Posts

Showing posts from May, 2011

ಮರೆಯಲಾರದ ಹಳೆಯ ಕಥೆಗಳು: ೫

ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರೂ ಒದಬಹುದಿತ್ತು. ರಾತ್ರಿ ಆದರೆ, ಕಿಟಕೀ ಬದಿಯಲ್ಲಿ ಕುಳಿತು ಹೊರಗಡೆ ನೋಡೋದು ಇನ್ನೇನನ್ನ? ಆದರೆ ಬರೀ ಕಾರಿನಲ್ಲಿ ಪ್ರಯಾಣಿಸೋದೇ ಹೆಚ್ಚಾದ ಮೇಲೆ ದಾರಿಯಲ್ಲಿ ಓದೋದು ಅನ್ನೋದು ಕಷ್ಟವೇ -ದೂರದ ಪ್ರಯಾಣದಲ್ಲಿ ಹೆಚ್ಚು ಕಡಿಮೆ ಯಾವಾಗಲೂ ಕಾರನ್ನ ನಾನೇ ಓಡಿಸೋದ್ರಿಂದ!

ಕೆಲವು ದಿನಗಳ ದೇಶದ ಈ ತುದಿಯಿಂದ ಆ ತುದಿಗೆ ವಿಮಾನದಲ್ಲಿ ಪ್ರಯಾಣ ಮಾಡೋ ಸ್ವಲ್ಪ ದೊಡ್ಡ ಪ್ರಯಾಣದಲ್ಲಿ ತ್ರಿವೇಣಿ ಅವರ ಮೊದಲ ಹೆಜ್ಜೆ ಕಾದಂಬರಿಯನ್ನ ಓದಿದೆ. ಈ ಸಲದ ಹೆಚ್ಚಾಯ ಅಂದರೆ ಇದನ್ನ ಓದಿದ್ದು ಪುಸ್ತಕವಾಗಿ ಅಲ್ಲ, ಬದಲಿಗೆ ಇ-ಪ್ರತಿ ಯಾಗಿ. ಕಿಂಡಲ್ ಮೇಲೆ. ಓದಬೇಕು ಅಂತ ಕಿಂಡಲ್ ನಲ್ಲಿ ಹಾಕಿಕೊಂಡಿರುವ ಹಲವು ಪಿಡಿಎಫ್ ಪುಸ್ತಕಗಳ ಪೈಕಿ ಇದೂ ಒಂದಾಗಿತ್ತು. ಅಂತೂ ಪ್ರಯಾಣದ ನೆವದಲ್ಲಿ ಓದುವುದಕ್ಕೊಂದು ಕಾಲ ಬಂತು ಅನ್ನಿ.

ಸುಮಾರು ೫೦ ವರ್ಷಗಳ ಹಿಂದೆ ತ್ರಿವೇಣಿ ಅವರು ಬರೆದಿರುವ ವಿಷಯದ ಹರಹನ್ನು ನೋಡಿದರೆ ಬಹಳ ಆಶ್ಚರ್ಯವಾಗುತ್ತೆ. ಶರಪಂಜರ, ಬೆಳ್ಳಿಮೋಡ , ಹಣ್ಣೆಲೆ ಚಿಗುರಿದಾಗ ಮೊದಲಾದ ಕಾದಂಬರಿಗಳಷ್ಟು ಜನಪ್ರಿಯವಲ್ಲದೇ ಇರಬಹುದಾದ ಈ ಕಾದಂಬರಿಯಲ್ಲಿ , ೧೯೪೦-೬೦ರ ಸಮಯದ ಸಾಮಾಜಿಕ ಹಿನ್ನೆಲೆಯಲ್ಲಿ ಅಪರೂಪ ಎನ್ನಿಸಬಹುದಾದ ಮ…

ದಂಡದ ಕೆಲಸಗಳು

ಸೊಕ್ಕಿದ ಸಲಗವ ಕಮಲದ ದಂಟಿನಲಿ
ಕಟ್ಟಿ ಹಿಡಿಯಲುಜ್ಜುಗಿಸುವಂತೆ

ಗಟ್ಟಿ ವಜ್ರವನು ಹೂವಿನ ದಳದಲಿ
ಪಟ್ಟೆನಿಸಿ ಮುರಿಯ ತೊಡಗುವಂತೆ

ಉಪ್ಪಿನ ಕಡಲನು ಜೇನ ಹನಿಯಿಂದ
ಹೆಚ್ಚು ರುಚಿಗೊಳಿಸ ಬಯಸುವಂತೆ

ಒಳ್ಳೆ ಮಾತಿನಲಿ ಮೂಳರ ದಾರಿಗೆ
ಜಗ್ಗಿಸಿ ತರುವುದು ದಂಡವಂತೆ!


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ವ್ಯಾಲಂ ಬಾಲ ಮೃಣಾಲ ತಂತುಭಿರಸೌ ರೋದ್ಧುಂ ಸಮುಜ್ಜೃಂಭತೇ
ಭೇತ್ತುಮ್ ವಜ್ರಮಣಿಂ ಶಿರೀಶಕುಸುಮ ಪ್ರಾಂತೇನ ಸನ್ನಹ್ಯತೇ||
ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಂಬುಧೇರೀಹತೇ
ಮೂರ್ಖಾನ್ ಯಃ ಪ್ರತಿನೇತುಮಿಚ್ಛತಿ ಬಲಾತ್ ಸೂಕ್ತೈಃ ಸುಧಾಸ್ಯಯಂದಿಭಿಃ ||

-ಹಂಸಾನಂದಿ

ಜೀವದ ಗೆಳೆಯರು

ಹಾಲದು ತನ್ನೊಳು ಬೆರೆಸಿದ ನೀರಿಗೆ
ತನ್ನ ನಡತೆಯನೆಲ್ಲವ ನೀಡುವುದು
ಹಾಲ ಕಾಯಿಸಲು ನೀರು ಗೆಳೆಯನ
ನೋವಿಗೆ ಮರುಗಿ ಹಬೆಯಾಡುವುದು

ನೀರಿನ ಪಾಡನು ನೋಡುತ ಹಾಲು
ಉಕ್ಕುತ ಬೆಂಕಿಗೆ ಹಾರುವುದು
ಬೆರೆಸಲು ಅದಕೆ ತುಸುವೇ ನೀರನು
ಕೂಡಲೆ ತಣಿವನು ಹೊಂದುವುದು!

ಒಳ್ಳೆಯ ಗೆಳೆಯರ ನಡುವೆ ಗೆಳೆತನ
ಎಂದಿಗು ಇರುವುದು ಹೀಗೆ;
ನೋವುನಲಿವಲಿ ಜೊತೆಯನು ಬಿಡದಿಹ
ಹಾಲಿನ ನೀರಿನ ಹಾಗೆ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಕ್ಷೀರೇಣಾತ್ಮಗತೋದಕಾಯ ಯಿ ಗುಣಾಃ ದತ್ತಾಃ ಪುರಾ ತೇSಖಿಲಾಃ
ಕ್ಷೀರೇ ತಾಪಮವೇಕ್ಷ್ಯ ತೇನ ಪಯಸಾ ಹ್ಯಾತ್ಮಾ ಕೃಶಾನೌ ಹುತಃ |
ಗಂತುಂ ಪಾವಕಮುನ್ಮನಸ್ತದಭವದ್ದೃಷ್ಟ್ವಾ ತು ಮಿತ್ರಾಪದಂ
ಯುಕ್ತಂ ತೇನ ಜಲೇನ ಶಾಮ್ಯತಿ ಸತಾಂ ಮೈತ್ರೀ ಪುನಸ್ತ್ವೀದೃಶೀ ||

क्षीरेणात्मगतोदकाय हि गुणाः दत्ताः पुरा तेऽखिलाः
क्षीरे तापमवेक्ष्य तेन पयसा ह्यात्मा कृशानौ हुतः ।
गन्तुं पावकमुन्मनस्तदभवद्दृष्ट्वा तु मित्रापदम्
युक्तं तेन जलेन शाम्यति सतां मैत्री पुनस्त्वीदृशी ॥

-ಹಂಸಾನಂದಿ

ಕೊ: ಮೂಲದಲ್ಲಿಲ್ಲದ ವಿವರಗಳು ಅನುವಾದದಲ್ಲಿದ್ದರೂ, ಅದು ಅರ್ಥಕ್ಕೆ ಪೂರಕವಾಗಿದೆಯೆಂದು ಎಣಿಸುವೆ

ಒಂದು ಕಿವಿಮಾತು

ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟ
ಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆ
ಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;
ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!

ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಅಗ್ರೇ ಗೀತಂ ಸರಸ ಕವಯಃ ಪಾರ್ಶ್ವತೋ ದಾಕ್ಷಿಣಾತ್ಯಾಃ
ಪಶ್ಚಾಲ್ಲೀಲಾವಲಯರಣಿತಣಂ ಚಾಮರಗ್ರಾಹಿಣೀನಾಂ|
ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ
ನೋಚೇಚ್ಚೇತಃ ಪ್ರವಿಶ ಸಹಸಾ ನಿರ್ವಿಕಲ್ಪೌ ಸಮಾಧೌ||

-ಹಂಸಾನಂದಿ

ಕೊ: ಇವತ್ತು ತಾನೇ ಸಿಂಹ ಎಸ್ ಎನ್ ಅವರ ಗೂಗಲ್ ಬಜ್ ನಲ್ಲಿ ಓದಿದ ಶ್ಲೋಕ. ನಿರ್ವಿಕಲ್ಪ ಸಮಾಧಿಗೆ ನನ್ನ ಅನುವಾದ ಏನೇನೂ ಚೆನ್ನಾಗಿಲ್ಲವೆಂದು ಗೊತ್ತಿದ್ದೂ ಹಾಕುವ ಧೈರ್ಯ ಮಾಡಿದ್ದೇನೆ!

ವಾಣಿಯ ವೈಪರೀತ್ಯ

ನಿಕ್ಕುವದಿ ವಾಣಿಯ ಹೋಲುವ
ಬೊಕ್ಕಸವು ಬೇರೆಲ್ಲೂ ಇಲ್ಲ;
ವೆಚ್ಚ ಮಾಡಿದರೆ ಹೆಚ್ಚುತಲಿದ್ದು
ಬಚ್ಚಿಡಲು ಸೊರಗುವುದಲ್ಲ!

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):

ಅಪೂರ್ವಃ ಕೋsಪಿ ಕೋಶೋಯಂ ವಿದ್ಯತೇ ತವ ಭಾರತಿ|
ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್ ||

-ಹಂಸಾನಂದಿ

ಶಿವನ ಒಲಿಸುವ ಪರಿ

Image
ದಟ್ಟಕಾಡಲೊಬ್ಬಂಟಿ ಅಲೆವರು
ಬೆಟ್ಟದ ತುದಿಗೂ ಏರುವರು

ಕೊಳದಾಳದಲಿ ಮುಳುಗುವರು,
ತಿಳಿಗೇಡಿಗಳು ಹೂಗಳಿಗೆಂದು!

ಮನದ ಕೊಳದಲೇ ಅರಳಿದ
ಹೂವೊಂದ ನೆಚ್ಚಿ ಮುಡಿಸಲು

ಉಮೆಯರಸ ಮೆಚ್ಚಿ ನಲಿವ-
ನೆಂಬುದನಿವರು ಅರಿವರೆಂದು?

ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯)

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

-ಹಂಸಾನಂದಿ

ಕೊ: ಉಮೆಯೊಡನೆ ನಂದಿಯೇರಿರುವ ಶಿವ, ಹೊಯ್ಸಳೇಶ್ವರ ದೇವಾಲಯ, ಹಳೇಬೀಡು
ಕೊ.ಕೊ: ವೈಶಾಖ ಶುದ್ಧ ಪಂಚಮಿಯಂದು ಶಂಕರಜಯಂತಿ, ಅಂದರೆ ಆದಿಶಂಕರರು ಹುಟ್ಟಿದ ದಿನ. ಅದು ನೋಡಿದಾಗ ಶಿವಾನಂದ ಲಹರಿಯ ನಾಲ್ಕಾರು ಶ್ಲೋಕಗಳನ್ನು ಓದಿದೆ. ಅದರಲ್ಲಿ ಒಂದರ ಅನುವಾದ ಇದು.

ಚಿತ್ರ ಕೃಪೆ: http://upload.wikimedia.org/wikipedia/commons/2/2d/Halebidu_shiva.jpg

ಬೇಡುವವನ ಪಾಡು

ಎಡವುವ ನಡಿಗೆ ಅಡಗಿದ ಗಂಟಲು
ಒಡಲಲಿ ಬೆವರು ಬೆದರಿದ ತನುವು
ಸಾವು ಬಳಿಸಾರೆ ಕಾಂಬ ಗುರುತುಗಳು
ಬೇಡುವನಲೂ ಕಾಣ ಸಿಕ್ಕಾವು!

ಸಂಸ್ಕೃತ ಮೂಲ:

ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |
ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ ||

-ಹಂಸಾನಂದಿ

ಕಳ್ಳಹೊಳೆ ಮತ್ತು ಹೇಮಾವತಿ

Image
ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.

ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು - ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇ…

ಹೂ ಬಾಣ ಹಿಡಿದವನಿಗೆ

Image
ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇಡುತ್ತಾನಂತೆ! ತಪಸ್ಸು ಮಾಡಲು ಕುಳಿತಿದ್ದ ಶಿವನನ್ನೇ ಬಿಡಲಿಲ್ಲ ಈ ಮದನ ಅಂದರೆ, ಇವನು ಅದೆಷ್ಟು ಗಟ್ಟಿಗ ನೋಡಿ! ಶಿವನ ಮೂರನೇ ಉರಿಗಣ್ಣಿಂದ ಬೂದಿ ಆದರೂ, ದೇಹವೇ ಇರದೇ ಹೋದರೂ ತನ್ನ ಕಾಯಕವನ್ನು ಮಾತ್ರ ಮುಂದುವರಿಸಿಯೇ ಇದ್ದಾನೆ, ಯುಗ ಯುಗಾಂತರದಿಂದಲೂ.ಈ ಹೂ ಬಾಣ ಹಿಡಿದವನ ಮೇಲಿರುವ ಕೆಲವು ಸಂಸ್ಕೃತ ಪದ್ಯಗಳ ಭಾವಾನುವಾದವನ್ನು ನಾನು ಮಾಡಿರುವುದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೊದಲಿಗೆ ಭರ್ತೃಹರಿಯ ಶೃಂಗಾರ ಶತಕ ಎಂಬ ಸಂಕಲದ ಆಯ್ದ ಕೆಲವು ಪದ್ಯಗಳ ಅನುವಾದ ಕೇಳಿ:

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಪೆ ಹೂ ಬಾಣಗಳ ಹಿಡಿದಿಹಗೆ

ಅಂತೂ, ತ್ರಿಮೂರ್ತಿಗಳೇ ಮನ್ಮಥನ ಉಪಟಳದಿಂದ ತಪ್ಪಿಸಿಕೊಳ್ಳಲಾರರಿದ್ದಾಗ, ಬೇರೆ ಹುಲು ಮಾನವರ ಪಾಡೇನು ಅಲ್ಲವೇ?

ಇನ್ನೊಂದು ಪದ್ಯದ ಅನುವಾದ ನೋಡಿ - ಎಂತಹ ವೀರರಾದರೂ, ಶೂರರಾದರೂ, ಮನ್ಮಥನನ್ನು ಎದುರುಹಾಕಿಕೊಳ್ಳುವುದು ಕಷ್ಟವೇ ಅನ್ನುವುದನ್ನು ಭರ್ತೃಹರಿ ಒತ್ತಿಹೇಳುತ್ತಾನೆ.

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರ…