Posts

Showing posts from August, 2013

ಕಸ್ತೂರೀ ತಿಲಕಂ ...

Image
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ
ಎಣೆಯಿರದ ಕೌಸ್ತುಭವು ಅವನೆದೆಯಲಿ
ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ
ಕಣದ ಕೈಯಲ್ಲಿ ಮೆರೆವ  ಕೊಳಲು!

ನರುಗಂಪು ಬೀರುತಿರಲವನು ಪೂಸಿದ ಗಂಧ
ಕೊರಳಲೋಲಾಡಿ ಮೆರೆಯುತಿರೆ ಸರವು
ನೆರೆದ ಗೋಪಿಯರೆಲ್ಲ ನಡುವಿನಲಿ ಕಂಗೊಳಿಸು
ತಿರುವನೈ ಗೊಲ್ಲನಿವ ರತುನದಂತೆ 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-108

ಕಸ್ತೂರೀ ತಿಲಕಂ ಲಲಾಟ ಪಟಲೆ ವಕ್ಷಸ್ಥಲೇ ಕೌಸ್ತುಭಂ
ನಾಸಾಗ್ರೇ ವರಮೌಕ್ತಿಕಂ ಕರತಲೇ ವೇಣು: ಕರೇ ಕಂಕಣಂ
ಸರ್ವಾಂಗೇ ಹರಿ ಚಂದನಂ ಕಲಯಯನ್ಕಂಠೇ ಚ ಮುಕ್ತಾವಲೀ
ಗೋಪಸ್ತ್ರೀಪರಿವೇಷ್ಠಿತೋ ವಿಜಯತೇ ಗೋಪಾಲ ಚೂಡಾಮಣಿ:

कस्तूरी तिलकं ललाट पटले वक्ष: स्थले कौस्तुभं ।
नासाग्रे वरमौक्तिकं करतले वेणु: करे कंकणं॥
सर्वांगे हरि चन्दनं कलयन्कंठे च मुक्तावली।
गोपस्त्रीपरिवेष्टितो विजयते गोपाल चूडामणि:॥


-ಹಂಸಾನಂದಿ

ಕೊ: ನೆನ್ನೆ-ಇವತ್ತು ಕೃಷ್ಣ ಜಯಂತಿಯಾದ್ದರಿಂದ, ಇದು ತಕ್ಕ ಪದ್ಯವೆಂದು ಅನುವಾದಿಸಿದೆ

ಕೊ.ಕೊ: ಮೂಲ ಪದ್ಯಕ್ಕಿಂತ ಅಲ್ಲಲ್ಲಿ ದೂರವಾಗಿರಬಹುದಾದರೂ ಒಟ್ಟಾರೆ ಭಾವವನ್ನುಳಿಸುವ ಪ್ರಯತ್ನ ಮಾಡಿರುವೆ


ಕೊ.ಕೊ.ಕೊ: ಚಿತ್ರ ಹಿಂದೂ ಪತ್ರಿಕೆ ಕಲಾವಿದರಾದ ಕೇಶವ್ ವೆಂಕಟರಾಘವನ್ ಅವರ ತೈಲಚಿತ್ರ. ಅವರು ಈ ಚಿತ್ರವನ್ನು ಇದೇ ಪದ್ಯವನ್ನು ಮನಸ್ಸಿನಲ್ಲಿಟ್ಟುಕೊಂಡೇ ರಚಿಸಿದ್ದಂತೆ. ಗೋಪಿಯರು ಸುತ್ತುವರಿದಿರುವುದನ್ನು ಅವರು ಕೃಷ್ಣನ ಕಿರೀಟದಲ್ಲಿ ಚಿತ್ರಿಸಿರುವುದು ಬಲುಸೊಗಸು…

ಕೊರಗು

Image
“ಇದು ಕಪ್ಪು” “ಕಪ್ಪು, ಹೌದು ”  “ಮೈ ಬಿಳುಪಲ್ಲವೇ?” “ಅಲ್ಲದೇ ಏನು!”  “ಹೋಗೋಣ ನಡೆ ” “ನಡೆ ಮತ್ತೆ ”  “ಈ ದಾರಿಯಲ್ಲಿ” “ಇದುವೆ ದಾರಿ!”
ಗೆಳತಿ! ಮೂರು ಹೊತ್ತೂ   ಬಿಡದೆ ಹಿಂದಿರುತಿದ್ದ ನಲ್ಲ  ಬೇರೆಯವನಾಗಿಯೇ ಹೋದನಲ್ಲ! ಈ ಗಂಡಸರನು ಅರಿತವರಿಲ್ಲ! 

ಸಂಸ್ಕೃತ ಮೂಲ (ಅಮರುಕನ ಅಮರುಶತಕದ 94ನೇ ಪದ್ಯ):

ಇದಂ ಕೃಷ್ಣಂ ಕೃಷ್ಣಂ ಪ್ರಿಯತಮ ತನುಃ ಶ್ವೇತಮಥ ಕಿಂ
ಗಮಿಷ್ಯಾಮೋ ಯಾಮೋ ಭವತು ಗಮನೇನಾಥ ಭವತು
ಪುರಾಯೇನೈವಂ ಮೇ ಚಿರಮ್ ಅನುಸೃತಾಚಿತ್ತಪದವೀ
ಸ ಏವಾನ್ಯೋ ಜಾತಃ ಸಖೀ ಪರಿಚಿತಾಃ ಕಸ್ಯ ಪುರುಷಾಃ

-ಹಂಸಾನಂದಿ

ಚಿತ್ರ: ರಾಜಾ ರವಿವರ್ಮನ "Ladies in the Moonlight" ಎನ್ನುವ ವರ್ಣಚಿತ್ರ. ಕೃಪೆ: ವಿಕಿಪೀಡಿಯಾ 

ಗುಟ್ಟುಬಿಡದ ಗೌರಿಗೊಂದು ಸ್ತುತಿ

Image
“ತರಳೆಯೇನಿದು ಬೆವೆತೆ?” “ಕಣ್ಗಳೊ
ಳಿರುವ ಬೆಂಕಿಗೆ!” “ನಡುಕವೇ ಚಂ
ದಿರ ಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!”
“ಅರರೆ ಮೈಯಲಿ ಪುಳಕವೇನಿದು?”
“ಶಿರದ ಮೇಲಿನ ಗಂಗೆ ತುಂತುರು
ತರುವ ಚಳಿಗೆ”ನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ!

ಸಂಸ್ಕೃತ ಮೂಲ (ಸುಭಾಷಿತ ರತ್ನಕೋಶದಿಂದ) :

ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ
ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।
ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ
ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥

-ಹಂಸಾನಂದಿ

ಕೊ: ಇದು ಗೌರಿ-ಶಂಕರರ ನಡುವಿನ ಮಾತುಕತೆಯಂತೆ ಹೆಣೆದಿರುವ ಗೌರಿಯ ಸ್ತುತಿ ಅಂತ ಹೇಳಬೇಕಿಲ್ಲ ಅಂದುಕೊಂಡಿದ್ದೀನಿ

ಕೊ.ಕೊ: ಈ ಪದ್ಯವನ್ನ ಹಿಂದೆ ಗೌರಿಯ ಗುಟ್ಟು ಅನ್ನುವ ಹೆಸರಿನಲ್ಲಿ ಅನುವಾದಿಸಿದ್ದೆ. ಆಗ ಯಾವುದೇ ಛಂದಸ್ಸಿಗೆ ಕಟ್ಟು ಬಿದ್ದಿರಲಿಲ್ಲ - ಈಗ ಈ ಪದ್ಯವನ್ನ ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದು ಪದ್ಯಪಾನದಲ್ಲಿ ಕೇಳಿದ ಸಂಭಾಷಣೆಯ ಪದ್ಯವೊಂದನ್ನು ಬರೆಯಬೇಕೆಂಬ ಸವಾಲಿಗೆ. ಸಂಸ್ಕೃತ ಮೂಲ ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ.

ಕೊ.ಕೊ.ಕೊ: ಮೂಲದ ಪೂರ್ತಿ ಆಶಯವನ್ನು ನನ್ನ ಭಾಮಿನಿಯಲ್ಲಿ ಸೇರಿಸಲಾಗದ್ದು ನನ್ನ ಕೊರತೆಯಷ್ಟೇ!

ಚಿತ್ರ ಕೃಪೆ: http://www.exoticindiaart.com/paintings/

ಪತಿಗಳ್ ಸೀತೆಗದೆಷ್ಟು ಮಂದಿ ?

Image
ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ? ಅದೆಂಥಾ ಅಭಾಸ ಅಲ್ಲವೇ?
ಈಗ ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಇದು :
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ?
ದೇವರೇ ಗತಿ!  ಮೊದಲೇ ಸೀತೆಗೆ ಒಂದಕ್ಕಿಂತ ಹೆಚ್ಚು ಗಂಡಂದಿರು ಅಂತ ಹೇಳಿದ್ದೊಂದೇ ಅಲ್ಲ - ಲೆಕ್ಕ ಹಾಕೋಕಾಗದಷ್ಟು ಜನ ಅಂತ ಬೇರೆ ಅಂತಿದ್ದಾರಲ್ಲಪ್ಪ? ರಾಮ ರಾಮಾ! ಇದಕ್ಕಿಂತ ಬೇರೆ ತರಹ ಹೆಸರು ಕೆಡಿಸೋದನ್ನೆಲ್ಲಾದರೂಕಂಡಿದೀರಾ?
ಆದರೆ ಸಮಸ್ಯಾ ಪುರಾಣದ ಇಂತಹ ಪ್ರಶ್ನೆಗಳನ್ನ ನೋಡಿದವರಿಗೆ ಗೊತ್ತೇ ಇರುತ್ತೆ -ಒಂದು ಸ್ಬಲ್ಪ ಪದಗಳ ಜೊತೆಯಲ್ಲಿ ಆಟ ಆಡಿದರೆ ಇಲಿಯನ್ನ ಹುಲಿ ಮಾಡಬಹುದು , ಇಲಿಯನ್ನ ಚೆಕ್ಕಿಲಿ ಮಾಡಿ ತಿಂದುಬಿಡಬಹುದು
ಈ ಸಮಸ್ಯೆಯನ್ನು ಬಿಡಿಸಲು ನಾನು ಸೀತೆಯನ್ನ ಶಾಲೆಗೆ ಕಳಿಸಬೇಕಾಯಿತು. ಅಂದ ಹಾಗೆ ಜನಕ ರಾಯನ ಮಗಳು ಸೀತೆ ಇಂಥ ಶಾಲೆಗೆ ಹೋಗಿದ್ದಳೋ ಇಲ್ಲವೋ ನನ್ನಗ್ಗೊತ್ತಿಲ್ಲ. ಅಥವಾ, ಹೋಗಿದ್ದರೂ  ಹೋಗಿದ್ದಿರಬಹುದು ! ಯಾರು ಕಂಡವರು? ಇರಲಿ, ಈಗ ನನ್ನ ಉತ್ತರವನ್ನ ಓದಿ:
ಹಿತದೊಳ್ ತೋರ್ಪೆನು ಶಾಸ್ತ್ರಪಾಠಗಳ ನಾಂ ನೀ ಬೇಗ ಬಾರೆಂದೆನ- ಲ್ಕತಿಸಂತೋಷದಿ ಬಂದ ಸೀತೆ ಮುದದೊಳ್ ಕಣ್ಣಲ್ಲೆ ಕಣ್ಣಾಗಿ ಜಾ- ಗೃತಿಯಿಂ ಪಟ್ಟಕಮಂ ತಳೆರ್ದಿರೆ ಮೊದಲ್ ಬಾನಲ್ಲಿ ಕಂಡರ್ ದಿವ-  ಸ್ಪತಿಗಳ್ ಸೀತೆಗದೆ…

ಕಂಡೆನಾ ಕನಸಿನಲಿ! ಗೋವಿಂದನ!

Image
ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ
ಕಾರ್ಮೋಡದಂತೆಸೆವ ದಟ್ಟಕೂದಲಿಗೆ
ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ
ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ!

ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ
ತಬ್ಬಿಹಿಡಿದಿರಲೆನ್ನನೆಚ್ಚೆತ್ತೆನಮ್ಮ!
ಮುದ್ದು ತರುಣನ್ನೀಗ ಕಂಡೆನಾ ಕನಸಿನಲಿ
ಇಟ್ಟ ತುಳಸಿಯಮಾಲೆಯೊಡವೆಯವನ!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ಎರಡನೇ ಆಶ್ವಾಸದ ಏಳನೇ ಪದ್ಯ):

ವೇಣೀಮೂಲೇ ವಿರಚಿತಘನಶ್ಯಾಮ ಪಿಂಛಾವಚೂಡೋ
ವಿದ್ಯುಲ್ಲೇಖಾವಲಯಿತ ಇವ ಸ್ನಿಗ್ಧ ಪೀತಾಂಬರೇಣ
ಮಾಮಾಲಿಂಗನ್ಮರಕತಮಣಿಸ್ತಂಭ ಗಂಭೀರಬಾಹುಃ
ಸ್ವಪ್ನೇ ದೃಷ್ಟಸ್ತರುಣ ತುಲಸೀಭೂಷಣೋ ನೀಲಮೇಘಃ

-ಹಂಸಾನಂದಿ

ಕೊ: 'ಕಂಡೆನಾ ಕನಸಿನಲಿ ಗೋವಿಂದನ' ಎಂಬುದು ಪುರಂದರ ದಾಸರ ಒಂದು ಜನಪ್ರಿಯ ಪದ. ಇದರಲ್ಲಿ ಪುರಂದರದಾಸರು ತಾನು ಕನಸಿನಲ್ಲಿ ಕಂಡ ಗೋವಿಂದ ಹೇಗಿದ್ದನೆಂದು ಬಗೆಬಗೆಯಾಗಿ ಬಣ್ಣಿಸುತ್ತಾರೆ. ಅಲ್ಲಿನ ಕಟ್ಟಿದ ವೈಜಯಂತಿ ತುಳಸಿವನಮಾಲೆ ಇಟ್ಟ ದ್ವಾದಶನಾಮ ನಿಗಮಗೋಚರನ ಅನ್ನುವ ಸಾಲುಗಳು ನಾನು ಅನುವಾದಿಸುವಾಗ ಮನಸ್ಸಿಗೆ ಬಂದುವು.

ಕೊ.ಕೊ: ಅನುವಾದದಲ್ಲಿ ಆದಷ್ಟೂ ಮೂಲದಲ್ಲಿದ್ದ ಪದಗಳನ್ನು, ಭಾವನೆಗಳನ್ನು ತೋರಿಸಬಾರದೆಂಬುದು ಒಂದು ಸಾಮಾನ್ಯ ನಿಯಮ. ಆದರೆ ಅದನ್ನು ಈ ಬಾರಿ ಸ್ವಲ್ಪ ಮೀರಿದ್ದೇನೆ. ಮುಖ್ಯವಾಗಿ, ಮೂಲದಲ್ಲಿ, ಸ್ವಪ್ನವನ್ನು ಕಂಡಿದ್ದು ಯಾರು, ಅದನ್ನು ಯಾರಿಗೆ ಹೇಳಿದರು ಎನ್ನುವುದು ತೋರ್ಪಡುವುದಿಲ್ಲ. ನನ್ನ ಅನುವಾದದಲ್ಲಿ ನಾನು ಸ್ವಲ್ಪ ಸ್ವತಂತ…