Posts

Showing posts from January, 2012

ಮುದ್ದುಸ್ವಾಮಿಗೆ

Image
ಇದ್ದನೊಬ್ಬನು ಮುದ್ದುಸ್ವಾಮಿಯು ಸಿದ್ಧನಾತನು ಖಂಡಿತ
ಮುದ್ದುಕುವರನ ಬಿಡದೆ ಭಜಿಸುತ ವೀಣೆ  ಬಾರಿಸಿ ಸಂತತ
ಸಿದ್ಧಿವಡೆದನು ರಾಮಸ್ವಾಮಿಯ ಸುತನು ದೀಕ್ಷೆಯ ಹಿಡಿದವ
ಸುದ್ದಿ ಮಾಡದೆ ಸೊಗದ ಗೀತವ  ತಿದ್ದಿ ತೀಡುತ ಪಾಡುತ ||1||

ನಾಗರಾಜನ ಹೆಸರು ಹೊಂದಿದ ಸಾಧ್ವಿತಾಯಿಯ ಮಗನಿವ
ರಾಗಸಾಗರ ಭಕ್ತಿಯಾಗರ ಮೇಳಪದ್ಧತಿ ನಿಲಿಸಲು
ಹೋಗಲಾಡಿಸಿ ದೋಷವೆನ್ನುವ ಸುಳ್ಳುಮಾತುಗಳಡಗಿಸಿ
ಸಗ್ಗವಿಲ್ಲಿಗೆ ತಂದುಕೊಟ್ಟನು ತನ್ನ ಕೃತಿಗಳ ಮೂಲಕ ||2||
-ಹಂಸಾನಂದಿ
ಚಿತ್ರಕೃಪೆ: http://en.wikipedia.org/wiki/File:Dikshitar.png

ಕೊ: ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ಬಗ್ಗೆ ಎರಡು ವೃತ್ತಗಳನ್ನು ಬರೆಯುವ ಪ್ರಯತ್ನ. ಇವೆರಡನ್ನೂ ಮತ್ತಕೋಕಿಲ ಎಂಬ ವೃತ್ತಕ್ಕೆ ಹೊಂದಿಸುವ ಗುರಿ. ಈ ಛಂದಸ್ಸಿಗೆ ಮಲ್ಲಿಕಾಮಾಲೆ ಎಂದೂ ಹೆಸರಿದೆಯಂತೆ. ಈ ಪದ್ಯಗಳು ೧೦೦% compliant ಇಲ್ಲದೇ ಇರಲೂಬಹುದು!

ಕೊ.ಕೊ: ಮುತ್ತುಸ್ವಾಮಿ ಎಂಬ ಹೆಸರು ಹೆಚ್ಚಾಗಿ ಪ್ರಚಲಿತದಲ್ಲಿದ್ದರೂ ಮುದ್ದುಸ್ವಾಮಿ ಎನ್ನುವುದೇ ಸರಿಯಾದ ರೂಪವೆಂದು ಕೆಲವು ವಿದ್ವಾಂಸರ ಅಭಿಮತ

ಕೊ.ಕೊ.ಕೊ: ಮುತ್ತುಸ್ವಾಮಿ ದೀಕ್ಷಿತರ ತಂದೆಯ ಹೆಸರು ರಾಮಸ್ವಾಮಿ ದೀಕ್ಷಿತ. ತಾಯಿಯ ಹೆಸರು ಸುಬ್ಬಮ್ಮ. ಮುತ್ತುಸ್ಚಾಮಿದೀಕ್ಷಿತರು ವೈಣಿಕ, ಗಾಯಕ ಹಾಗೂ ಯೋಗ ಸಿದ್ಧಿಪಡೆದವರೆಂದೂ ಹೆಸರಾಗಿದ್ದಾರೆ. ಇದಲ್ಲದೆ, ವೆಂಕಟಮಖಿಯ ಮೇಳ ಪದ್ಧತಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ತರುವುದಕ್ಕೆಂದೇ ಅದಕ್ಕೆ ತಕ್ಕಂ…

ನಾವಿಬ್ಬರು ನಮಗಿಬ್ಬರು

ಪದ್ಯಪಾನದಲ್ಲಿ ಈ ಪಕ್ಷದಲ್ಲಿ ಕೇಳಿದ ಪ್ರಶ್ನೆ ಇದು: "ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು" ಎಂಬ ಕುಟುಂಬ ಯೋಜನೆಯ ಘೋಷಣೆಯ ಬಗ್ಗೆ ನಿಮ್ಮ ನಿಲುವೇನು?

ನನ್ನ ಉತ್ತರ - ಎರಡು ಚೌಪದಿ ಮತ್ತೆ ಎರಡು ಷಟ್ಪದಿಗಳಲ್ಲಿ:

ಪದವರಿತು ನಡೆಯಲಿಕೆ ಎರಡು ಹೆಜ್ಜೆಯು ಬೇಕು
ಚದುರ ದಿಟ್ಟಿಗೆ ಬೇಕು ಕಣ್ಗಳೆರಡು
ಮದುವೆ ಕಳೆದೈದಾರು ವರುಷದಲಿ ಇರಬೇಕು
ಹದುಳವನು ತರಲಿಕಿಬ್ಬರು ಮಕ್ಕಳು ||1||


ಹಿಂದಿತ್ತು  ಹಾರಯ್ಕೆ ಎಂಟು ಮಕ್ಕಳು ಇರಲಿ
ಇಂದು ಬದಲಾಗಿಹುದದೆರಡೆ ಸಾಕು;
ಚಂದದಲಿ ಹೇಳಿಹುದು ಘೋಷಣೆಯ  ಸರಕಾರ
ಒಂದು ಆರತಿಗಿರಲಿ ಒಂದು ಕೀರುತಿಗೆ ||2||


ಸುಳಿದಾಡುತಿಹ ಮಗಳು
ಬೆಳಗುಕಣ್ಗಳ ಹುಡುಗಿ
ಹೊಳೆವ ಮಿಂಚಿನ ನೋಟ ಅವಳದಿರಲು
ಬೆಳೆವ ಪೈರಿನ ಸೊಬಗ
ಮೊಳಕೆಯಲ್ಲಿಯೆ ನೋಡು
ಹಳಿಯದೆಲೆ ಕೀರುತಿಯ ತಾರಳೆನುತ! ||3||
ಬರಿಯ ಆರತಿ  ಏಕೆ ಹೆಣ್ಣಿಗೆ?
ತರಲು ಬಲ್ಲಳು ಅವಳು ಕೀರುತಿ!
ಇರುವುದೇನದು ಗಂಡು ಮಗುವಿಗೆ ಕೋಡು ತಲೆಯಲ್ಲಿ?
ಎರಡು ಮಕ್ಕಳು ಗಂಡೊ ಹೆಣ್ಣೋ
ಇರಲಿ ಸೊಗಸನು ತರಲಿ ನಮ್ಮಯ
ಹರುಷಕವರೇ ದಾರಿ ದೀಪವು ಬಾಳಪಯಣದಲಿ! ||4||


-ಹಂಸಾನಂದಿ


ಕೊ: 1 ಮತ್ತು 2 ಪಂಚಮಾತ್ರಾ ಚೌಪದಿ ಛಂದಸ್ಸಿನಲ್ಲಿವೆ. 3 ಕುಸುಮ ಷಟ್ಪದಿಯಲ್ಲೂ,. 4 ಭಾಮಿನಿ ಷಟ್ಪದಿಯಲ್ಲೂ ಇವೆ.

ಬೇಡತಿಗೆರಡು ಕವಿತೆ

Image
ಪಂಚಮಾತ್ರೆಯ ಚೌಪದಿಯಲ್ಲಿ:
ಭಿಲ್ಲರಾ ಹೆಣ್ಣೀಕೆ  ಬಾಣವನು ಹೂಡಲಿಕೆ ಬಿಲ್ಲ  ಹಿಡಿಯುತ ಹೊಂಚಿಕಾಯ್ವಳೀಕೆ
ಸಲ್ಲದಿದು! ತನ್ನೆರಡು  ಕಣ್ಣಿನಾ ಕೂರಂಬಿ-
ನಲ್ಲೆ  ಕೊಲುವುದನೀಕೆ ಮರೆತಳೇಕೆ?

ಭಾಮಿನಿ ಷಟ್ಪದಿಯಲ್ಲಿ:
ಬೇಡ! ಚೆಲುವೆಯೆ ನಿನ್ನ ಕರದ-
ಲ್ಲಾಡುತಿಹ ಶರ ಭಯವ ತರುವುದು!
ಬೇಡತಿಯು ನಾನೆಂದು ಮಿಗಗಳ ಕೊಲ್ಲಬೇಕಿಲ್ಲ;   
ಕಾಡ ತೊರೆಯುತ ಹೊರಡು ಬೇಟೆಗೆ
ನಾಡ ಹೊಕ್ಕರೆ ಕಣ್ಣ ನೋಟದೆ
ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!

-ಹಂಸಾನಂದಿ


ಕೊ: ಪದ್ಯಪಾನದಲ್ಲಿ ಈ ಪಕ್ಷಕ್ಕೆಂದು ಕೊಟ್ಟ ಚಿತ್ರದ ಮೇಲೆ ನನ್ನ ಎರಡು ಪ್ರಯತ್ನಗಳಿವು. ಚಿತ್ರ ಕೃಪೆ: ಪದ್ಯಪಾನ

ಚಳಿಗಾಲದೊಂದು ಮುಂಬೆಳಗು

Image
ಕೆಲವು ದಿನಗಳ ಹಿಂದೆ ನಮ್ಮ ಕೋಣೆಯಿಂದ ಕಂಡ ಈ ಬೆಳಗಿನ ನೋಟವನ್ನು ನನ್ನ ಹೆಂಡತಿ ಸೆರೆಹಿಡಿದಾಗ,  ಅದರ ಬಗ್ಗೆ ಬರೆದ ಒಂದು ಕುಸುಮ ಷಟ್ಪದಿ :

ಮಾರ್ಗಶಿರ ಕಳೆದಾಯ್ತು
ಚಿಗುರೆಲ್ಲ ಮರೆಯಾಯ್ತು
ಮುಗುಳುನಗೆ ಹೇಗಿಂದು ಕಂಡಿತಿಲ್ಲಿ?
ಆಗಸದಿ ಕುಣಿದಿಹುದು
ಹೊಂಗಿರಣ ನೇಸರನ
ಮುಗಿಲಿನಾ ಚಿತ್ತಾರ ರಂಗವಲ್ಲಿ!

-ಹಂಸಾನಂದಿ

ಚಿತ್ರ ಕೃಪೆ:  Poornima's Clicks

ಚೊಚ್ಚಲ ಬಸಿರು

ಕನ್ನಡ  ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ,  ಪದ್ಯಪಾನ - ಎನ್ನುವುದು ಕಾವ್ಯ ಕುತೂಹಲಿಗರ ಒಂದು ತಂಗುದಾಣವೇ ಸರಿ. ಟೋಸ್ಟ್ ಮಾಸ್ಟರ್ಸ್ ಹೇಗೆ ಸಮಾನ ಮನಸ್ಕರ ನಡುವೆ ಮಾತುಗಾರಿಕೆಯನ್ನು ಕಲಿಸುತ್ತೋ, ಪದ್ಯಪಾನ  ಅದೇ ರೀತಿ, ಕವಿತೆಗಳನ್ನ ಛಂದಸ್ಸಿಗೆ ತಕ್ಕಂತೆ ಬರೆಯುವುವನ್ನ "ನೋಡಿ ಕಲಿ-ಮಾಡಿ ತಿಳಿ" ಯ ಮೂಲಕ ಕಲಿಸುತ್ತೆ.

ತಿಂಗಳೊಪ್ಪತ್ತಿನಲ್ಲಿ ಹೊಸ ಹೊಸ ಪ್ರಶ್ನೆಗಳನ್ನು ಹಾಕಿ, ಆಸಕ್ತರನ್ನು ಪದ್ಯಗಳನ್ನು ಬರೆಯಲು ಪ್ರೇರೇಪಿಸುವ ಈ ಪದ್ಯಪಾನದ ಹಿಂದಿರುವವರು ಶತಾವಧಾನಿ ಗಣೇಶ್ ಮತ್ತೆ ಕಾವ್ಯಾಸಕ್ತರ ಒಂದು ಬಳಗ. ಕೆಲವು ತಿಂಗಳುಗಳಿಂದ ಆಗೀಗ ಈ ತಾಣಕ್ಕೆ ಹೋಗಿ ಓದುತ್ತಿದ್ದುದ್ದುಂಟಾದರೂ, ನಾನು ಅಲ್ಲಿಯ ಪ್ರಶ್ನೆಗಳಿಗೆ ಉತ್ತರವಾಗಿ  ಪದ್ಯಗಳನ್ನು ಬರೆಯುವ ಪ್ರಯತ್ನ ಮಾಡುತ್ತಿರುವುದು ಈಚೆಗಷ್ಟೇ. ಎಡವದೇ ನಡೆವವರುಂಟೇ?  ಆದರೆ ಎಡವಿದರೆ, ಕೈಹಿಡಿದು ನಡೆಸುವಂತಹ ಕನ್ನಡ ಕವಿತಾಸಕ್ತರ ದಂಡೇ ಅಲ್ಲಿರುವಾಗ ಪ್ರಯತ್ನಿಸದೇ ಸುಮ್ಮನಿದ್ದರೆ ಅದರಿಂದ ನಷ್ಟ ನನಗೇ ತಾನೇ! ಅದಕ್ಕೇ ಈಚೆಗೆ ಒಂದೆರಡು ಪ್ರಯತ್ನ ಮಾಡತೊಡಗಿದ್ದೇನೆ.

ಅದರಲ್ಲಿ ಈ ಬಾರಿಯ ಪ್ರಶ್ನೆ - ಯಾವುದಾದರೂ ಒಂದು ಛಂದಸ್ಸಿನಲ್ಲಿ ಚೊಚ್ಚಲ ಬಸಿರ ಬಗ್ಗೆ ಪದ್ಯ ಬರೆಯಬೇಕಾಗಿತ್ತು.

ಅದಕ್ಕೆಂದು ಬರೆದ ಎರಡು ಕುಸುಮ*ಗಳು:


ಮೊದಲ ಮಳೆಯಾ ಸೊಗಸು
ಮೊದಲ ಬಸಿರಿನ ಹಿತವು
ಹದವಾದ ರೆಂಬೆಯಲಿ ಮೊಗ್ಗಿನರಳು |
ಚದುರಿತಾಗಸದಿ ತುಂ-
ಬಿದ ಕಾರಮೋಡಗಳು
ಮುದದಿ ಕಂದನು ಬುವಿಗೆ ಬರುವ ಮೊದ…

ಹೆಂಡತಿಯೊಬ್ಬಳು ಮನೆಯಲಿರದಿದ್ದರೆ...

Image
ಕಮಲದಾ ಮೊಗದವನೆ ಕಮಲದಾ ಕಣ್ಣವನೆ
ಕಮಲಜನ ಹೊಕ್ಕುಳಲಿ ಹಡೆದಿರುವನೇ
ಸುಮನಸನೆ  ನಿನ್ನಂದ-
ದಮಲ ಮುಖ ಕಂದಿದ್ದು    
ಕಮಲೆ  ಬಳಿಯಿಲ್ಲೆಂಬ ದುಗುಡದಲ್ಲೇ ?
-ಹಂಸಾನಂದಿ


ಕೊ: ಕಮಲೆ = ಕಮಲದಲ್ಲಿ ನೆಲೆನಿಂತವಳು, ಲಕ್ಷ್ಮಿ. ಕಮಲಜ=ಬ್ರಹ್ಮ.
ಕೊ.ಕೊ: ಪದ್ಯಪಾನದಲ್ಲಿ ಈ ಚಿತ್ರವನ್ನು ಕೊಟ್ಟು ಅದರ ಬಗ್ಗೆ ಒಂದು ಛಂದೋಬದ್ಧವಾದ ಕವಿತೆ ಬರೆಯಲು ಕೇಳಿದ್ದರು. ಅದಕ್ಕೆಂದು ಕುಸುಮ ಷಟ್ಪದಿಯಲ್ಲಿ ಒಂದು ಪ್ರಯತ್ನ ಇದು
ಕೊ.ಕೊ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರುಪಾಯಿ ಅಂತ ಹಾಡಿದ್ದು ಬರೀ ಕೆ ಎಸ್ ನ ಒಬ್ಬರೇ ಅಲ್ಲ, ಆ ಮುಂಚೇನೂ ಎಷ್ಟೋ ಜನ ಅದನ್ನ ಒಪ್ಪಿಕೊಂಡಿದ್ದಾರೆ, ಆದ್ರೆ ಎಲ್ಲರಿಗೂ ಕವಿತೆ ಬರೆಯೋಕೆ ಬರೋದಿಲ್ಲ ಅಂತ ಹಿಂದೆ ಒಂದು ಹರಟೆ ಬರೆದಿದ್ದೆ. ಅದನ್ನು ಓದಬೇಕಾದರೆ ಇಲ್ಲಿ ಚಿಟಕಿಸಿ.