ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?


ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ.
ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ.
ಆದರೆ ಸಾಮಾನ್ಯ ಪತ್ರಿಕೆಗಳಲ್ಲಿ ಮಾರ್ಚ್ ೨೧ರಿಂದ ಏಪ್ರಿಲ್ ೨೧ರ ವರೆಗೆ ಹುಟ್ಟಿದವರೆಲ್ಲ ಮೇಷ ರಾಶಿ ಅಂತ ಬರೆದಿರ್ತಾರೆ. ಗಮನಿಸಿದೀರಾ? ಯಾಕಂದರೆ ಅದು ಸೌರಮಾನದ ರೀತಿ. ಭೂಮಿ ಸೂರ್ಯನ ಸುತ್ತ ಒಂದು ವರ್ಷದಲ್ಲಿ ಒಮ್ಮೆ ತಿರುಗುವುದರಿಂದ, ನಮಗೆ  ಸೂರ್ಯ ಆಕಾಶದ ಸುತ್ತ ಒಂದು ವರ್ಷದಲ್ಲಿ ನಕ್ಷತ್ರಗಳ ಹಿನ್ನೆಲೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ನಮಗೆ ತೋರುತ್ತೆ.   ಹಾಗಾಗಿ ಸೂರ್ಯ ಆಕಾಶದ ರಾಶಿ ಚಕ್ರದ ಹನ್ನೆರಡು ರಾಶಿಗಳಲ್ಲಿ ಒಂದೊಂದು ತಿಂಗಳೂ ಒಂದು ರಾಶಿಯಲ್ಲಿ ಚಲಿಸುತ್ತಾನೆ . ಸೂರ್ಯ ಒಂದು ರಾಶಿಯಲ್ಲಿ ಇರುವ ಒಂದು ತಿಂಗಳಿನಲ್ಲಿ ಹುಟ್ಟಿದವರೆಲ್ಲ ಒಂದೇ ರಾಶಿಯವರು ಅಂತ ಅವರ ಲೆಕ್ಕಾಚಾರ. ಇದು ಸೌರಮಾನದ ಲೆಕ್ಕ. ನಿಮಗೆ ಪತ್ರಿಕೆಯ ಭವಿಷ್ಯ ಓದಲೇಬೇಕಿದ್ದರೆ, ನೀವು ಇದನ್ನ ಗಮನದಲ್ಲಿಡಿ. ನಿಮ್ಮ ಚಂದ್ರನ ಲೆಕ್ಕದ ರಾಶಿಯನ್ನ, ಸೂರ್ಯನ ಲೆಕ್ಕದ ರಾಶಿಗೆ ಹೊಂದಿಸೋಕೆ ಹೋಗಬೇಡಿ.
ನಾವು ಇದನ್ನ ಸರಿಯಾಗೇ ಮಾಡ್ತಿದೀವಿ, ಪತ್ರಿಕೆಯ ದಿನಭವಿಷ್ಯವನ್ನ ಸರಿಯಾಗೇ ಅರ್ಥೈಸಿಕೊಳ್ತಿದ್ದೀವಿ ಅಂದಿರಾ? ಆದರೂ, (ನೀವು ಈ ಜ್ಯೋತಿಷ್ಯವನ್ನು ನಂಬುವುದಾದರೆ), ನಿಮ್ಮದೆಂದು ಬರೆದಿರುವ ಭವಿಷ್ಯ ನಿಮ್ಮದೇ ಅಲ್ಲದಿರಬಹುದು ಅಂದರೆ ನೀವು ಸ್ವಲ್ಪವಾದರೂ ಕಕ್ಕಾಬಿಕ್ಕಿ ಆಗೋದು ಖಾತ್ರಿ.

ಈಗ ಒಂದು ರಾಶಿ ಅಂದರೇನು ಅಂತ ಒಮ್ಮೆ ನೋಡಿಬಿಡೋಣ. ಆಕಾಶದಲ್ಲಿ ಕಾಣೋ ನಕ್ಷತ್ರಗಳನ್ನು ಗುಂಪು ಗುಂಪಾಗಿ ವಿಂಗಡಿಸಿ, ಅವುಗಳಿಗೊಂದು ಚಿತ್ತಾರವನ್ನು ಊಹಿಸಿ ಮಾಡಿದ್ದೇ ಈ ರಾಶಿಗಳನ್ನ. ಆ ಕಾಲದಲ್ಲಿ ಈಗಿನ ತರಹ ಎಲೆಕ್ಟ್ರಿಕ್ ದೀಪಗಳ ಹಾವಳಿ ಇಲ್ಲದ್ದರಿಂದ ಎಲ್ಲ ನಕ್ಷತ್ರಗಳೂ ಇನ್ನೂ ಚೆನ್ನಾಗಿ ಕಾಣ್ತಿದ್ದವು, ಮತ್ತೆ ಆ ಕಾಲದ ಜನರಿಗೂ ಕಲ್ಪನಾ ಶಕ್ತಿ ಜಾಸ್ತಿಯೇ ಇದ್ದಿರಬೇಕು - ಅದಕ್ಕೇ ಅವರು ಆಕಾಶದಲ್ಲೇ ಪ್ರಾಣಿ ಪಕ್ಷಿಗಳ, ವಸ್ತುಗಳ, ಚಿತ್ರಗಳನ್ನ ಊಹಿಸಿ ಇಂತಹ ರಾಶಿಗಳ ಹೆಸರನ್ನು ಕೊಟ್ಟಿದ್ದಾರೆ. ಉದಾಹರಣೆಗೆ ತುಲಾ ಅನ್ನೋ ರಾಶಿ ತಕ್ಕಡಿಯನ್ನೂ, ಮೇಷ ಅನ್ನೋ ರಾಶಿ ಒಂದು ಟಗರನ್ನೂ ಹೋಲುತ್ತೆ ಅನ್ನೋ ಕಾರಣಕ್ಕೆ ಆಯಾ ಹೆಸರುಗಳನ್ನು ಕೊಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಕೆಲವೇ ಕೆಲವು ರಾಶಿಗಳನ್ನ ಬಿಟ್ಟರೆ,  ಮುಕ್ಕಾಲು ಪಾಲು ರಾಶಿಗಳ ಹೆಸರಿಗೂ , ಅಲ್ಲಿ ಇರೋ ನಕ್ಷತ್ರಗಳನ್ನು ನೋಡಿದಾಗ ಅಲ್ಲಿ ಕಾಣೋ ಸ್ವರೂಪಕ್ಕೂ ಸಂಬಂಧವೇ ಕಾಣುವುದಿಲ್ಲ ಅನ್ನೋದೂ ನಿಜವೇ! ಈಗ ಇಲ್ಲಿ ಹಾಕಿರುವ ಚಿತ್ರ ಸಿಂಹ ರಾಶಿಯದ್ದು. ಇದ್ದಿದ್ದರಲ್ಲಿ, ಈ ಚಿತ್ರದಲ್ಲಿ ಒಂದು ಸಿಂಹವನ್ನು ನೀವು ಊಹಿಸಿಕೊಳ್ಳಲೇಬಹುದು. ಆದರೆ ಹೆಚ್ಚಿನ ರಾಶಿಗಳಲ್ಲಿ ಅದು ಕಷ್ಟವೇ ಸರಿ.ಕೆಲವು ರಾಶಿಗಳು ಸಾವಿರಾರು ವರ್ಷಗಳಿಂದಲೇ ಇದ್ದರೂ, ಸುಮಾರಾಗಿ ೨೦ನೇ ಶತಮಾನದವರೆಗೆ ಆಕಾಶದಲ್ಲಿ ಹೊಸ ಹೊಸ ರಾಶಿಗಳು ಸೇರಿಕೊಳ್ಳುತ್ತಲೇ ಬಂದಿದೆ. ಅಲ್ಲದೇ, ಬೇರೆ ಬೇರೆ ದೇಶಗಳಲ್ಲಿ , ಬೇರೆ ಬೇರೆ ರಾಶಿಗಳನ್ನ ಗುರ್ತಿಸುತ್ತಿದ್ದುದ್ದೂ ಉಂಟು. ಉದಾಹರಣೆಗೆ, ಭಾರತದಲ್ಲಿ ನಾವು ಯಾವುದನ್ನ ಸಪ್ತರ್ಷಿ ಮಂಡಲ ಅಂತ ಗುರುತಿಸುತ್ತೇವೋ, ಅದು, ಅರ್ಸಾ ಮೇಜರ್ ಅನ್ನೋ ರಾಶಿಯ ಭಾಗ ಇಂದಿನ ಲೆಕ್ಕದಲ್ಲಿ. ಹಾಗೇ, ಚೀನೀಯರೂ, ಆಕಾಶದಲ್ಲಿ ಅವರದ್ದೇ ಕೆಲವು ರಾಶಿಗಳನ್ನು ಗುರ್ತಿಸಿಕೊಂಡಿದ್ದರು.  ಭೂಮಿಯ ದಕ್ಷಿಣಾರ್ಧ ಗೋಳದಲ್ಲಿ ಮಾತ್ರ ಕಾಣೋ ಅಂತಹ ರಾಶಿಗಳಿಗೆ ಇಂಗ್ಲಿಷ್ ಹೆಸರು ಬಂದದ್ದು ಈಚೆಯ ಕೆಲವು ನೂರುವರ್ಷಗಳಲ್ಲೇ. ಹಾಗಾಗೇ ನಿಮಗೆ ಅಲ್ಲಿ, ಮೈಕ್ರೋಸ್ಕೋಪಿಯಮ್, ಟೆಲೆಸ್ಕೋಪಿಯಮ್ ಇಂತಹ ಮೊದಲಾದ  ಹೆಸರಿರೋ ರಾಶಿಗಳೂ ಸಿಕ್ಕುತ್ತವೆ!  ಆದರೆ ಸುಮಾರು ೨೦ ನೇ ಶತಮಾನದ ಮೊದಲ ಹೊತ್ತಿಗೆ, ಈ ಬೇರೆ ಬೇರೆ ಪದ್ಧತಿಗಳಲ್ಲೆಲ್ಲ ಒಂದು ಏಕರೂಪತೆಯನ್ನು ತರಲಿಕ್ಕಾಗಿ,  ಆಕಾಶದಲ್ಲಿ ಬರಿಗಣ್ಣಿಗೆ ಕಾಣೋ ಪ್ರತೀ ನಕ್ಷತ್ರವೂ ಒಂದಲ್ಲ ಒಂದು ರಾಶಿಗೆ ಸೇರೋ ಹಾಗೆ ಇಡೀ ಆಕಾಶವೇ ೮೮ ಪಾಲು ಆಗಿ, ಒಂದೊಂದನ್ನೂ ಒಂದು ರಾಶಿ ಅಂತ ಮಾಡಿಟ್ಟುಬಿಟ್ಟಿದ್ದಾರೆ ವಿಜ್ಞಾನಿಗಳು.  ಭೂಮಿಯ ಮೇಲೆ ಹೇಗೆ ರಾಜ್ಯ ದೇಶಗಳ ನಡುವೆ ಗಡಿಯನ್ನು ಗುರುತಿಸಿದಾರೋ, ಹಾಗೇ ಆಕಾಶದಲ್ಲೂ ರಾಶಿಗಳ ನಡುವೆ ಗಡಿ ಗೆರೆಗಳ ಏರ್ಪಾಡಾಗಿದೆ.


ಇದೆಲ್ಲಾ ಸರಿ, ಆದರೆ ಹೀಗೆ ೮೮ ರಾಶಿಗಳು ಇದ್ದರೆ, ನಾವು ಹುಟ್ಟಿದಾಗಿಂದ ಕೇಳಿ ಬಂದಿದ್ದ ಮೇಷ ವೃಷಭ ಮೊದಲಾದ ರಾಶಿಗಳ ಕಥೆ ಏನು ಅಂದಿರಾ? ಈ ಹನ್ನೆರಡು ರಾಶಿಗಳು ಸುಮಾರು ಎರಡು ಸಾವಿರ ವರ್ಷಕ್ಕೂ ಹಿಂದಿನಿಂದಲೇ ಪ್ರಸಿದ್ಧವಾಗಿವೆ. ಇವುಗಳ ಹೆಚ್ಚಾಯ ಏನಂದರೆ, ಸೂರ್ಯ ಆಕಾಶದಲ್ಲಿ ಹೋಗೋ ದಾರಿಯಲ್ಲಿ ಈ ರಾಶಿಗಳು ಇವೆ ಅನ್ನೋದು. ಆಕಾಶದಲ್ಲಿ ಸೂರ್ಯ ಇದ್ದಾಗ ನಕ್ಷತ್ರಗಳು ಕಾಣೋದಿಲ್ಲವಲ್ಲ ಅಂತ ಆಶ್ಚರ್ಯ ಪಡಬೇಡಿ. ಏನೆಂದರೆ, ಸೂರ್ಯ ಹುಟ್ಟೋಕೆ ಮೊದಲು, ಸೂರ್ಯ ದಿಗಂತದಿಂದ ಮೇಲೆ ಬರುವ ಕಡೆ ಯಾವ ನಕ್ಷತ್ರಗಳು ಇರುತ್ತವೆ, ಸೂರ್ಯ ಮುಳುಗಿದ ನಂತರ ಪಶ್ಚಿಮದಲ್ಲಿ ಯಾವ ನಕ್ಷತ್ರಗಳು ಕಾಣುತ್ತವೆ ಅನ್ನೋದನ್ನ ವರ್ಷವಿಡೀ ನೋಡಿದ ಮೇಲೆ, ಸೂರ್ಯ ಆಕಾಶದಲ್ಲಿ ಯಾವ ದಾರಿಯಲ್ಲಿ ಹೋಗ್ತಾನೆ ಅನ್ನೋದನ್ನ ನಕ್ಷೆ ಮಾಡಬಹುದು. ಈ ರಾಶಿಗಳನ್ನೇ ರಾಶಿ ಚಕ್ರ (ಜೋಡಿಯಾಕ್) ಅನ್ನೋದು. ಭೂಮಿ ಸೂರ್ಯನ ಸುತ್ತ ಸುತ್ತುವಾಗ ಅದು ಚಲಿಸುವ ಸಮತಲಕ್ಕೆ ೨೩.೫ ಓರೆಯಾಗಿ   ಇರೋದ್ರಿಂದ, ಆಕಾಶದಲ್ಲಿ ಸೂರ್ಯನ ಹಾದಿಯೂ ಆಕಾಶಮಧ್ಯರೇಖೆಗೆ  ಓರೆಯಾಗಿದ್ದು, ಎರಡು ಕಡೆ ಆಕಾಶಮಧ್ಯ  ರೇಖೆಯ ಮೇಲೆ ಹಾದು ಹೋಗುತ್ತೆ. ಈ ಸೂರ್ಯನ ಹಾದಿಯನ್ನ ಕ್ರಾಂತಿವೃತ್ತ ( ಎಕ್ಲಿಪ್ಟಿಕ್) ಅನ್ನುತ್ತೇವೆ.


 ಅದೂ ಅಲ್ಲದೇ, ನಮ್ಮ ಸೂರ್ಯನ ಸುತ್ತ  ಸುತ್ತುವ ಗ್ರಹಗಳೆಲ್ಲ, ಸುಮಾರಾಗಿ ಭೂಮಿ ಸೂರ್ಯನ ಸುತ್ತ ಸುತ್ತುವ ಸಮತಲದಲ್ಲೇ ತಾವೂ ಸೂರ್ಯನ್ನ ಸುತ್ತುವುದರಿಂದ, ಚಂದ್ರ  ಮತ್ತೆ ಇತರ ಗ್ರಹಗಳೆಲ್ಲ, ನಮಗೆ ಕ್ರಾಂತಿವೃತ್ತದ ಆಸುಪಾಸಿನಲ್ಲೇ, ಅಂದರೆ  ರಾಶಿ ಚಕ್ರದ ರಾಶಿಗಳಲ್ಲೇ ಸಂಚರಿಸಿದಂತೆ ತೋರುತ್ತದೆ. ಹಾಗಾಗಿಯೇ ಈ ರಾಶಿಚಕ್ರದ ರಾಶಿಗಳಿಗೆ ಬೇರೆ ಉಳಿದ ರಾಶಿಗಳಿಗಿಂತ ಹೆಚ್ಚಿನ ಬೆಲೆ ಬಂದಿದ್ದು. ಫಲಜ್ಯೋತಿಷ್ಯ (astrology) ದಂತಹ ವಿಚಾರಗಳು ಬೆಳೆದಿದ್ದೂ ಈ ಕಾರಣದಿಂದಲೇ. ಎಷ್ಟೋ ಕಡೆ, ರಾಶಿಯ ಚಿತ್ರವು ತೋರಿಸುವ ಪ್ರಾಣಿಗೂ ( ಟಗರು, ಗೂಳಿ, ಸಿಂಹ ಇತ್ಯಾದಿ) ಮತ್ತೆ, ಆ ರಾಶಿಯಲ್ಲಿ ಹುಟ್ಟಿದವರ ಸ್ವಭಾವಕ್ಕೂ  ತಾಳೆ ಹೊಂದಿಸುವಂತಹ ವಿಚಾರಗಳನ್ನು ನೀವೂ ಕೇಳಿರಬಹುದು.


೧೯೩೦ ರ ವೇಳೆಗೆ ರಾಶಿಗಳ ಗಡಿಗಳು ನಿರ್ಧಾರವಾದುವು ಎಂದೆನಲ್ಲ, ಆಗ ಎಲ್ಲಾ ರಾಶಿಗಳಂತೆ, ರಾಶಿ ಚಕ್ರದಲ್ಲಿರುವ ರಾಶಿಗಳ ಗಡಿಗಳೂ ನಿರ್ಧಾರವಾದುವು. ಹೀಗೆ ಮಾಡಿದಾಗ, ಅದೇನಾಯ್ತು ಗೊತ್ತಾ? ಸೂರ್ಯ ಹಾದು ಹೋಗುವ ದಾರಿ (ಕ್ರಾಂತಿವೃತ್ತ) ಹನ್ನೆರಡು ರಾಶಿಗಳ ಬದಲು ಹದಿಮೂರು ರಾಶಿಗಳಲ್ಲಿ ಹಾದು ಹೋಗೋಹಾಗಾಯ್ತು! ಅಂದರೆ, ವೃಶ್ಚಿಕ ಮತ್ತೆ ಧನು ರಾಶಿಗಳ ನಡುವೆ, ಓಫಿಯೂಕಸ್ ಅನ್ನುವ ಒಂದು ರಾಶಿಯಲ್ಲಿ ಕೂಡ ಹಾದು ಹೋಗ್ತಾನೆ ಸೂರ್ಯ (ಚಿತ್ರ ನೋಡಿ). ಹಾಗಾಗಿ, ಸೂರ್ಯ ನವೆಂಬರ್ ೨೩ ರಿಂದ ೨೯ರವರೆಗೆ ವೃಶ್ಚಿಕದಲ್ಲಿಯೂ, ನವೆಂಬರ್ ೨೯ರಿಂದ ಡಿಸೆಂಬರ್ ೧೭ರ ವರೆಗೆ ಓಫಿಯೂಕಸ್ ನಲ್ಲೂ, ಡಿಸೆಂಬರ್ ೧೭ರ ನಂತರ ಧನುವಿನಲ್ಲೂ ಹೋಗೋದ್ರಿಂದ, ನಿಜವಾಗಿ ಒಂದು ತಿಂಗಳ ಅವಧಿಯಲ್ಲಿ ಸೂರ್ಯ ನಿಜವಾಗಿ ಮೂರು ರಾಶಿಗಳಲ್ಲಿ ಹೋಗ್ತಿರ್ತಾನೆ.


ಅಯ್ಯೋ, ನಾವು ನಮ್ಮ ಭವಿಷ್ಯದಲ್ಲಿ ವೃಶ್ಚಿಕ ಅಂದರೆ ಅಕ್ಟೋಬರ್ ೨೧ ರಿಂದ ನವೆಂಬರ್ ೨೧ ಅಂತ ಹೇಳಿದೆ, ಇದೇನು ಇಲ್ಲಿ ಬರೆದಿರೋದಕ್ಕು ಅದಕ್ಕೂ ಸಂಬಂಧವೇ ಇಲ್ಲ ಆಂದ್ರಾ? ಅದೂ ಇನ್ನೊಂದು ತಮಾಷಿಯೇ. ಭೂಮಿಯ ಕಕ್ಷ ನಿಧಾನವಾಗಿ ಬದಲಾಗೋದ್ರಿಂದ, ಕ್ರಾಂತಿ ವೃತ್ತವೂ, ಆಕಾಶ ಮಧ್ಯರೇಖೆಯೂ ಒಂದನ್ನೊಂದನ್ನ ಮುಟ್ಟೋ ಬಿಂದು ಆಕಾಶದಲ್ಲಿ ಹಿಂದೆ ಸರೀತಿರತ್ತೆ. ಇದಕ್ಕೆ ಅಯನಾಂಶ ( ಪ್ರಿಸಿಶನ್) ಅಂತಾರೆ.  ಒಂದು ಕಾಲದಲ್ಲಿ ಮೇಷ ರಾಶಿಯ ಮೊದಲ ಬಿಂದುವಿನಲ್ಲಿ ಅವು ಸೇರುತ್ತಿದ್ದವು. ಈಗ ಈ ಅಯನಾಂಶದಿಂದ ಅದು ಕುಂಭರಾಶಿಯಲ್ಲಿ ಸೇರ್ತಿವೆ. ಆದರೆ ಪಾಶ್ಚಾತ್ಯರು, ಕಾಲಗಳು ಸರಿದು ಹೋಗುವುದನ್ನ ತಪ್ಪಿಸಲು, ಈಗಲೂ ಆ ಬಿಂದುವನ್ನೇ ಮೇಷಾದಿ ಬಿಂದು ( First point of Aries) ಅನ್ನುತ್ತಾರೆ. ಅಂದರೆ, ಹಿಂದೆ , ಮೇಷಾದಿ ಬಿಂದುವಿಗೆ ಸೂರ್ಯ ಬಂದಾಗ ವಸಂತ ಶುರು ಆಗ್ತಿದ್ದರೆ, ಈಗಲೂ ಅದೇ ಹೊಸ ಮೇಷಾದಿ ಬಿಂದುವಿಗೆ ಸೂರ್ಯ ಬಂದಾಗಲೇ, ವಸಂತ ಮೊದಲಾಗುತ್ತೆ. ಆದರೆ, ಆಕಾಶದಲ್ಲಿ ನೋಡಿದರೆ, ಸೂರ್ಯ, ಆಗಿನ್ನೂ ಟಗರಿನ ಚಿತ್ರವನ್ನು ಹೋಲುವ ಮೇಷ ರಾಶಿಯನ್ನ ಇನ್ನೂ ತಲುಪಿರೋದೇ ಇಲ್ಲ. ಹಾಗಾಗಿ "ನಾನು ಲಿಯೋ, ನಾನು ಕೇಪ್ರಿಕಾರ್ನ್, ಅದಕ್ಕೇ ನನ್ನ ಗುಣಗಳು ಹೀಗೆ" ಅಂತ ನೀವು ಹೇಳ್ಕೊಳ್ತಿದ್ದರೆ, ಜೋಪಾನ - ಯಾಕಂದ್ರೆ ನೀವು ಹುಟ್ಟಿದ ಸಮಯದಲ್ಲಿ ಸೂರ್ಯ ಲಿಯೋಗೇ ಆಗಲೀ ಕೇಪ್ರಿಕಾರ್ನಸ್ ಗೇ ಆಗಲಿ , ಹೋಗೇ ಇದ್ದಿಲ್ಲದಿರಬಹುದು.


ಇನ್ನು ಈಗ ನೀವೇ ಸ್ವಲ್ಪ ಯೋಚಿಸಿ ಹೇಳಿ. ಇಂತಹದ್ದೆಲ್ಲಾ ಆಳವಾದ ವಿಷಯಗಳು ಇರುವಾಗ, ನೀವು ನಿಮ್ಮದು ಅಂತ ಪತ್ರಿಕೆಯಲ್ಲಿ ಓದಿಕೊಳ್ತಿರೋ ಭವಿಷ್ಯ ನಿಮ್ಮದಾಗಿರಲಿಕ್ಕೆ ಸಾಧ್ಯವೇ ಅಂತ! ನಂಬೋದು ಬಿಡೋದು, ನಿಮಗೇ ಸೇರಿದ್ದು. ಅದರಲ್ಲಿ ನಾನು ತಲೆ ಹಾಕೋದಿಲ್ಲ. ಏನಂತೀರ?

-ಹಂಸಾನಂದಿ

ಕೊ: ಇದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ೨೦೧೩ ರ ಸ್ವರ್ಣಸೇತು ಸಂಚಿಕೆಯಲ್ಲಿ ಪ್ರಕಟವಾಗಿತ್ತು

ಕೊ.ಕೊ: ಚಿತ್ರಗಳು ವಿಕಿಪೀಡಿಯಾ ದಿಂದ
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಋತು ಸಂಹಾರ