Posts

Showing posts from February, 2012

ಬಂದಿದೆ ಚೈತ್ರ! ನಾಟಕ ಚೈತ್ರ!

Image
ಚಿಗುರು ತುಂಬಿರೆ ಸುತ್ತ ಮುತ್ತಲು
ಮುಗುಳು ತುಂಬಿರೆ ಸಾಲುಮರ ಮ-
ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ
ನಗುವ ತಾರಲು ಮುದವ ತೋರಲು
ಸೊಗವ ತೋರುತ ಮನವನೊಮ್ಮೆಲೆ
ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!


ಚಿತ್ರ ಕೃಪೆ: ಪೂರ್ಣಿಮಾ
ಇನ್ನೂ ಫೆಬ್ರವರಿಯೇ ಕಳೆದಿಲ್ಲ ಈಗಲೇ ಅದೇನು ಚೈತ್ರ ಅಂದಿರಾ? ಇದಾಗಲೇ ಇಲ್ಲಿ ಸ್ಯಾನ್ ಹೋಸೆಯಲ್ಲಿ ಹೂವುಗಳು ಅರಳುತ್ತಿದ್ದು, ರಸ್ತೆಗಳನ್ನೆಲ್ಲ ಬಣ್ಣಗಳಿಂದ ತುಂಬುವ ಹಾಗೆ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ನಾಟಕ ಚೈತ್ರ ೨೦೧೦ ರಂತೆ, ಈ ಬಾರಿಯ ನಾಟಕ ಚೈತ್ರ ೨೦೧೨ರಲ್ಲಿಯೂ ಎರಡು ಕನ್ನಡ ನಾಟಕಗಳು - ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ಮತ್ತೆ ಬಿ ಆರ್ ಲಕ್ಷ್ಮಣ ರಾವ್ ಅವರ ನಂಗ್ಯಾಕೋ ಡೌಟು -  ಮುಂದಿನ ಭಾನುವಾರ ಮಾರ್ಚ್ ೪ ರಂದು ಇಲ್ಲಿಯ ರಂಗ ಮಂದಿರವೊಂದರಲ್ಲಿ  ಇಲ್ಲಿನ  ಕನ್ನಡ ನೋಡುಗರಿಗಾಗಿ ಪ್ರಯೋಗಗೊಳ್ಳುತ್ತಿವೆ. 
ವಿವರಗಳಿಗೆ ಈ ಕೆಳಗಿವೆ.  ನೀವು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿದ್ದರೆ, ತಪ್ಪಿಸಿಕೊಳ್ಳಲೇಬಾರದಂತಹ ಕಾರ್ಯಕ್ರಮ ಇದು ಅಂತ ಹೇಳಬೇಕಿಲ್ಲ! ಟಿಕೇಟ್ ಬೇಕಿದ್ದವರು ಇಲ್ಲಿ ಟಿಪ್ಪಣಿ ಹಾಕಿ ನನ್ನನ್ನು ಸಂಪರ್ಕಿಸಬಹುದು.

ಮರೀದೆ ಬರ್ತೀರಲ್ಲ?
-ಹಂಸಾನಂದಿ

ಗಜೇಂದ್ರ ಮೋಕ್ಷ

Image
ಸಮಸ್ಯಾ ಪೂರಣದ ಬಗ್ಗೆ ನೀವು ಕೇಳೇ ಇರಬೇಕು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಈ ವಿಷಯದ ಬಗ್ಗೆ ಬರೆದಿದ್ದೆ. 
ಕಾಳಿದಾಸನ, ತೆನಾಲಿ ರಾಮನ, ಕಂತಿ ಹಂಪನ ಸಮಸ್ಯಾಪೂರಣಗಳು ಬಹಳ ಪ್ರಸಿದ್ಧವೇ ಆಗಿವೆ. ಇವುಗಳಲ್ಲಿ ಕೆಲವು ಕಟ್ಟುಕತೆಗಳೇ ಇರಬಹುದಾದರೂ ಆಸಕ್ತಿ ಮೂಡಿಸುವ ವಿಚಾರಗಳು ಎನ್ನುವುದರಲ್ಲೇನೂ ಅನುಮಾನವಿಲ್ಲ. ಕಾಳಿದಾಸನದು ಎನ್ನಲಾದ ಕಮಲೇ ಕಮಲೋತ್ಪತ್ತಿಃ,  ಕ ಖ ಗ ಘ , ಠಾಠಂಠಠಂ.... ಇವುಗಳೆಲ್ಲ ಪಾದ ಪೂರಣದ ಸಮಸ್ಯೆಗಳು. ಅಂದರೆ ಪದ್ಯದ ಒಂದು ಸಾಲನ್ನು ಕೊಟ್ಟಿದ್ದಾಗ ಇನ್ನು ಉಳಿದ ಸಾಲುಗಳನ್ನು ಅರ್ಥ ಪೂರ್ಣವಾಗಿ ತುಂಬುವುದು ಇದರ ಗುರಿ.

ಇನ್ನೊಂದು ರೀತಿಯ ಸಮಸ್ಯಾಪೂರಣವೂ ಇದೆ -  ಕೊಟ್ಟಿರುವ ಪದಗಳನ್ನು ಬಳಸಿ ಪದ್ಯವನ್ನು ಬರೆಯುವುದು ಈ ರೀತಿಯ ಸಮಸ್ಯಾಪೂರಣದ ಗುರಿ.  ಈಚೀಚೆಗೆ ಪದ್ಯಪಾನದ ಸಹವಾಸ ಆದಮೇಲೆ ಈ ರೀತಿಯ ಹಲವು ಸಮಸ್ಯೆಗಳನ್ನುನೋಡಿದ್ದೆ. ಆದರೆ ಇವತ್ತಿನವರೆಗೆ ನಾನು ಆ ರೀತಿಯ ಪ್ರಶ್ನೆಯನ್ನು ಬಿಡಿಸಲು ಹೋಗಿರಲಿಲ್ಲ.ಈ ಬಾರಿ ಅಲ್ಲಿ  Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ ಅಂತಿತ್ತು. ಸ್ವಲ್ಪ ತಲೆಯೇ ತಿರುಗಿ ಹೋಯಿತು ಅನ್ನಿ. ಮೊದಲೇ ನನಗಿರುವ ಛಂದಸ್ಸಿನ ತಿಳಿವು ಕಡಿಮೆಯೇ. ಆದರೂ ಇರಲಿ ಅಂತ ಸ್ವಲ್ಪ ಪ್ರಯತ್ನಿಸಿ ಅಂತೂ ಇಂತೂ ಗಜೇಂದ್ರ ಮೋಕ್ಷದ ಸಂದರ್ಭದ ಬಗ್ಗೆ ಒಂದು ಚೌಪದಿಯನ್ನು ಹೊಸೆದಿದ್ದೇನೆ
ಓದಿ…

ಶಿವನ ಪೂಜೆಯ ಹೂವು

ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ  ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ  ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ  ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!  

ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯)

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

-ಹಂಸಾನಂದಿ

ಕೊ: ಹಿಂದೆ ಈ ಪದ್ಯವನ್ನೊಮ್ಮೆ ಅನುವಾದಿಸಿದ್ದೆ. ಆದರೆ ಈ ವಾರದ ಪದ್ಯಪಾನಕ್ಕೆಂದು ಅದೇ ಅನುವಾದವನ್ನು ಬದಲಾಯಿಸಿ ಭಾಮಿನೀ ಷಟ್ಪದಿಗೆ ಅಳವಡಿಸಿದ್ದೇನೆ

ನನ್ನ ಹುಣ್ಣಿಮೆಗೆ

Image
ಹೊನ್ನ ಬಣ್ಣದ ರವಿಯ ಉದಯದೊ-
ಳೆನ್ನ ಚಿತ್ತವ ಕದಿಯ ಹೊರಟರ-
ದಿನ್ನು ವ್ಯರ್ಥವು ಹೂವೆ ನೀನಿದನರಿತರೊಳ್ಳೆಯದು!
ಜೊನ್ನ ಹುಣ್ಣಿಮೆ ಜೇನ ಮನದವ-
ಳೆನ್ನ ಮನವನು ತುಂಬಿ ಬಿಟ್ಟಿರ
ಲೆನ್ನ ನೋಟಕೆ ಬೀಳ್ವುದುಂಟೇ ಬೇರೆ ಕಮಲಗಳು?


-ಹಂಸಾನಂದಿ


ಕೊ: ಈ ವಾರ ಪದ್ಯಪಾನದಲ್ಲಿ ವರ್ಣನೆಗೆಂದು ಕೊಟ್ಟ ಚಿತ್ರ ಇದು. ಈ ಪದ್ಯ ಭಾಮಿನೀ ಷಟ್ಪದಿಯಲ್ಲಿದೆ  (ಚಿತ್ರ ಕೃಪೆ: ಪದ್ಯಪಾನ)ಚಿಗರೆಗಣ್ಣವಳ ಸಿಟ್ಟು

ಗೆಳತಿ! ನನ್ನೆದೆ
ಒಡೆದರೂ ಸರಿ ;

ಎನ್ನೊಡಲ ಆ ಮದನ
ಸೊರಗಿಸಿದರೂ ಸರಿ ;

ಒಂದೆಡೆ ನಿಲ್ಲದವನಲ್ಲಿ
ನಾನದೆಂತು ಒಲವನಿಡಲೇ?

ಹೀಗೆ ಸಿಟ್ಟಿನಲಿ
ಸೆಡವಿನಲಿ ನುಡಿಯುತ್ತಲೇ

ನಲ್ಲನ ದಾರಿಯ
ಕಳವಳದಲಿ
ಬಿಡದೇ ನೋಡಿದಳು
ಚಿಗರೆಗಣ್ಣಿ!

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ ಪದ್ಯ-73  ):

ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್
ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ |
ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ
ರಮಣಪದವೀ ಸಾರಂಗಾಕ್ಷ್ಯಾ ಸಶಂಕಿತ*ಮೀಕ್ಷಿತಾ ||

 -ಹಂಸಾನಂದಿ

 ಕೊ: ಕಡೆಯ ಸಾಲಿನಲ್ಲಿ ಸಶಂಕಿತಮೀಕ್ಷಿತಾ ಎಂಬುದಕ್ಕೆ ನಿರಂತರಮೀಕ್ಷಿತಾ ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅನುವಾದದಲ್ಲಿ ಎರಡೂ ಅರ್ಥಗಳನ್ನು ತಂದಿದ್ದೇನೆ.

 ಕೊ.ಕೊ: ಮೂಲದಲ್ಲಿ, ನಲ್ಲನು ಒಂದೆಡೆ ನಿಲ್ಲುವನಲ್ಲ, ಹಾಗೇ ಒಬ್ಬಳಲ್ಲೇ (ಪದ್ಯದ ನಾಯಕಿಯೊಬ್ಬಳಲ್ಲೇ)   ಮನವನ್ನಿಡುವನಲ್ಲ ಎನ್ನುವ ಎರಡೂ ಭಾವಗಳು ಕಂಡುಬರುತ್ತಿವೆ. ಅನುವಾದದಲ್ಲಿ ಅದು ಅಷ್ಟು ಚೆನ್ನಾಗಿ ತೋರಿಬಂದಿಲ್ಲದಿದ್ದರೆ ಅದು ನನ್ನ ಅನುವಾದದ ಮಿತಿ ಅಷ್ಟೇ.

ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ. ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ ಹಲವು ವಿಷಯ ಬಗ್ಗೆ - ಹರಿದಾಸ ಸಾಹಿತ್ಯದ ಹಿನ್ನಲೆ, ಹರಿದಾಸರ ಸಂಗೀತ ಪದ್ಧತಿ, ಶ್ರೀಪಾದರಾಯರು, ವ್ಯಾಸರಾಯರು , ಪುರಂದರದಾಸರು, ಕನಕದಾಸರು, ವಿಜಯದಾಸರು ಇವರೆಲ್ಲರ ಬಗೆಗೆ ಸ್ವಲ್ಪ ವಿವರಣೆಗಳು ಇಲ್ಲಿವೆ.

ಕೇಳಲು ಕೆಳಗೆ ಚಿಟಕಿಸಿ.

ಈ ಭಾಷಣ ಮಾಡಿದ ನಂತರ ನಡೆಸಿದ ಓದಿನಿಂದಾಗಿ, ಆಗ ನನಗೆ ತಿಳಿದಿದ್ದಿಲ್ಲದ ಕೆಲವು ವಿಷಯಗಳು ನನಗೆ ಇನ್ನೂ ಸ್ಪಷ್ಟವಾಗಿವೆ. ಹಾಗಾಗಿ ಒಂದೆರಡು ಅಂಶಗಳಲ್ಲಿ ಸ್ವಲ್ಪ ತಪ್ಪು ನುಸುಳಿದೆ ಎನ್ನಿಸಿದರೂ,  ಒಟ್ಟಾರೆ ನೋಡಿದರೆ ಈ ವಿಷಯದಲ್ಲಿ ಆಸಕ್ತಿ  ಇದ್ದು ಮಾಹಿತಿ ತಿಳಿದಿಲ್ಲದವರಿಗೆ ಅನುಕೂಲವಾಗಬಹುದು ಎಂದು ಹಾಕುತ್ತಿದ್ದೇನೆ.

ಪುರಂದರ ಆರಾಧನೆಯ ಸಮಯದಲ್ಲೇ ಇದನ್ನು ಹಾಕಬೇಕಿತ್ತು, ಆಗಲಿಲ್ಲ. ತಡವಾದರೂ ಪರವಾಗಿಲ್ಲ! ಇಂದಿನ ದಿನವೇ ಶುಭದಿನವು ಅಂತ ಅವರೇ ಹೇಳಿಲ್ಲವೇ?

 ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

 -ಹಂಸಾನಂದಿ