Posts

Showing posts from December, 2011

ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

’ಹಂಸನಾದ’ ಬ್ಲಾಗೋದುಗರಿಗೆಲ್ಲ  ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ.

ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂ ಸಂಗೀತ ಹಾಸುಹೊಕ್ಕಾಗಿದ್ದರೆ, ಸಂತೋಷ ನೆಮ್ಮದಿಗಳು ಹೆಚ್ಚುತ್ತವೆ ಅನ್ನುವುದು ನನ್ನ ಎಣಿಕೆ.

ವರ್ಣ ಎಂದರೆ ಕರ್ನಾಟಕ ಸಂಗೀತದ ಒಂದು ರಚನಾ ಪ್ರಕಾರ. ಎಲ್ಲರಿಗೂ ಗೊತ್ತಿರುವಂತೆ ವರ್ಣ ಎಂದರೆ ಬಣ್ಣ ಎನ್ನುವುದು ಸಾಮಾನ್ಯಾರ್ಥ. ಆದರೆ ಸಂಗೀತದಲ್ಲಿ ಇದು ಹೇಗೆ ಒಂದು ಹಾಡುವ ರಚನೆಯಾಯಿತು? ಬಹುಶಃ ಒಂದು ರಾಗದ ಬಗೆ ಬಗೆಯ ಬಣ್ಣಗಳನ್ನ ತೋರಿಸೋದರಿಂದಲೇ ಈ   ಹೆಸರು ಬಂದಿರಬೇಕೆಂದು ತೋರುತ್ತೆ.  ಒಂದು ರಾಗದ ಬೇರೆ ಬೇರೆ ಸ್ವರೂಪಗಳನ್ನು ತೋರಿಸುವುದು, ಅದು ಒಳಗೊಳ್ಳುವ  ಬಗೆ ಬಗೆ ವಿನ್ಯಾಸಗಳನ್ನು ತೋರಿಸುವುದು ವರ್ಣಗಳ ಒಂದು ಗುರಿ ಎನ್ನಬಹುದು.

ಈ ರಚನಾಪ್ರಕಾರ ತುಂಬಾ ಹಳೆಯದ್ದೇನಲ್ಲ. ಕರ್ನಾಟಕ ಸಂಗೀತದಲ್ಲಿ ೧೮ ನೇ ಶತಮಾನದಲ್ಲಿ ಹುಟ್ಟಿಕೊಂಡದ್ದು.ರಾಗಭಾವ ವನ್ನು ಹೊಮ್ಮಿಸುವುದು, ಮತ್ತು ತಾನದ ಶೈಲಿಯನ್ನು ಅನುಕರಿಸುವ ತಾನವರ್ಣಗಳು, ಮತ್ತೆ ನೃತ್ಯಗಳಿಗೆ ಹೇಳಿ ಮಾಡಿಸಿದಂತಹ ಪದವರ್ಣಗಳು ಎಂಬ ಎರಡು ರೀತಿಯ ವರ್ಣಗಳು ಚಾಲ್ತಿಯಲ್ಲಿವೆ.

ಮೊದಮೊದಲು ವರ್ಣಗಳನ್ನು ರಚಿಸಿದವರಲ್ಲಿ ನಮ್ಮ ವೀಣೆ ಶೇಷಣ್ಣನವರ ಮನೆತನದ ಪೂರ್ವಜರಾದ ಪಚ್ಚಮಿರಿಯಂ ಆದಿಪ್ಪಯ್ಯ ಪ್ರಮುಖರು. ಅವರ ಭೈರವಿ ರಾಗದ …

ಸಾವಿನ ಕಣಿವೆ

Image
ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:


ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ!

ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು!


ಯುಎಸ್‍ಎ ಯಲ್ಲಿ ಅತಿ ಬಿಸಿಲು ಝಳವಿರುವ, ಅತಿ ತಗ್ಗಾದ (ಸಮುದ್ರ ಮಟ್ಟಕ್ಕಿಂತ ೨೮೨ ಅಡಿ ಕೆಳಗೆ) ಮತ್ತೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ. ಮೇಲಿನ ಪದ್ಯಗಳಿಗೆ ಕಾರಣವಾದ,  ಅಲ್ಲಿನ ಕೆಲ ಚಿತ್ರಗಳು ಇಲ್ಲಿವೆ.

ಚಿತ್ರ ಕೃಪೆ - ನನ್ನ ಸ್ಯಾಮ್ಸಂಗ್ ಗ್ಯಾಲಕ್ಸ್ಜಿ ಫೋನ್-ಹಂಸಾನಂದಿ

ಕೊ: ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರು ನೀಡಿದ ಸಲಹೆಗಳಿಗೆ ಧನ್ಯವಾದಗಳು!

ಕೊ.ಕೊ: Death Valley, California ಬಗ್ಗೆ ಹೆಚ್ಚಿನ ಮಾಹಿತಿ, ವಿಕಿಪೀಡಿಯಾದಲ್ಲಿ

ಚಳಿಗಾಲ

ಇವತ್ತು ’ಚಳಿಗಾಲದ ಮೊದಲ ದಿನ’ - ಅಥವಾ ಉತ್ತರಾಯಣದ ಮೊದಲ ದಿನ ಅಂತ ಬೇಕಾದರೂ ಅನ್ನೋಣ. ಅದಕ್ಕೆ ಸರಿಯಾಗಿ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆಗೆಂದು ಬರೆದ (ಸ್ವಂತ) ಪದ್ಯ, ಅನುವಾದವಲ್ಲ :)  - ಛಂದಸ್ಸಿಗೆ ತಕ್ಕಂತೆ ಬರೆವ ಮೊದಮೊದಲ ಯತ್ನ ಇಲ್ಲಿದೆ:


ಮಳಲುದಂಡೆಯ ಹೊಳೆಯ
ಕುಳಿರುಗಾಳಿಯ ಮೊರೆತ
ಬೆಳಗುತಿಹ ತಾರೆಗಳ ಬಾನ ಚೆಲುವು |
ಸುಳಿವ ಮರೆಸಿದ ರವಿಯು
ಕೆಳೆಯ ಬಯಸುವ ಇರುಳು
ಚಳಿಗಾಲದೊಳಗೆನಿತು ಮುದ ತರುವುವು ||


-ಹಂಸಾನಂದಿ


ಕೊ: ಇದು ಕುಸುಮ ಎಂಬ ಹೆಸರಿನ  ಷಟ್ಪದಿಯಲ್ಲಿದೆ. ಇನ್ನೂ ಹೆಚ್ಚಿನ ಕನ್ನಡ ಛಂದಸ್ಸುಗಳ ತಿಳುವಳಿಕೆಗೆ ಯುಟ್ಯೂಬ್ ನಲ್ಲಿ ಪದ್ಯಪಾನದ ರಾ.ಗಣೇಶ್ ಅವರ ವಿಡಿಯೋಗಳನ್ನ ನೋಡಿ


ಕೊ.ಕೊ: ಈ ದಿವಸವನ್ನು ಅಮೆರಿಕೆಯಲ್ಲಿ "The first day of winter" ಎಂದು ಕರೆಯುವ ರೂಢಿ ಇದೆ. ಹಾಗಾಗಿ ಚಳಿಗಾಲದ ಮೊದಲ ದಿನ ಎಂದಿದ್ದೇನೆ. ಮೇಲಿರುವ ಕೊಂಡಿಯಲ್ಲಿ ಅದರ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ಇದೆ,


ಕೊ.ಕೊ.ಕೊ: ನಾನು ಈಗ ಇರುವಲ್ಲಿ ಚಳಿಗಾಲವೇ ಮಳೆಗಾಲ! ಹಾಗಾಗಿ”ಬೆಳಗುತಿಹ ತಾರೆಗಳ ಬಾನ ಚೆಲುವು’ ಸವಿಯೋದು ಕಷ್ಟವೇ!  ಆದರೆ ಕರ್ನಾಟಕದಲ್ಲಿ ಆಕಾಶವನ್ನು ನೋಡೋಕೆ ಬಹಳ ಒಳ್ಳೇ ಕಾಲ. ಹಾಗಿದ್ಮೇಲೆ ತಡ ಯಾಕೆ? ಹೊರಡಿ ಹೊರಕ್ಕೆ!

ಬುವಿಯಲ್ಲಿ ಅಮೃತ

ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿಮುಂಗೈಯ ಈ ಚೆಲುವೆ ಹಿಡಿದೆಳೆವಳು;ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳಮುತ್ತಿಟ್ಟವನಿಗಿಲ್ಲೆ ಅಮೃತವಿಹುದು; ಇದನೊಂದು ತಿಳಿಯದಾ ತಿಳಿಗೇಡಿಗಳು ತಾನೆ ಕಡಲ ಸುಮ್ಮನೆ ಕಡೆದ ದೇವತೆಗಳು! ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ ಪದ್ಯ-36 ):ಸಂದಷ್ಟಾಧರಪಲ್ಲವಾ ಸಚಕಿತಮ್ ಹಸ್ತಾಗ್ರಮಾಧುನ್ವತೀಮಾಮಾಮುಂಚಶಠೇತಿ ಕೋಪವಚನೈರಾನರ್ತಿತಭ್ರೂಲತಾ |ಶೀತ್ಕಾರಾಂಚಿತಲೋಚನಾಸರಭಸಂ ಯೈಶ್ಚುಂಬಿತಾಮಾನಿನೀಪ್ರಾಪ್ತಂತೈರಮೃತಂ ಶ್ರಮಾಯಮಥಿತೋ ಮೂಢೈಃ ಸುರೈಃ ಸಾಗರಃ ||-ಹಂಸಾನಂದಿಕೊ: ಅನುವಾದದಲ್ಲಿ ನೆರವಾದ ಗೆಳೆಯರಾದ ಮಂಜುನಾಥ ಕೆ.ಎಸ್. ಅವರಿಗೆ ನಾನು ಆಭಾರಿ.

ಹಬ್ಬಗಳ ಲೆಕ್ಕಾಚಾರ

Image
ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ -  ಇದು ಹಬ್ಬದ ದಿನವೇ ಹಬ್ಬ ಆಚರಿಸುವವರ ಬಗ್ಗೆ - ಅನುಕೂಲಕ್ಕೆಂದು ವೀಕೆಂಡ್ ಹಬ್ಬ ಆಚರಿಸುವರ ಬಗ್ಗೆ ಅಲ್ಲ ಅನ್ನೋದನ್ನ ಮೊದಲೇ ಸ್ಪಷ್ಟ ಪಡಿಸಿಬಿಡ್ತೇನೆ!
ನಮ್ಮ ಮನೆಗಳಲ್ಲಿ ಮಾಡುವ ಯುಗಾದಿಹಬ್ಬ, ದೀಪಾವಳಿ ಹಬ್ಬ, ಗಣೇಶನ ಹಬ್ಬ, ಬೊಂಬೆ ಹಬ್ಬ ಹೀಗೆ ಹಲವು ದೊಡ್ಡ ಹಬ್ಬಗಳು ಚಂದ್ರ ನಮಗೆ ಹೇಗೆ ಕಾಣುತ್ತಿದ್ದಾನೆ ಎಂಬ ಲೆಕ್ಕಾಚಾರದ ಮೇಲೆಯೇ ನಿಂತಿವೆ. ಚಂದ್ರಮಾನ ಲೆಕ್ಕಾಚಾರಗಳಲ್ಲಿ ಒಂದು ದಿನ ಪಾಡ್ಯ ಮುಗಿದು, ಚಂದ್ರ ಬಿದಿಗೆಗೆ ಹೋದರೆ, ಆ ದಿನವೆಲ್ಲ ಹಬ್ಬದ ಆಚರಣೆಗೆ ಪಾಡ್ಯ ಎಂಬ ಲೆಕ್ಕ. (ನನ್ನ ತಿಳುವಳಿಕೆಯ ಮಟ್ಟಿಗೆ ಬರೆದಿರುವೆ - ತಪ್ಪಿದ್ದರೆ, ತಿಳಿದವರು ತಿದ್ದಬಹುದು). ಒಂದು ವೇಳೆ, ಪಾಡ್ಯ ಬೆಳಗ್ಗೆ ಹತ್ತು ಗಂಟೆಗೇ ಮುಗಿದು ಹೋದರೂ ಆ ದಿನವೆಲ್ಲ ಪಾಡ್ಯ ಅಂತಲೇ ಲೆಕ್ಕ ಹಬ್ಬ ಮಾಡೋದಿಕ್ಕೆ. ಪಾಡ್ಯ ಬಿದಿಗೆ ಎಲ್ಲ ಚಂದ್ರನ ಎಷ್ಟು ಭಾಗ ಕಾಣುತ್ತೆ ಅನ್ನೋದರ ಮೇಲೆ ಇರೋದ್ರಿಂದ, ಅದು ನೇರವಾಗಿ ಗಣಿತದ ಲೆಕ್ಕ ಅಷ್ಟೇ. ಅದರಲ್ಲಿನ್ನೇನೂ ಅದಕ್ಕಿಂತ ಆಳವಾದ ಮಾತಿಲ್ಲ.

ಆದರೆ, ಕ್ಯಾಲಿಫೋರ್ನಿಯಾಗಿಂತ ಸುಮಾರು ಅರೆದಿನ ಮುಂದೆ ಇರುವಂತಹ ಕರ್ನಾಟಕದಲ್ಲಿ ಯಾಕೆ ಪಾಡ್ಯ ಬಿದಿಗೆ ತಡವ…