಾಯಿ.ರಾತ್ರಿ ಓಡಾಡುವಾಗ ಜೀವವೇ ಬಾಯಿಗೆ ಬರುವಂತೆ ಬೊಗಳುವ ಬೀದಿ ನಾಯಿಗಳು. ಸುಧಾ ಹೋಟೆಲ್ಲಿನ ಮಸಾಲೆ ದೋಸೆ. ಕಟ್ಟಿನ ಕೆರೆಯ ಬಸ್ ಸ್ಟಾಂಡ್. ಜಾತ್ರೆ ಮಾಳಕ್ಕೆ ಹೋಗುವ ಅಲಂಕಾರ ಮಾಡಿರುವ ರಾಸುಗಳು. ಪಿಕ್ಚರ್ ಪ್ಯಾಲೇಸ್ ಮುಂದೆ ಚೌಕಾಸಿ ವ್ಯಾಪಾರ. ಗಂಧದ ಕೋಟಿ. ಸಂಪಿಗೆ ರಸ್ತೆ. ವರುಷದಲ್ಲಿ ಒಮ್ಮೆ ಮಾತ್ರ ಹತ್ತು ದಿನ ತೆಗೆಯುವ ಊರ ದೇವತೆಯ ಗುಡಿ. ಮೂರು ತಿಂಗಳ ಸೋನೆ ಮಳೆ. ಗಣಪತಿ ಪೆಂಡಾಲಿನಲ್ಲಿ ಕದ್ರಿ ಗೋಪಾಲನಾಥ್ ಸ್ಯಾಕ್ಸಫೋನ್ ಕಚೇರಿ. ಡಬಲ್ ಟ್ಯಾಂಕ್ ಬಳಿ ಆಡುವ ಹುಡುಗರು. ಆಂಜನೇಯನ ದೇವಸ್ಥಾನದಲ್ಲಿ ಸಂಸ್ಕೃತ ಶಾಲೆ. ವರ್ಷಗಟ್ಟಲೆ ಟಾರು ಕಾಣದೇ ಮಳೆಗಾಲದಲ್ಲಿ ಕೆಸರಿನ ಓಟಕ್ಕೆ ಲಾಯಕ್ಕಾದ ರಸ್ತೆಗಳು. ಪಾರ್ಕಿನ ನಡುವೆ ಯಾರೂ ನೋಡಲು ಬರದ ಮ್ಯೂಸಿಯಂ ನಲ್ಲಿ ಸುಂದರ ಶಿಲ್ಪಗಳು. ಮಂಗಳೂರು ಪಾತ್ರೆ ಅಂಗಡಿಯ ಮುಂದೆ ಹೊಳೆಯುವ ತಾಮ್ರದ ಕೊಡಗಳು. ಹಳದೀ ಬಣ್ಣದ ನದೀ ದೇವತೆಯ ಕೈಯಲ್ಲಿ ಒಣಗಿನಿಂತ ನೀರಿನ ಕೊಡ. ಎಳೇ ಸೌತೇಕಾಯ್ ಎಳೇ ಸೌತೇಕಾಯ್ ಅಂತ ಬಸ್ ಕಿಟಕಿಗೇ ತಂದು ತಂದು ಮಾರುವ ಮಾರಾಟಗಾರರು. ರಾಮಚಂದ್ರ ಶೆಟ್ಟರ ಚಿನ್ನದಂಗಡಿ. ಮಠದ ಕಟ್ಟೆಯಲ್ಲಿ ಬಟ್ಟೆಯನ್ನೇ ಬಲೆ ಮಾಡಿ ಮೀನು ಹಿಡಿಯ ಹೋಗುವ ಶಾಲೆಯ ಹುಡುಗರು. ಮಹಾರಾಜ ಪಾರ್ಕಿನಲ್ಲಿರುವ ಪಾಪದ ಜಿಂಕೆಗಳು. ಅಡ್ಲಿ ಮನೆ ರಸ್ತೆ ಆಚೆಯ ಹುಣಸಿನ ಕೆರೆ. ’ಅಲ್ಲಿ ಕರಡಿ …

ಮೊಂಡು ಬುದ್ಧಿಯವರು

ಚುರುಕು ಬುದ್ಧಿಯವರು
ಮೊನಚು ಅಂಬಿನಂತೆ;
ತುಸು ಸೋಂಕಿದರೂ
ನೇರ ಒಳ ಹೊಗುವರು.

ಮೊಂಡ ಬುದ್ಧಿಯವರೋ
ಬೀರಿದ ಕಲ್ಲಿನಂತೆ;
ಎಷ್ಟು ತಗುಲಿದರೂ
ಹೊರಗೇ ಉಳಿವರು!


ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :

ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮಂತರ್ವಿಶಂತಿ ಚ |
ಬಹುಸ್ಪೃಶಾSಪಿ ಸ್ಥೂಲೇನ ಸ್ಥೀಯತೇ ಬಹಿರಶ್ಮವತ್ ||

-ಹಂಸಾನಂದಿ

ಮೀನಿಗೆ ತಕ್ಕ ಗಾಳ

ಜಿಪುಣನ ಸೆಳೆಯಬೇಕು ಹಣದ ಬಲದಿಂದ
ಕಲ್ಲೆದೆಯವನನೂ ಬೇಡಿ ಅಂಗಲಾಚುತ್ತ;
ತಿಳಿಗೇಡಿಯ ತೋರ್ಕೆಯಲಿ ಹಿಂಬಾಲಿಸುತ
ಅರಿತವನನಾದರೋ ದಿಟವ ನುಡಿಯುತ್ತ!

ಸಂಸ್ಕೃತ ಮೂಲ (’ಹಿತೋಪದೇಶ’ದಿಂದ):

ಲುಬ್ಧಮರ್ಥೇನ ಗೃಹ್ಣೀಯಾತ್ ಸ್ತಭ್ಧಮಂಜಲಿ ಕರ್ಮಣಾ |
ಮೂರ್ಖಂ ಛಂದಾನುವೃತ್ತೇನ ಯಥಾತಥ್ಯೇನ ಪಂಡಿತಮ್ ||

-ಹಂಸಾನಂದಿ

ಪುಣ್ಯವಂತರು

ನಡತೆಯಿಂದ ಸಂತಸವನೆ ತರುವ ಮಕ್ಕಳು
ಮಡದಿ ಗಂಡನೊಳಿತ ಬಯಸುವಂಥವಳು
ಬದಲಾಗದ ಗೆಳೆಯ ನೋವಲೂ ನಲಿವಲೂ
ಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋ
ಯದ್ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |
ತನ್ಮಿತ್ರಮಾಪದಿ ಸುಖೇ ಚ ಸಮಕ್ರಿಯಂ ಯದ್
ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ||

-ಹಂಸಾನಂದಿ

ಕೊ: ಮೂಲದ ’ಪುತ್ರೋ-ಮಗ’ ಅನ್ನುವುದನ್ನು ನಾನು ’ಮಕ್ಕಳು’ ಮಾಡಿದ್ದೇನೆ, ಯಾಕಂದ್ರೆ ಮಗನೇ ಆಗಲಿ ಮಗಳೇ ಆಗಲಿ, ಒಳ್ಳೇ ಮಕ್ಕಳಾಗಬೇಕಾದ್ರೆ ಪುಣ್ಯ ಮಾಡಿರಲೇಬೇಕು!
ಕೊ.ಕೊ: ಹದುಳ = ಕ್ಷೇಮ, ಶ್ರದ್ಧೆ, ಸಂತೋಷ ಹೀಗೆಲ್ಲಾ ಅರ್ಥಗಳಿವೆ. ಹಾಗಾಗಿ, ಹದುಳಿಗ = ಪುಣ್ಯವಂತ ಅಂತ ಬಳಸಿದ್ದೇನೆ

ಕನ್ನಡ ಮತ್ತು ಸಂಸ್ಕೃತದ ನಡುವೆ ಸಂಬಂಧವೇನು?

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:

"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾಷೆಗಳಲ್ಲಿ ಅನೇಕ ಹೋಲಿಕೆಗಳನ್ನು ಕಂಡುಕೊಳ್ಳಬಹುದು. ಅದರಿಂದ ಕನ್ನಡ ಹಿಂದಿ , ಗುಜರಾತಿ ಅಥವಾ ಇನ್ನಾವುದೇ ಉತ್ತರ ಬಾರತೀಯ ಭಾಷೆಯನ್ನೂ ಕಲಿಯಲು ಸಾಕಷ್ಟು ಅನುಕೂಲವಾಗುತ್ತದೆ. ಹಾಗೇ ತೆಲುಗು, ತಮಿಳು ಅಥವಾ ಮಲಯಾಳಂ ಭಾಷೆಯಲ್ಲಿಯೂ ಸಹ ಅದೇ ರೀತಿ ಭಾವನೆ ಬರಬಹುದು. ಅಂದರೆ, ಭಾರತದ ಎಲ್ಲಾ ಭಾಷೆಗಳೆಲ್ಲಾ ಒಂದು ರೀತಿಯ ಸಾಮಾನ್ಯ ನಿಯಮಗಳನ್ನು ಅನುಸರಿಸುವುದು ಕಂಡು ಬರುತ್ತವೆಯಾ? ಆದೇ ರೀತಿ ಸಂಸ್ಕೃತ ಮೂಲದ ಭಾಷೆಗಳಿಗೂ (ಮರಾಠಿ, ಗುಜರಾತಿ,ಹಿಂದಿ ಇತ್ಯಾದಿ), ದ್ರಾವಿಡ ಮೂಲದ ತೆಲುಗು, ತಮಿಳು, ಕನ್ನಡ, ಮಲಯಾಳಂಗೆ ಇರುವ ವ್ಯತ್ಯಾಸವನ್ನು ತಿಳಿಸುವುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತೆ ಅಂತಲೂ ಓದಿದ್ದೇನೆ. ಇದು ಹೇಗೆ?"

ನನ್ನ ಗೆಳೆಯರಿಗೆ ನಾನು ಕೊಟ್ಟ ಇಮೆಯ್ಲ್ ಗಳಲ್ಲಿ ಕೊಟ್ಟ ಉತ್ತರವನ್ನೇ ಇಲ್ಲಿ ಹಾಕುತ್ತಿದ್ದೇನೆ - ಏನಿಲ್ಲದಿದ್ದರೂ ನನ್ನ ನೆನಪಿನಲ್ಲಿ ಉಳಿಯಲಿ ಅಂತ ಆದ್ರೂ. ಎಷ್ಟೇ ಅಂದ್ರೂ ಒಂದು ಬ್ಲಾಗಿನ ಮೂಲ ಉದ್ದೇಶ ಅದೇ ತಾನೇ!

ಈ ಬಗ್ಗೆ ದೊಡ್ಡ ದೊಡ್ಡ ವಿದ್ವಾಂಸರ ಪುಸ್ತಕಗಳು ಬೇಕಾದಷ್ಟಿವೆ. ಇದೊಂದು ನನ್ನ ಸಣ್ಣ ಇಣುಕು ನೋಟ ಅಷ್ಟೇ.

ಸಂಧಿ:

ಸಂಧಿಗಳಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ವ್…

ಉರಿಯುವ ಕರ್ಪೂರ

ಕುತ್ತಿಗೆ ಬಿದ್ದರೂ ದೊಡ್ಡವರು
ತಮ್ಮ ನಡತೆಯನು ಬಿಡದಿಹರು;
ಕಿಚ್ಚು ತಗುಲಿದರು ಕಪ್ಪುರವು
ಕಮ್ಮನೆ ಕಂಪನೇ ಬೀರುವುದು!

ಸಂಸ್ಕೃತ ಮೂಲ:

ಸ್ವಭಾವಂ ನ ಜಹಾತ್ಯೇವ ಸಾಧುರಾಪದ್ಗತೋSಪಿ ಸನ್ |
ಕರ್ಪೂರ: ಪಾವಕಸ್ಪೃಷ್ಟ: ಸೌರಭಂ ಲಭತೇತರಾಮ್ ||

-ಹಂಸಾನಂದಿ

ಕೊ.ಕೊ: ಇವತ್ತು ಸಂಕ್ರಾಂತಿ. ಎಳ್ಳು ತಿಂದು ಒಳ್ಳೇ ಮಾತಾಡ್ತಾ, ನಾವೆಲ್ಲರೂ ’ದೊಡ್ಡವ’ರಾಗೋಣ ಅನ್ನುವ ಹಾರೈಕೆ ನನ್ನದು!

ಮೊಂಡು-ಮೊನಚು

ಚುರುಕು ಬುದ್ಧಿಯವರು
ಮೊನಚು ಅಂಬಿನಂತೆ;
ತುಸು ಸೋಂಕಿದರೂ
ನೇರ ಒಳ ಹೊಕ್ಕಾರು.

ಮೊಂಡ ಬುದ್ಧಿಯವರೋ
ಬೀರಿದ ಕಲ್ಲಿನಂತೆ;
ಎಷ್ಟು ತಗುಲಿದರೂ
ಹೊರಗೇ ಉಳಿವರು!


ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :

ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮಂತರ್ವಿಶಂತಿ ಚ |
ಬಹುಸ್ಪೃಶಾSಪಿ ಸ್ಥೂಲೇನ ಸ್ಥೀಯತೇ ಬಹಿರಶ್ಮವತ್ ||

-ಹಂಸಾನಂದಿ

ಅರಿವೆಂಬ ಕಣ್ಣು

ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇ
ಬೇರೆ ಪಂಡಿತರರಿವು ತನ್ನದಾಗುವುದಿಲ್ಲ
ಚಂದಿರನ ಅಂದವನು ನಾವೆ ದಿಟ್ಟಿಸದೇ
ಕಂಡವರು ನೋಡಿದರೆ ಮನದಣಿವುದಿಲ್ಲ

ಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)

ವಸ್ತು ಸ್ವರೂಪಂ ಸ್ಫುಟ ಬೋಧ ಚಕ್ಷುಷಾ
ಸ್ವೇನೈವ ವೇದ್ಯಂ ನ ತು ಪಂಡಿತೇನ |
ಚಂದ್ರ ಸ್ವರೂಪಂ ನಿಜ ಚಕ್ಷುಷೈವ
ಜ್ಞಾತವ್ಯಂ ಅನೈರವಗಮ್ಯತೇ ಕಿಂ ||

-ಹಂಸಾನಂದಿ

ಬುರುಡೆಯಿಲ್ಲದ ವೀಣೆ ನುಡಿದೀತೇ?

Image
ಮನೆತನ ಒಳ್ಳೇದಿದ್ರೆ ಸಾಲ್ದು
ನಡತೆ ಚೆನ್ನಾಗಿದ್ರೆ ಸಾಲ್ದು
ಮನ್ನಣೆ ಸಿಗ್ಬೇಕಿದ್ರೆ ನಿನಗೆ
ಒಳ್ಳೇವ್ರೊಡನಾಟ ಬೇಕಲ್ಲ ;

ಒಳ್ಳೇ ಬಿದ್ರಲ್ ಮಾಡಿದ್ರೂನೂ
ಚೆನ್ನಾಗ್ ತಂತಿ ಕಟ್ಟಿದ್ರೂನೂ
ಸೋರೆಯ ಬುರುಡೆ ಇಲ್ಲದೆ ವೀಣೆ
ಇಂಪಾಗ್ ಸರಿಗಮ ನುಡಿಯೋಲ್ಲ!

ಸಂಸ್ಕೃತ ಮೂಲ:

ವಂಶಭವೋ ಗುಣವಾನಪಿ
ಸಂಗವಿಶೇಷೇಣ ಪೂಜ್ಯತೇ ಪುರುಷಃ |
ನ ಹಿ ತುಂಬೀಫಲವಿಕಲೋ
ವೀಣಾದಂಡಃ ಪ್ರಯಾತಿ ಮಹಿಮಾನಮ್ ||

-ಹಂಸಾನಂದಿ

ಚಿತ್ರ ಕೃಪೆ: http://www.indianetzone.com/27/rudra_veena_been__indian_musical_instrument.htm

ಕೊಸರು : ಹಿಂದೆ ವೀಣೆಯ ದಂಡಿಯನ್ನು ( ಉದ್ದನೆಯ, ನುಡಿಸುವ ಮೆಟ್ಟಿಲುಗಳಿರುವ ಭಾಗ) ವನ್ನು ಬಿದಿರಿನಿಂದ ಮಾಡುವ ರೂಢಿಯಿತ್ತು. ಈಗ ಕರ್ನಾಟಕ ಸಂಗೀತವನ್ನು ನುಡಿಸುವ ಸರಸ್ವತೀ ವೀಣೆಯ ದಂಡಿಯನ್ನು ಸಾಧಾರಣವಾಗಿ ಹಲಸಿನ ಮರದಲ್ಲಿ ಮಾಡಿದ್ದರೂ, ಹಿಂದೂಸ್ತಾನಿ ಸಂಗೀತವನ್ನು ನುಡಿಸುವ ರುದ್ರವೀಣೆಯಲ್ಲಿ ಬಿದುರಿನಿಂದ ಮಾಡಿದ ದಂಡಿಯೇ ಇನ್ನೂ ರೂಢಿಯಲ್ಲಿದೆ.

ಕೊನೆಯ ಕೊಸರು: ಇದೇ ರೀತಿ, ಅನುರಣನವನ್ನು (resonance) ಉಂಟುಮಾಡುವ ಬುರುಡೆಗೆ ಹಿಂದಿನಿಂದ ಸೋರೆಯ ಬುರುಡೆಯನ್ನು ಬಳಸುವ ಪದ್ಧತಿ ಬಂದಿದೆ. ಸರಸ್ವತೀ ವೀಣೆಯಲ್ಲಿ ಹಲಸಿನ ಮರದ ಬುರುಡೆಯಿರುವುದೂ ಕಾಣಬರುತ್ತದೆ.

ಕೊಟ್ಟ ಕೊನೆಯ ಕೊಸರು: ಸಂಸ್ಕೃತ ಮೂಲದಲ್ಲಿದ್ದ ಶ್ಲೇಷವನ್ನು ಕನ್ನಡದ ನನ್ನ ಅನುವಾದದಲ್ಲಿ ತರಲಾರದೇ ಹೋದೆ. ಸಂಸ್ಕೃತದಲ್ಲಿ ವಂಶ ಎಂದರೆ ಬಿದುರು ಎಂದು, ಮತ್ತು ಗುಣ ಎಂದರೆ ತಂತಿ ಎಂದೂ ಅರ್ಥವ…