Posts

Showing posts from February, 2011

ಮುತ್ತುಗಳ ಲೆಕ್ಕ

ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆ
ಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;
ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದು
ದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು ಮುತ್ತಿದ್ದಾವು ಹೇಳು! ಸಂಸ್ಕೃತ ಮೂಲ: ಭಾಸ್ಕರಾಚಾರ್ಯನ ’ಲೀಲಾವತಿ’ ಯ ೫೬ನೇ ಶ್ಲೋಕ
ಹಾರಸ್ತಾರಸ್ತರುಣ್ಯಾ ನಿಧುವನ ಕಲಹೇ ಮೌಕ್ತಿಕಾನಾಂ ವಿಶೀರ್ಣೇ
ಭೂನೌ ಯಾತಾತ್ರಿಭಾಗಃ ಶಯನತಲಗತಃ ಪಂಚಮಾಂಶೋಂಸ್ಯ ದೃಷ್ಟಃ |
ಪ್ರಾಪ್ತಃ ಷಷ್ಟಾಃ ಸುಕೇಶ್ಯಾ ಗಣಕ ದಶಮಕಃ ಸಂಗ್ರಹೀತಃ ಪ್ರಿಯೇಣ
ದೃಷ್ಟಂ ಷಟ್ಕಂಚ ಸೂತ್ರೇ ಕಥಯ ಕತಿಪಯೈಃ ಮೌಕ್ತಿಕೈರೇಷ ಹಾರಃ ||-ಹಂಸಾನಂದಿಕೊ: ಈ ಲೆಕ್ಕವನ್ನು ಬಿಡಿಸುವ ಕೆಲಸವನ್ನು ಓದುಗರಿಗೆ ಬಿಡಲಾಗಿದೆ :-)
ಕೊ.ಕೊ: ಈ ಪದ್ಯದ ಬಗ್ಗೆ, ಲೀಲಾವತಿಯ ಬಗ್ಗೆ ಹೆಚ್ಚಿನ ಹಿನ್ನಲೆಗಾಗಿ ಇಲ್ಲಿ ಚಿಟಕಿಸಿ.

ಗಟ್ಟಿಗರ ಸೋಲು

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನು
ಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಮತ್ತೇಭಕುಂಭದಲನೇ ಭುವಿ ಸಂತಿ ಶೂರಾಃ
ಕೇಚಿತ್ಪ್ರಚಂಡ ಮೃಗರಾಜವಧೇSಪಿ ದಕ್ಷಾಃ |
ಕಿಂತು ಬ್ರವೀಮಿ ಬಲಿನಾಂ ಪುರತಃ ಪ್ರಸಹ್ಯ
ಕಂದರ್ಪದರ್ಪದಲನೇ ವಿರಲಾ ಮನುಷ್ಯಾಃ||

-ಹಂಸಾನಂದಿ

ಶಿವನಿಗೊಂದು ಕಿವಿಮಾತು

Image
ನನ್ನ ಕೊಳಕನೆಂದು ನೀ ತಿಳಿದರೆ
ನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ?
ದುಷ್ಟನು, ಕೆಟ್ಟಕೆಳೆಯವನು ನಾನೆನಲು
ವಿಷದಕಲೆಯವನು ಹಾವಹಿಡಿದನು ನೀ ತಾನೆ!
ಸಂಸ್ಕೃತ ಮೂಲ:
ಅಶುಚಿಂ ಯದಿ ಮಾನು ಮನ್ಯಸೇ
ಕಿಮಿದಂ ಮೂರ್ಧ್ನಿ ಕಪಾಲದಾಮ ತೇ|
ಉತ ಶಾಠ್ಯಮಸಾಧು ಸಂಗತಿಂ
ವಿಷಲಕ್ಷ್ಮಾಸಿ ನ ಕಿಂ ದ್ವಿಜಿಹ್ವಧೃತ್||

-ಹಂಸಾನಂದಿ

ಚಿತ್ರ ಕೃಪೆ: ವಿಕಿಪೀಡಿಯಾ

ಹೋಗಬಾರದ ಮನೆ

ಹೋದರೆದ್ದು ನಿಂತು ನಗುತಾ
’ಹದುಳವಿರುವಿರೇ?’ ಎನ್ನದ
ಕೆಡುಕು-ಒಳಿತನು ಹಂಚಿಕೊಳ್ಳದ
ಬೀಡಿಗೆಂದೂ ಹೊಗದಿರು.


ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)

ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |
ಗುಣದೋಷಕಥಾ ನೈವ ತತ್ರ ಹರ್ಮ್ಯೇ ನ ಗಮ್ಯತೇ ||

-ಹಂಸಾನಂದಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

ಮೈಸೂರು ಮಲ್ಲಿಗೆಯ ಸೊಗಸನ್ನು ತಮ್ಮ ಕವಿತೆಗಳ ಮೂಲಕ ಕನ್ನಡಿಗರಿಗೆ ಕೊಟ್ಟ ಕೆ.ಎಸ್.ನರಸಿಂಹಸ್ವಾಮಿಯವರಿಗೆ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಅದೇ ಕೋಟಿ ರೂಪಾಯಿ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಮೈಸೂರು ಅನಂತ ಸ್ವಾಮಿಯವರಿಗೂ ಹಾಗೇ ಇದ್ದಿರಬೇಕು ಅನ್ನಿಸುತ್ತೆ. ಇಲ್ಲದಿದ್ದರೆ, ಅವರಿಗೆ ಆ ಹಾಡನ್ನು, ಅಷ್ಟು ಚೆನ್ನಾಗಿ ಹಾಡಲು ಸಾಧ್ಯವೇ ಆಗುತ್ತಿರಲಿಲ್ಲ ಅನ್ನುವುದು ನನ್ನ ಅಭಿಪ್ರಾಯ. ನಾನೂ ಅವರಂತೆ ಒಂದು ಹೊಸ ಕವಿತೆ ಬರೆಯೋಣವೆಂದು ನೋಡಿದ್ದೇನೆ. ಆದರೆ, ನಾನು ಕೆ.ಎಸ್.ನ. ಅವರಂತೆ ಕವಿಯಾಗಲಿಲ್ಲವೇ? ನನಗೆ ಅನ್ನಿಸೋ ತರಹ, ನನ್ನಂತೆ ಎಷ್ಟೋ ಜನಗಳಿಗೂ ಅದೇ ಭಾವನೆಯಿದ್ದರೂ, ಇದೇ ಸಮಸ್ಯೆಯ ಕಾರಣ ಆ ರೀತಿ ಹೊಸ ಪದ್ಯಗಳನ್ನು ಹಾಡಿಲ್ಲ ಅಂತ ಕಾಣುತ್ತೆ. ಇದು ಒಂದು ತರಹ ಒಳ್ಳೆಯದೇ ಆಯಿತು. ಇಲ್ಲದಿದ್ದರೆ, ಮೈಸೂರ ಮಲ್ಲಿಗೆಗೆ ಅದಕ್ಕೆ ತಕ್ಕಷ್ಟು ಪ್ರಖ್ಯಾತಿ ಬರುತ್ತಲೇ ಇರಲಿಲ್ಲವೇನೋ! ಶಾಂತಂ ಪಾಪಂ! ಅಂತಹ ದೊಡ್ಡ ಕವಿಗಳಿಗೆ ಎಷ್ಟು ಅನ್ಯಾಯವಾಗಿಬಿಡುತ್ತಿತ್ತು ಅಲ್ಲವೇ?

ಅದಿರಲಿ. ನರಸಿಂಹ ಸ್ವಾಮಿ ಅವರು ಹೀಗೆ ಹೊಗಳೋದಕ್ಕೂ, ಕವಿತೆ ಬರೆಯಲು ಬರದ ನಮ್ಮ ನಿಮ್ಮಂತಹವರು ಹೊಗಳಲು ಪ್ರಯತ್ನಿಸೋದಕ್ಕೂ, ಹೆಂಡತಿಯರ ಯಾವ ಗುಣ ಕಾರಣವಾಗಿರಬಹುದು? ನಿಜ ಹೇಳಬೇಕೆಂದರೆ, ಮನೆಯ ಒಡತಿ ಸರಿ ಇಲ್ಲದಿದ್ದರೆ, ಮನೆ ಮೂರಾಬಟ್ಟೆಯಾಗಿರುವ ಎಷ್ಟೋ ಸಂಸಾರಗಳಿವೆ. ಅಂದ ಹಾಗೆ, ಹೆಂಡತಿ ಎಂದರೆ ಹೆಣ್ಣು ಒಡತಿ ಅಂತಲೇ? ಒಡತಿ ಅಂದಮೇಲೆ ಹೆಣ್ಣೇ ಆಗಿರಬೇಕಲ್ಲ? ಹಾಗಾದರ…

ಕನ್ನಡಿಗರು ಓದಬೇಕಾದ ಎರಡು ಪುಸ್ತಕಗಳು

Image
ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು ಈ ಮಾತಿನ ಸಾರಾಂಶ.

ಒಂದು ವಿಷಯದಲ್ಲಿ ನಮ್ಮ ತಿಳಿವು ಹೆಚ್ಚಬೇಕಾದರೆ ಅದರ ಹಲವಾರು ಮಗ್ಗುಲುಗಳನ್ನೂ ನೋಡುವುದು ಒಳ್ಳೆಯದು. ಇಲ್ಲದಿದ್ದರೆ, ನಮ್ಮ ತಿಳಿವೂ ನಾಲ್ಕು ಜನ ಕುರುಡರು ಆನೆಯ ಸ್ವರೂಪವನ್ನು ವಿವರಿಸಿದ ರೀತಿ ಆಗುವ ಭಯವೂ ಇದ್ದೇ ಇದೆ. ನಾನು ಸಾಕಿದ ಮೊಲಕ್ಕೆ ಮೂರೇ ಕೊಂಬು ಎಂದು ವಿತಂಡವಾದ ಮಾಡುವವರನ್ನು ನೋಡಿದಾಗಲೆಲ್ಲ ನನಗೆ ಈ ಕಥೆ ನೆನಪಾಗುತ್ತಲೇ ಇರುತ್ತದೆ.

ಇವತ್ತು ಹಳೇಸೇತುವೆಯಲ್ಲಿ ಫೆಬ್ರವರಿ ಹದಿನಾಲ್ಕಕ್ಕೆ ಅನುಕರಣೆಯ ಆಚರಣೆಗಳ ಬದಲು, ಒಂದೋ ಎರಡೋ ಬದುಕಿನ ಅರ್ಥವನ್ನು ತಿಳಿಸುವ ಪುಸ್ತಕಗಳನ್ನು ಕೊಳ್ಳಿ ಅಂತಓದಿದಾಗ, ನಾನು ಓದಿದ, ಮತ್ತೆ ಕನ್ನಡ ನುಡಿ- ಕನ್ನಡ ನಾಡುಗಳ ಹಿನ್ನೆಲೆ ಬಗ್ಗೆ ಆಸಕ್ತಿ ಇರುವ ಎಲ್ಲ ಕನ್ನಡಿಗರೂ ಓದಬೇಕಾದ ಎರಡು ಪುಸ್ತಕಗಳ ಬಗ್ಗೆ ಹೇಳಬೇಕೆನಿಸಿತು:

ಮೊದಲನೆಯದು ಸೇಡಿಯಾಪು ಕೃಷ್ಣ ಭಟ್ಟರ ವಿಚಾರ ಪ್ರಪಂಚ.

ಸೇಡಿಯಾಪು ಕೃಷ್ಣಭಟ್ಟರು ಹಲವಾರು ಸಾಹಿತ್ಯ ಸಂಚಿಕೆಗಳಲ್ಲಿ ಬರೆದ ಬರಹಗಳು, ಹಲವೆಡೆ ಮಾಡಿದ ಭಾಷಣಗಳು ಇದರಲ್ಲಿವೆ.


ಕೃಷ್ಣಭಟ್ಟರು ಹಲವು ಭಾಷೆಗಳಲ್ಲಿ ವಿದ್ವಾಂಸರು. ಕನ್ನಡ, ತುಳು, ಸಂಸ್…

ಚೆಲುವೆಯ ನೋಟ

ದೂರ ಸರಿ ಗೆಳೆಯ!

ದಿಟದಿ ಚಂಚಲೆಯೀ
ಸೊಬಗಿನವಳು;
ಹೆಡೆಯನಾಡಿಸುವ
ಚೆಲುವ ನಾಗರವ
ಹೋಲುವಳು.

ದೂರದಿಂದಲೇ ತನ್ನ
ಕುಡಿ ನೋಟವೆನ್ನುವ
ವಿಷದ ಉರಿಯಲ್ಲೇ
ನಿನ್ನ ಸುಡಬಲ್ಲಳು!

ನಿನ್ನ ಕಚ್ಚಿದರೆ
ಬೇರೆ ಹಾವುಗಳು,
ಬದುಕಿಸಿಯಾರು
ನುರಿತ ವೈದ್ಯರು


ಚತುರೆ ಹೆಣ್ಣೆಂಬ
ಹಾವಿಗೆ ಸಿಲುಕಲು
ಉಳಿಸುವ ಆಸೆಯ
ತೊರೆದುಬಿಡುವರು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಅಪಸರ ಸಖೇ ದೂರಾದಸ್ಮಾತ್ ಕಟಾಕ್ಷ ವಿಷಾನಲಾತ್
ಪ್ರಕೃತಿ ಕುಟಿಲಾದ್ಯೋಷಿತ್ಸರ್ಪಾದ್ವಿಲಾಸಫಣಾಭೃತಃ
ಇತರ ಫಣಿನಾ ದಷ್ಟಃ ಶಕ್ಯಶ್ಚಿಕಿತ್ಸಿತುಮ್ ಔಷಧೈಃ
ಚತುರವನಿತಾ ಭೋಗಿಗ್ರಸ್ತಂ ತ್ಯಜಂತಿ ಹಿ ಮಂತ್ರಿಣಃ

( ಎರಡನೇ ಸಾಲಿಗೆ ’ಪ್ರಕೃತಿ ವಿಷಮಾದ್ಯೋಷಿತ್ಸರ್ಪಾದ್ವಿಲಾಸ ಫಣಾಭೃತ” ಎಂಬ ಪಾಠಬೇಧವನ್ನೂ ಓದಿದ್ದೇನೆ )

-ಹಂಸಾನಂದಿ

ಚಿಗರೆ ಕಣ್ಣಿನವಳ ತಪ್ಪು

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿ
ಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವ
ತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರು
ತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಏತಾಶ್ಚಲದ್ವಲಯ ಸಂಹತಿ ಮೇಖಲೋತ್ಥ
ಝಂಕಾರನೂಪುರ ಪರಾಜಿತ ರಾಜಹಂಸ್ಯಃ |
ಕುರ್ವಂತಿ ಕಸ್ಯ ನ ಮನೋ ವಿವಶಂ ತರುಣ್ಯೋ
ವಿತ್ರಸ್ತ ಮುಗ್ಧಹರಿಣೀಸದೃಶೈಃ ಕಟಾಕ್ಷೈಃ ||

-ಹಂಸಾನಂದಿ

ಸವತಿ ಮಾತ್ಸರ್ಯ

ಚುಕ್ಕಿಗಳಿಗೆಲ್ಲ ಸವತಿ ಸ್ವಾತಿ ಎಂಬುವಳು
ಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿ
ಹೆತ್ತಳು ರೋಹಿಣಿಯು ನೀಲರತುನವ ತಾನು
ಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!


ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)

ಸ್ವಾತೀ ಸಪತ್ನೀ ಕಿಲ ತಾರಕಾಣಾಂ
ಮುಕ್ತಾಫಲಾನಾಂ ಜನನೀತಿ ರೋಷಾತ್
ಸಾ ರೋಹಿಣೀ ನೀಲಮಸೂತ ರತ್ನಂ
ಕೃತಾಸ್ಪದಂ ಗೋಪವಧೂ ಕುಚೇಷು

-ಹಂಸಾನಂದಿ

ಕೊನೆಯ ಕೊಸರು : ದಕ್ಷ ಬ್ರಹ್ಮನಿಗೆ ೨೭ ಹೆಣ್ಣು ಮಕ್ಕಳು, ಅವರೆಲ್ಲರನ್ನೂ ಚಂದ್ರನಿಗೆ ಮದುವೆ ಮಾಡಿಕೊಟ್ಟ ಅನ್ನುವುದೊಂದು ಕಥೆ. ಇವರೇ ಕೃತ್ತಿಕೆಯಿಂದ ಭರಣಿಯ ವರೆಗಿನ ೨೭ ನಕ್ಷತ್ರಗಳು. ಹೀಗಾಗಿ ಇವರೆಲ್ಲ ಒಬ್ಬರಿಗೊಬ್ಬರು ಸವತಿಯರಾದರು.ಸ್ವಾತೀ ನಕ್ಷತ್ರದಲ್ಲಿ ಬಿದ್ದ ಮಳೆನೀರು ಕಪ್ಪೆ ಚಿಪ್ಪಿನೊಳಗೆ ಹೊಕ್ಕರೆ ಅದು ಮುತ್ತಾಗುತ್ತೆ ಅನ್ನುವುದೊಂದು ನಂಬಿಕೆ. ಹಾಗಾಗಿ ಎಲ್ಲ ಮುತ್ತುಗಳಿಗೂ ಸ್ವಾತಿಯೇ ತಾಯಾದಳು. ಇದೇ ಸವತಿ ಮಾತ್ಸರ್ಯಕ್ಕೆ ಕಾರಣವಾಯಿತು. ಅದಕ್ಕೆಂದೇ ರೋಹಿಣಿಯು ನೀಲಬಣ್ಣದ ರತ್ನವೊಂದನ್ನು ಹೆತ್ತಳು. (ಕೃಷ್ಣ ಹುಟ್ಟಿದ್ದು ಚಂದ್ರ ರೋಹಿಣೀ ನಕ್ಷತ್ರದಲ್ಲಿದ್ದಾಗ ಅನ್ನುವುದನ್ನು ನೆನೆಸಿಕೊಳ್ಳಿ).

ಅಂದಹಾಗೆ, ರೋಹಿಣೀ (Aldebaran) ಮತ್ತು ಸ್ವಾತೀ (Arcturus) ಇವೆರಡೂ ೨೭ ನಕ್ಷತ್ರಗಳ ಸಾಲಿನಲ್ಲಿ ಬರುವ ಎರಡು ಪ್ರಕಾಶಮಾನವಾದ ನಕ್ಷತ್ರಗಳು. ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಸ್ವಾತೀ ಮೂರನೆಯದ್ದಾದರೆ, ರೋಹಿಣಿಯು ೧೩ನೇ ಪ್ರಕಾಶಮಾನವಾದ್ದು.

ಬೃಂದಾವನಕೆ ಹಾಲನು ಮಾರಲು...

ಬೆಣ್ಣೆ ಹಾಲ್ಮೊಸರನ್ನು ಮಾರಹೊರಟಿದ್ದ
ಮುರಾರಿಯಡಿಗಳಲೆ ಮನಸನೊಪ್ಪಿಸಿದ
ಗೊಲ್ಲತಿ ಕೂಗಿದಳು ತಾ ಮೈಯಮರೆತು
’ಗೋವಿಂದ ದಾಮೋದರ ಮಾಧವೆಂ’ದು!

ಸಂಸ್ಕೃತ ಮೂಲ (ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫)

ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರಾರಿ ಪಾದಾರ್ಪಿತ ಚಿತ್ತವೃತ್ತಿಃ|
ದಧ್ಯಾಧಿಕಂ ಮೋಹವಶಾದವೋಚತ್ ಗೋವಿಂದ ದಾಮೋದರ ಮಾಧವೇತಿ||

-ಹಂಸಾನಂದಿ

ಕೊ: ನೆನ್ನೆ ತಾನೇ ಓದಿದ್ದಿದು ಈ ಶ್ಲೋಕ - ಅದರಲ್ಲಿರುವ ಲಯದಿಂದ ಕೂಡಲೇ ಅನುವಾದಿಸಬೇಕೆಂಬ ಸೆಳೆತವುಂಟುಮಾಡಿತು!

ಕೊ.ಕೊ: ಹಾಲೂ-ಮೊಸರೂ-ಬೆಣ್ಣೆ ಎಂದು ಕೂಗಿಕೊಂಡು ಹೋಗುತ್ತಾ ಮಾರಬೇಕಾದವಳು ಮೈಮರೆತು ’ಗೋವಿಂದಾ ದಾಮೋದರಾ ಮಾಧವಾ’ ಎಂದು ಕೂಗುತ್ತಾ ಮಾರುತ್ತಿದ್ದಾಳೆ ಅನ್ನುವುದು ಶ್ಲೋಕದ ಭಾವ. ಅದ್ಯಾಕೋ ಅನುವಾದದಲ್ಲಿ ಅಷ್ಟು ಚೆನ್ನಾಗಿ ತೋರ್ಪಡಲಿಲ್ಲವೋ ಅನ್ನುವ ಅನುಮಾನದಿಂದ ಈ ಕೊಸರನ್ನು ಹಾಕಬೇಕಾಯಿತು.

ಕೊ.ಕೊ.ಕೊ: ಶ್ಲೋಕವನ್ನು ಓದುತ್ತಲೇ, ಏಕೋ ಕುವೆಂಪು ಅವರ ’ಬೃಂದಾವನಕೆ ಹಾಲನುಮಾರಲು ಪೋಗುವ ಬಾರೇ ಬೇಗ ಸಖೀ’ ಅನ್ನುವ ಗೀತೆ ನೆನಪಾಗಿ, ಅದೇ ತಲೆಬರಹವನ್ನು ಕೊಟ್ಟೆ.

ಹರಿಯೋ? ಹರನೋ?

Image
ಮುಡಿಯಲೊ ಅಡಿಯಲೊ ಗಂಗೆಯಿಹ
ಒಡಲೋ ಕೊರಳೋ ಕಪ್ಪಾದ
ಕಾವನಯ್ಯನೋ ಕಾಮನ ಗೆದ್ದವನೋ
ಆವನೋ ದೇವನ ನಾ ನೆನವೆ!

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ)

ಜಾಹ್ನವೀ ಮೂರ್ಧ್ನಿ ಪಾದೇ ವಾ ಕಾಲಃ ಕಂಠೇ ವಪುಷ್ಯಥ
ಕಾಮಾರಿಂ ಕಾಮತಾತ ವಾ ಕಚಿದ್ದೇವ ಭಜಾಮಹೇ

-ಹಂಸಾನಂದಿ

ಚಿತ್ರ ಕೃಪೆ: ವಿಕಿಪೀಡಿಯಾ

ಕೊ:ಶಿವನು ಗಂಗೆಯನ್ನು ತಲೆಯ ಮೇಲೇ ಹೊತ್ತರೆ ಅದೇ ಗಂಗೆ ವಿಷ್ಣು ಪಾದೋಧ್ಭವೆ ಕೂಡ
ಕೊ.ಕೊ: ವಿಷವನ್ನು ಕುಡಿದು ಶಿವನ ಗಂಟಲು ಕಪ್ಪಾಗಿ ಅವನು ನೀಲಕಂಠನಾದರೆ, ವಿಷ್ಣುವು ನೀಲವರ್ಣ.
ಕೊ.ಕೊ.ಕೊ: ಮನ್ಮಥನು ವಿಷ್ಣುವಿನ ಮಗನಾದರೆ, ಅವನನ್ನು ಸುಟ್ಟ ಶಿವ ಅವನ ವೈರಿ.

ಎಲ್ ಕಮೀನೋ ರಿಯಾಲ್

Image
ಎಲ್ ಕಮೀನೋ ರಿಯಾಲ್’ ಅಂದ್ರೆ ’ರಾಜಮಾರ್ಗ’ - ಇದು ಸ್ಪ್ಯಾನಿಶ್ ಮಿಶನ್ ಗಳ ಕಾಲದಲ್ಲಿ ಕ್ಯಾಲಿಫೋರ್ನಿಯದ ದಕ್ಷಿಣ ತುದಿಯಿಂದ ರಾಜ್ಯದ ನಡುವಿನ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ವರೆಗೆ ಇದ್ದ ಮಿಶನ್ ಗಳನ್ನು ಸೇರಿಸುತ್ತಿದ್ದ ರಸ್ತೆ. ಈಗ ಹಳೇ ರಸ್ತೆ ಇಲ್ಲ ಬಿಡಿ. ಆದರೂ ಅದು ಹಾದು ಹೋಗುತ್ತಿದ್ದ ಕಡೆಯಲ್ಲಿ ಅದೇ ಹೆಸರೇ ಉಳಿದಿದೆ. ಕೆಲವು ಕಡೆ ಹಿಂದಿನ ಕಾಲದಲ್ಲಿ ಹೇಗಿತ್ತೋ ಹಾಗೇ ಕಟ್ಟಡಗಳನ್ನೂ ಉಳಿಸಿಕೊಂಡಿರುವುದೂ ಇದೆ. ಇವತ್ತು ಬೆಳಿಗ್ಗೆ ಎಲ್ ಕಮೀನೋ ರಿಯಾಲ್ ನಲ್ಲಿ ಬರುತ್ತಿದ್ದಾಗ ನೀಲಿ ಆಕಾಶ, ಬಾನಿನಲ್ಲಿರುವ ತೆಳು ಬಿಳಿ ಮೋಡಗಳು, ರಸ್ತೆಯ ತುದಿಯಲ್ಲೇ, ಇನ್ನೇನು ಇಲ್ಲೇ ಬಂದುಬಿಟ್ಟಿತು ಅನ್ನುವಂತೆ ಕಾಣುವ (ಆದರೆ ಇಪ್ಪತ್ತೈದು ಮೈಲಿ ದೂರದಲ್ಲಿರುವ) ೪೦೦೦ ಅಡಿ ಎತ್ತರದ ಹ್ಯಾಮಿಲ್ಟನ್ ಬೆಟ್ಟ. ಅದರ ತುದಿಯಲ್ಲಿರೋ ಕಂಡೂ ಕಾಣದಂತಿದ್ದ ಲಿಕ್ ವೇಧಶಾಲೆ - ಅದರ ಜೊತೆಗೆ ಕೈಲಿರುವ ಮೊಬೈಲ್ ಫೋನ್ ಎಲ್ಲ ಸೇರಿ ಇಲ್ಲಿ ಹಾಕಿರುವ ಈ ಚಿತ್ರ ಕ್ಲಿಕ್ಕಿಸಿದ್ದಾಯಿತು.


ಯುಎಸ್ಎಯ ಅರೆವಾಸಿ ರಾಜ್ಯಗಳೆಲ್ಲ ಮೂರ್ನಾಲ್ಕು ದಿನದಿಂದ ಎಂಟು ಹತ್ತು ಇಪ್ಪತ್ತು ಇಂಚು ಹಿಮದ ಅಡಿಯಲ್ಲಿ ನಲುಗುತ್ತಿರುವಾಗ, ನಮಗೆ ಎಳೆಬಿಸಿಲನ್ನು ದಯಪಾಲಿಸಿರುವ ವರುಣನಿಗೆ ಒಂದು ನಮಸ್ಕಾರವನ್ನೂ ಹಾಕಿದ್ದಾಯಿತು ಅನ್ನಿ!