Posts

Showing posts from October, 2011

ಹಂಬಲ

Image
ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ
ಬಿದಿರಾಗಿ ಯಮುನೆಯ ದಡದ ಮೆಳೆಯೊಳಗೆ;
ಆ  ಬಿದಿರು ಕೊಳಲಾಗಿ ಪಡೆದರೂ ಪಡೆದೀತು
ಗೋಪಕುವರನ ರನ್ನ ತುಟಿಗೊತ್ತುವಾ ಸೊಗಸು!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ೨-೯):

ಅಪಿ ಜನುಷಿ ಪರಸ್ಮಿನ್ನಾತ್ತಪುಣ್ಯೋ ಭವೇಯಂ
ತಟ ಭುವಿ ಯಮುನಾಯಾಸ್ತಾದೃಶೋ ವಂಶನಾಳಃ |
ಅನುಭವತಿ ಯ ಏಷಶ್ಶ್ರೀಮದಾಭೀರ ಸೂನೋಃ
ಅಧರಮಣಿ ಸಮೀಪನ್ಯಾಸಧನ್ಯಾಮವಸ್ಥಾಂ ||

-ಹಂಸಾನಂದಿ

ಕೊ: ಅನುವಾದದಲ್ಲಿ  ಸಲಹೆ ನೀಡಿದ, ಮತ್ತೆ ಅವರು ತೆಗೆದ ಚಿತ್ರವನ್ನು ಬಳಸಲು ಸಮ್ಮತಿಸಿದ ಗೆಳೆಯ ಶ್ರೀನಿವಾಸ್ ಪಿ ಎಸ್ ಅವರಿಗೆ ನಾನು ಆಭಾರಿ.

ನಂದನ ಕಂದನಿಗೆ

Image
ಪೊಂಗೊಳಲ ರಂಧ್ರಗಳ
ಚೆಂಬೆರಳ ತುದಿಗಳಲಿ
ಮುಚ್ಚುತಾ ತೆರೆಯುತಿಹನ

ತಿರುತಿರುಗಿ ಮರಮರಳಿ
ತನ್ನುಸಿರ ಗಾಳಿಯನು
ಕೊಳಲಿನಲಿ ತುಂಬುವವನ

ಅರಳಿದ ತಾವರೆಯ
ಹೋಲುವಾ ಕಂಗಳಿಹ
ಚೆಂದದಾ ನಿಲುವಿನವನ

ವಂದಿಸುವೆ ನಾನೀಗ
ಬೃಂದಾವನದಿ ನಲಿವ
ನಂದಗೋಪನ ಕಂದನ


ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):
ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ
ವಾರಂ ವಾರಂ ವದನಮರುತಾ ವೇಣುಮಾಪೂರಯಂತಂ | ವ್ಯತ್ಯಸ್ತ್ಯಾಂಘ್ರಿಂ ವಿಕಚಕಮಲಚ್ಛಾಯವಿಸ್ತಾರ ನೇತ್ರಂ ವಂದೇ ವೃಂದಾವನಸುಚರಿತಂ ನಂದಗೋಪಾಲ ಸೂನುಂ ||

-ಹಂಸಾನಂದಿ

ಚಿತ್ರ ಕೃಪೆ: ಅನೂಪ್ ಹುಲ್ಲೇನ ಹಳ್ಳಿ ಅವರ ಸುಂದರ ಫೋಟೋ ಬ್ಲಾಗ್, ಅನುಬಿಂಬ್ ; ಸೋಮನಾಥಪುರದ ಹೊಯ್ಸಳ ಶೈಲಿಯ ಗೋಪಾಲ ಕೃಷ್ಣನ ವಿಗ್ರಹ. ಪದ್ಯದಲ್ಲಿ ಹೇಳಿರುವ "ವ್ಯತ್ಯಸ್ಥ್ಯಾಂಘ್ರಿಂ" ಅನ್ನುವುದಕ್ಕೆ ಈ ವಿಗ್ರಹ ಒಳ್ಳೇ ಉದಾಹರಣೆಯೆನಿಸಿತು.

ಕೊ: ಇದು ಕೃಷ್ಣಕರ್ಣಾಮೃತದ ಐದನೇ ಪದ್ಯ. ಈ ಮೊದಲು ಮಾಡಿದ್ದ ಈ ಅನುವಾದವು ಈ ಪದ್ಯದ ನಂತರ ಬರುವ ಪದ್ಯ.

ಆಸೆ

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :

ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||

-ಹಂಸಾನಂದಿ

ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

ಕೊ.ಕೊ: ಕನ್ನಡ ಚಿತ್ರ ’ಮನಸಾರೆ’ ನೋಡಿದ್ದಿರಾ? ಅಲ್ಲಿ ಬರುವ ಒಂದು ಮುಖ್ಯವಾದ ಸನ್ನಿವೇಶ (ನಾಯಕ ನ ಪಕ್ಕದ ಮನೆಯ ಹುಡುಗಿಯ ಮದುವೆಯ ಸಮಯದಲ್ಲಿ ಬರುತ್ತೆ), ಅಲ್ಲಿ ಬರುವ ಮಾತುಗಳು ನೇರವಾಗಿ ಭರ್ತೃಹರಿಯ "ಯಂ ಚಿಂತಯಾಮಿ ಸತತಮ್ ಮಯಿ ಸಾ ವಿರಕ್ತಾ" ಎಂದು ಮೊದಲಾಗುವ ಶ್ಲೋಕದ ಅಚ್ಚು. ಆ ಸನ್ನಿವೇಶವನ್ನು ಬರೆಯುವಾಗ ಯೋಗರಾಜ ಭಟ್ಟರು ಭರ್ತೃಹರಿಯಿಂದ ಚೆನ್ನಾಗೇ ಪ್ರೇರಿತರಾಗಿದ್ದಾರೆ ಎಂದರೆ ಅಡ್ಡಿಯಿಲ್ಲ!

ಕೊ.ಕೊ.ಕೊ: ಸಂಸ್ಕೃತ ಕಾವ್ಯಗಳಿಂದ ಸಾಮಾಜಿಕ ಚಿತ್ರಗಳ ನಿರ್ದೇಶಕರು ಪ್ರೇರಿತರಾಗಿರುವುದರಲ್ಲಿ ಯೋಗರಾಜ ಭಟ್ಟರೇನೂ ಮೊದಲಿಗರೇನಲ್ಲ. ಕಾಲು ಶತಮಾನ ಮುನ್ನವೇ ಬಂದಿದ್ದ ತಮಿಳಿನ ’ಅಪೂರ್ವ ರಾಗಂಗಳ್’, ಅದರ ಹಿಂದೀ ಅವತರಣಿಕೆ ’ಏಕ್ ನಯೀ ಪಹೇಲಿ’ ಇದರಲ್ಲಿ ವೇತಾಳಪಂಚವಿ…

ಮಳೆಗಾಲದ ಅಗಲಿಕೆ

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;
ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!
ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ ಬಿದ್ದ ಸೊಗಸಿನ ಕಣ್ಣೆವೆಯ ಮುಗುದೆಯರು ನಲ್ಲನಗಲಿಕೆಯಲಿ?

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):
ಇತೋ ವಿದ್ಯುದ್ವಲ್ಲೀ ವಿಲಸಿತಂ ಇತಃ ಕೇತಕೀತರೋಃ ಸ್ಫುರನ್ಗಂಧಃ ಪ್ರೋದ್ಯಜ್ಜಲದ ನಿನದ ಸ್ಫೂರ್ಜಿತಂ ಇತಃ | ಇತಃ ಕೇಕೀಕ್ರೀಡಾ ಕಲಕಲರವಃ ಪಕ್ಷ್ಮಲದೃಶಾಂ ಕಥಂ ಯಾಸ್ಯಂತ್ಯೇತೇ ವಿರಹ ದಿವಸಾಃ ಸಂಭೃತರಸಾಃ ||
-ಹಂಸಾನಂದಿ
ಕೊ:  ಮೂಲದಲ್ಲಿ  ಒಂದೂವರೆ ಪಾದದಲ್ಲಿರುವ ಅಂಶವನ್ನು ಅನುವಾದದಲ್ಲಿ ಎರಡು ಸಾಲಾಗಿ ಹಿಗ್ಗಿಸಿರುವುದರಿಂದ, ಅಲ್ಲಿ ಇಲ್ಲದ ಕೆಲವು ಪದಗಳು ಬಂದಿವೆಯಾದರೂ, ಅದು ಅರ್ಥಕ್ಕೆ ಪೂರಕವಾಗಿದೆಯೆಂದು ಹಾಗೇ ಉಳಿಸಿದೆ

ಹುಬ್ಬೆಂಬ ಬಿಲ್ಲಿನ ಚುರುಕು ಬಾಣಗಳು

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  !


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :

ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||


-ಹಂಸಾನಂದಿ

ಕೊ. ಹಿತೋಪದೇಶದಲ್ಲೂ ಇದೇ ಪದ್ಯದ ಪಾಠಾಂತರವೊಂದು ಇರುವಂತೆ ತೋರುತ್ತದೆ.

ಕೊ.ಕೊ:  "ಶ್ರವಣಪಥಗತಾ ನೀಲ ಪಕ್ಷ್ಮಾಣ" ಮೊದಲಾದ ಪದಪುಂಜಗಳಿಗೆ ಪ್ರತಿಪದಾರ್ಥವಿಲ್ಲದಿದ್ದರೂ, ನಡಿಗೆ ಸ್ವಲ್ಪ ಎಡವುತ್ತಿದ್ದರೂ,  ಪದ್ಯದ ಭಾವವನ್ನು ಹಿಡಿದಿಡುವ ಪ್ರಯತ್ನವಿಲ್ಲಿದೆ.

ಇವಳದೆಂಥ ಇನಿಯೆ?

ಬೇಗುದಿ ತರುವಳು ನೆನಪಿನಲೆ   ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ? 

ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):
ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ | ಸ್ಪೃಷ್ಟಾ ಭವತಿ ಮೋಹಾಯ ಸಾ ನಾಮ ದಯಿತಾ ಕಥಮ್ ||
-ಹಂಸಾನಂದಿ

ಹಾತೊರೆತ


ಕಿವಿಯಲವನ ಹೆಸರು ಬಿದ್ದರೂ
ಮೈ ಮಿಂಚಾಡುವುದು ನವಿರೆದ್ದು;
ಕಂಡರವನ ಮೊಗಚಂದಿರವು
ಚಂದ್ರಶಿಲೆಯಂತೆ ಕರಗುವುದು!

ಇನಿಯ ಬಳಿಬಂದೆನ್ನ ಕೊರಳನು
ಅವನ ತೋಳಲಿ ಸೆಳೆದು ಅಪ್ಪಲು
ಒಡೆದ ಈ ಮನಕುಂಟು ತಲ್ಲಣ
ತಿರುಗಿ ಪೆಡಸಾದೇನೆಂಬ ಕಳವಳ

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ)

ಶ್ರುತ್ವಾ ನಾಮಾಪಿ ಯಸ್ಯ ಸ್ಫುಟಘನಪುಲಕಂ ಜಾಯತೇಂSಗಂ ಸಮಂತಾತ್
ದೃಷ್ಟ್ವಾ ಯಸ್ಯಾನನೇಂದುಂ ಭವತಿ ವಪುರಿದಂ ಚಂದ್ರಕಾಂತಾನುಕಾರಿ |
ತಸ್ಮಿನ್ನಾಗತ್ಯ ಕಂಠಗ್ರಹಣಸರಭಸಸ್ಥಾಯಿನಿ ಪ್ರಾಣನಾಥೇ
ಭಗ್ನಾ ಮನಸ್ಯ ಚಿಂತಾ ಭವತಿ ಮಯಿ ಪುನರ್ ವಜ್ರಮಯ್ಯಾಮ್ ಕದಾ ನು ||

श्रुत्वा नामापि यस्य स्फुटघनपुलकं जायतेऽङ्गं समन्तात् दृष्ट्वा यस्याननेन्दुं भवति वपुरिदं चन्द्रकान्तानुकारि  । तस्मिन्नागत्य कण्ठग्रहणसरभसस्थायिनि प्राणनाथे भग्ना मानस्य चिन्ता भवति मम पुनर्वज्रमय्याः कदा नु || 
-ಹಂಸಾನಂದಿ ಕೊ: ಮೂರನೇ ಸಾಲಿಗೆ "ತಸ್ಮಿನ್ನಾಗತ್ಯ ಕಂಠಗ್ರಹನಿಕಟ ಪದಸ್ಥಾಯಿನಿ ಪ್ರಾಣನಾಥೇ" ಎಂಬ ಪಾಠಾಂತರವಿರುವಂತೆ ತೋರುತ್ತದೆ.

ಕೊ.ಕೊ: ಚಂದ್ರಶಿಲೆ (Moonstone) ಎಂಬ ಖನಿಜವು ಚಂದ್ರನ ಬೆಳಕಲ್ಲಿ ತೇವಗೊಳ್ಳುತ್ತದೆ, ಮೃದುವಾಗುತ್ತದೆ ಎಂಬುದೊಂದು ಕವಿಸಮಯ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸತ್ಯ ಎನ್ನುವುದು ನನಗೆ ಗೊತ್ತಿಲ್ಲ!

ಕೊ.ಕೊ.ಕೊ: ಕೊನೆಯ ಸಾಲಿನಲ್ಲಿರುವ "ಭಗ್ನಾ ಮನಸ್ಯ ಚಿಂತಾ" ಎಂಬ ಮಾತುಗಳು, ಯಾವುದೋ ಕಾ…