Posts

Showing posts from May, 2014

ಶಿವ-ಶಿವೆಯರ ಸರಸ

Image
ಇರುಳಿನಪ್ಪುಗೆಯಲೊಡೆದ ಕಡಗವನು 
ಉರುಳಿ ಹೋಗಿದ್ದ ಎಳೆಯ ಚಂದಿರನ
ಜೊತೆಗೆ ಸೇರಿಸುತ ಬಳೆಯ ಮಾಡುತಲಿ 
ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ”
ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ
ಬೆಳ್ಳಬೆಳಕನ್ನೆ ತನ್ನ ಮೈದುಂಬಿ
ಹೊಳೆವ ಚಂದಿರನು ಶಿವಶಿವೆಯ ಜೊತೆಗೆ
ಸೇರಿ ಕಾಪಿಡಲಿ! ನಮ್ಮ ಕಾಪಿಡಲಿ!

ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನಕೋಶದಿಂದ):

ಚ್ಯುತಂ ಇಂದೋರ್ಲೇಖಾಂ ರತಿಕಲಹ ಭಗ್ನಮ್ ಚ ವಲಯಂ
ದ್ವಯಂ ಚಕ್ರೀಕೃತ್ಯ ಪ್ರಹಸಿತ ಮುಖೀ ಶೈಲತನಯಾ 
ಅವೋಚದ್ಯಂ ಪಶ್ಯೋತ್ಯವತು ಸ ಶಿವಃ ಸಾ ಚ ಗಿರಿಜಾ
ಸ ಚ ಕ್ರೀಡಾಚಂದ್ರೋ ದಶನಕಿರಣಾಪೂರಿತ ತನುಃ

च्युतं इन्दोर्लेखं रतिकलहभग्नम् च वलयं
द्वयं चक्रीकृत्य प्रहसितमुखी शैलतनया
अवोचद् यं पश्येत्यवतु स शिवः सा च गिरिजा
स च क्रीडाचन्द्रो दशनकिरणापूरिततनुः ||

-ಹಂಸಾನಂದಿ


ಚಿತ್ರ ಕೃಪೆ: ಭೋಪಾಲ್ ವಸ್ತುಸಂಗ್ರಹಾಲಯದಲ್ಲಿರುವ ಉಮಾ-ಮಹೇಶ್ವರ. ಚಿತ್ರ - ಮಧು ನಾಯರ್ 
(Picture courtesy: Madhu Nair, www.10yearitch.com )

ತೀರದ ಬಯಕೆ

Image
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?
ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್ಜುನವರ್ಮ ದೇವನ ಟೀಕೆಯಲ್ಲಿ - ೧೫) 

ಕಥಮಪಿ ಸಖಿ ಕ್ರೀಡಾಕೋಪಾದ್ ವ್ರಜೇತಿ ಮಯೋದಿತೇ
ಕಠಿನಹೃದಯಸ್ತ್ಯಕ್ತ್ವಾ ಶಯ್ಯಾಂ ಬಲಾತ್ಗತ ಏವ ಸಃ
ಇತಿ ಸರಭಸಂ ಧ್ವಸ್ತಪ್ರೇಮ್ಣಿ ವ್ಯಪೇತಘೃಣೇ ಜನೇ
ಪುನರಪಿ ಹತವ್ರೀಡಂ ಚೇತಃ ಪ್ರಯಾತಿ ಕರೋಮಿ ಕಿಮ್ || ೧೫||

कथमपि सखि क्रीडाकोपाद् व्रजेति मयोदिते
कठिनहृदयस्त्यक्त्वा शय्यां बलाद् गत एव सः ।
इति सरभसं ध्वस्तप्रेम्णि व्यपेतघृणे जने
पुनरपि हतव्रीडं चेतः प्रयाति करोमि किम् ॥१२॥(१५)

-ಹಂಸಾನಂದಿ

ಕೊ: ಇದು  ಅಮರುಶತಕದಿಂದ ನಾನು ಮಾಡುತ್ತಿರುವ ೨೫ನೇ ಅನುವಾದ

ಚಿತ್ರ: ಪಟಮಂಜರಿ ರಾಗದ  ರಾಗಮಾಲಾಚಿತ್ರ,ವಿಕಿಪೀಡಿಯಾದಿಂದ 

ಪಶ್ಚಾತ್ತಾಪ

Image
ನಿಟ್ಟುಸಿರು
ಮೊಗವ ಸುಟ್ಟಿದೆ
ಬುಡಕಿತ್ತ ಎನ್ನೆದೆ
ಅಲುಗಾಡಿದೆ

ನಿದ್ದೆ ದೂರಾಗಿದೆ
ನಲ್ಲನ ಮೊಗ ಕಾಣದೇ
ಹಗಲಿರುಳು ಅಳು ನಿಲ್ಲದೆ
ಒಡಲು ಒಣಗಿದೆ

ಕಾಲಿಗೆ ಬಿದ್ದ ನಲ್ಲ
-ನನು ನಾ ಹಾಗೆ
ಕಡೆಗಣಿಸಿದೆನಲ್ಲ?

ಗೆಳತಿಯರೇ
ಆವ ಮಂಕು ಬಡಿದು
ಇನಿಯನಲ್ಲಿಂತು
ಸೆಡವು ತೋರಿದೆನೇ?

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ, ೯೮/೯೨) :

ನಿಃಶ್ವಾಸಾ ವದನಂ ದಹಂತಿ ಹೃದಯಂ ನಿರ್ಮೂಲಮುನ್ಮಥ್ಯತೇ
ನಿದ್ರಾ ನೇತಿ ನ ದೃಶ್ಯತೇ ಪ್ರಿಯಮುಖಂ ರಾತ್ರಿಂದಿವಂ ರುದ್ಯತೇ |
ಅಂಗಂ  ಶೋಷಮುಪೈತಿ ಪಾದಪತಿತಃ ಪ್ರೇಯಾಂಸ್ತಥೋಪೇಕ್ಷಿತಃ

ಸಖ್ಯಃ ಕಂ ಗುಣಮಾಕಲಯ್ಯ ದಯಿತೇ ಮಾನಂ ವಯಂ ಕಾರಿತಾಃ ||೯೮||(೯೨)

निःश्वासा वदनं दहन्ति हृदयं निर्मूलमुन्मथ्यते
निद्रा नेति न दृश्यते प्रियमुखं रात्रिन्दिवं रुद्यते ।
अङ्गं शोषमुपैति पादपतितः प्रेयांस्तथोपेक्षितः
सख्यः कं गुणमाकलय्य दयिते मानं वयं कारिताः ॥९८॥(९२)


-ಹಂಸಾನಂದಿ

ಚಿತ್ರ: ಬೆಂಗಳೂರಿನ ಕಲಾವಿದ ಹರಿ ಬಂಗಾರ್ ಅವರ ವರ್ಣಚಿತ್ರ. ಅವರ ಈ ಬ್ಲಾಗ್ ಕೊಂಡಿಯಿಂದ ತೆಗೆದುಕೊಂಡದ್ದು.

ಮಹದಾನಂದ

Image
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ. 
ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ:
(ಚೌಪದಿ)
ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ! ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು ಎಂದು ಪಡೆವೆನೊ ಬೊಮ್ಮನಿಗು ಸಿಗದ ಸೊಗವ!
(ಭಾಮಿನಿ ಷಟ್ಪದಿ)
ಎಂದು ಕಾಂಬೆನೊ ನಿನ್ನಡಿಗಳ -ನ್ನೆಂದು ಕಣ್ಣಲಿ ತುಂಬಿಕೊಳ್ಳುವೆ -ನೆಂದು ಕರದಲ್ಲಿಟ್ಟು ತಲೆಗೇರಿಸುತ ಮುಡಿಯುವೆನೋ? ಎಂದು ಎದೆಗಪ್ಪುವೆನೊ ಕಂಪಿನ ಚೆಂದದಡಿದಾವರೆಯ ಮಹದಾ  ನಂದ ಹೊಂದುವೆ ಬೊಮ್ಮದೇವರು ಕೂಡ ಪಡೆದಿರದ?

ಸಂಸ್ಕೃತ ಮೂಲ (ಆದಿ ಶಂಕರರ ಶಿವಾನಂದಲಹರೀ, ಪದ್ಯ ೨೬) :
ಕದಾ ವಾ ತ್ವಾಂ ದೃಷ್ಟ್ವಾ ಗಿರಿಶ ತವ ಭವ್ಯಾಂಘ್ರಿಯುಗಲಂ ಗೃಹೀತ್ವಾ ಹಸ್ತಾಭ್ಯಾಂ ಶಿರಸಿ ನಯನೇ ವಕ್ಷಸಿ ವಹನ್ ಸಮಾಶ್ಲಿಷ್ಯಾಘ್ರಾಯ ಸ್ಫುಟಜಲಜಗಂಧಾನ್ ಪರಿಮಲಾ- ನಲಭ್ಯಾಂ ಬ್ರಹ್ಮಾಭ್ಯೈರ್ಮುದಮನುಭವಿಷ್ಯಾಮಿ ಹೃದಯೇ
कदा वा त्वां दृष्ट्वा गिरिश तव भव्यांघ्रियुगलं गृहीत्वा हस्ताभ्यां शिरसि नयने वक्षसि वहन् । समाश्लिष्याघ्राय स्फुटजलजगन्धान् परिमला- नलभ्यां ब्रह्माध्यैर्मुदमनुभविष्यामि हृदये ॥ २६ ॥
-ಹಂಸಾನಂದಿ
ಕೊ: ಮೂಲದಲ್ಲಿ ಬ್ರಹ…

ಶಿವಶಕ್ತಿ

Image
ಶಿವ ಮತ್ತು ಶಕ್ತಿಯರನ್ನು ಒಂದಾಗಿ ನೆನೆಯುವುದು ನಮ್ಮ ಪರಂಪರೆಯಲ್ಲಿ ಬಂದಿರುವ ವಿಷಯವೇ. ಕಾಳಿದಾಸ ತನ್ನ ರಘುವಂಶ ಕಾವ್ಯದ ಮೊದಲ ಪದ್ಯದಲ್ಲೇ ಹೇಳಿರುವಂತೆ, ಮಾತು ಮತ್ತು ಅದರೊಳಗೆ ಹುದುಗಿದ ಅರ್ಥದಂತೆಯೇ ಶಿವ ಮತ್ತೆ ಶಕ್ತಿಯರೂ ಒಬ್ಬರನ್ನೊಬ್ಬರು ಬಿಟ್ಟಿರದಾರದವರೇ ಆಗಿದ್ದಾರೆ.

(ಚಿತ್ರ: ಚಿಕಾಗೋ ಕಲಾ ಸಂಗ್ರಹಾಲಯದಲ್ಲಿರುವ ಶಿವ-ಪಾರ್ವತಿ ; ೧೦ ನೇಶತಮಾನ)
ಕಾಳಿದಾಸನ ರಘುವಂಶದ ಪದ್ಯ ಹೀಗಿದೆ:
ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ  ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ
ಇದನ್ನೇ ಕನ್ನಡದಲ್ಲಿ ನಾನು ಹಿಂದೆ ಹೀಗೆ ಅನುವಾದಿಸಿದ್ದೆ.

ನಾ ತಲೆವಾಗುವೆ ಶಿವಶಿವೆಗೆ
ಈ ಜಗದೆಲ್ಲರ ಹೆತ್ತವರ
ಬಿಡದೊಡಗೂಡಿಯೆ ಇಹರಿವರು
ಮಾತಿನ ಜೊತೆಯಲಿ ಹುರುಳಂತೆ

ಬಹುಶಃ ಶಿವ-ಶಕ್ತಿಯರ ಬಗ್ಗೆಯ ಈ ಪದ್ಯ ನೆನಪಾಗಿದ್ದಕ್ಕೂ, ಇವತ್ತು ಮೇ ೧ ನೇ ತಾರೀಕು ಆಗಿರುವುದಕ್ಕೂ ಸಂಬಂಧವಿರಬಹುದೇನೋ!  ಏಕೆಂದರೆ ಶಿವಶಕ್ತಿ ಅನ್ನುವ ಒಂದು ಹೊಸ ರಾಗವನ್ನು ಕಲ್ಪಿಸಿ, ಅದರಲ್ಲೊಂದು ಒಳ್ಳೇ ರಚನೆ ಮಾಡಿದ ಜಿ.ಎನ್.ಬಾಲಸುಬ್ರಮಣ್ಯಂ ( ಜಿಎನ್ ಬಿ) ಅವರನ್ನು ನೆನೆಯುವ ದಿನವಿದು. ಇದೇ ದಿವಸ ೧೯೬೫ರಲ್ಲಿ ಅವರು ದಿವಂಗತರಾದರು.

ಆ ಶಿವಶಕ್ತಿ ರಾಗದಲ್ಲೇ, ನಾನು ಮಾಡಿದ ಒಂದು ರಚನೆಯನ್ನು ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ. ಕೇಳಿ, ಏನನ್ನಿಸಿತು ಅಂತ ಬರೀತೀರಲ್ಲ?

http://www.mixcloud.com/ramaprasad/a-swara-composition/

-ಹಂಸಾನಂದಿ