Posts

Showing posts from February, 2015

ಶಿವಪ್ಪ ಕಾಯೋ ತಂದೆ

Image
ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ
ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ ತಾಳ್ಮೆಯಿಂ
ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ
ಮಗುವೆಂದೆನ್ನುತಲೆನ್ನ ಕಾಯೊ ಶಿವನೇ ತಪ್ಪೆಲ್ಲಮಂ ಮನ್ನಿಸಿ!

-ಹಂಸಾನಂದಿ

ಕೊ: ಶಿವರಾತ್ರಿಯ ಸಮಯಕ್ಕೆ, ಹಿಂದೆ ಬರೆದಿದ್ದ ಒಂದು ಪದ್ಯವನ್ನು ಸ್ವಲ್ಪ ಬದಲಿಸಿ ಬರೆದಿದ್ದೇನೆ

ಚಿತ್ರ ಕೃಪೆ:  ಕೆ. ವೆಂಕಟಾಚಾರಿ ಅವರ ವರ್ಣ ಚಿತ್ರ http://hinduism.about.com/od/lordshiva/ss/http://hinduism.about.com/od/lordshiva/ss/The-12-Manifestations-of-Shiva.htm

ಕೃಷ್ಣನ ಕೊಳಲಿನ ಕರೆ ...

Image
ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು ಬೆರಳನಾಡಿಸಿ ರಂಧ್ರಗಳ ಮಾಧವ ತೆರೆಯುತ್ತ ಮುಚ್ಚುತ್ತ  ಮರಮರಳಿ ಸವಿಯಾಗಿ ಸ್ವರಗಳಲಿ ಹಾಡಿಹನು ಬನದಂಚಲಿ
ಸಂಸ್ಕೃತ ಮೂಲ  (ಲೀಲಾಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪):
ಅಧರೇ ವಿನಿವೇಶ್ಯ ವಂಶನಾಲಂ ವಿವರಾಣ್ಯಸ್ಯ ಸಲೀಲಮಂಗುಲೀಭಿಃ
ಮುಹುರಂತರಯನ್ಮುಹುರ್ವಿವೃಣ್ವನ್ ಮಧುರಂ ಗಾಯತಿ ಮಾಧವೋ ವನಾಂತೇ
-ಹಂಸಾನಂದಿ
ಕೊ:  ಪದ್ಯವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ.
ಕೊ.ಕೊ: ಸಂಜೆ ಹೊತ್ತಿನಲ್ಲಿ ಬನದ ಅಂಚಲ್ಲಿ, ಕೃಷ್ಣನ ವೇಣು ನಾದಕ್ಕೆ ಮರುಳಾದ ಗೊಲ್ಲತಿಯರ ಬಗ್ಗೆ ಇದೇ ಲೀಲಾಶುಕ ಬರೆದಿರುವ ಸಾಯಂಕಾಲೇ ವನಾಂತೇ ಎಂಬ ಪದ್ಯವೂ ಬಹಳ ಪ್ರಖ್ಯಾತ .
ಕೊ.ಕೊ.ಕೊ: ಕೃಷ್ಣನ ಕೊಳಲಿನ ಕರೆ ಎನ್ನುವುದು , ಪುತಿನ ಅವರ ಗೋಕುಲ ನಿರ್ಗಮನದಲ್ಲಿ ಬರುವ ಒಂದು ಹಾಡು. ಬಹಳ ಸೊಗಸಾದ ಈ ಕವಿತೆ  ಸುಬ್ಬಾಶಾಸ್ತ್ರಿ ಎಂಬ ಹಳೆಯ ಕನ್ನಡ ಚಿತ್ರದಲ್ಲಿರುವುದು ನಿಮಗೆ ನೆನಪಿರಬಹುದು.
ಚಿತ್ರಕೃಪೆ:  ಇಲ್ಲಿ ಬಳಸಿದ ಚಿತ್ರ ಕಲಾವಿದ ಕೇಶವ್ ವೆಂಕಟರಾಘವನ್ ಅವರದ್ದು . ಅವರ ಬ್ಲಾಗ್ ಕೊಂಡಿ ಇಲ್ಲಿದೆ.  ಇಂದು ಇವರು ಹಾಕಿದ್ದ ಚಿತ್ರವನ್ನು ನೋಡಿ ಅದರ ಅಂದಕ್ಕೆ ತಕ್ಕದೊಂದು ಪದ್ಯವನ್ನು ಹುಡುಕಿ ಮಾಡಿದ ಅನುವಾದವಿದು

ಮಳೆಗಾಲಕೆ ಮೊದಲೆ ಕುಣಿವ ನವಿಲು

Image
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ
-ಹಂಸಾನಂದಿ

ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು. ಸಮಸ್ಯಾ ಪೂರಣದ ಬಗ್ಗೆ ಇನ್ನಷ್ಟನ್ನು ನೀವು ಇಲ್ಲಿ ಚಿಟಕಿಸಿ ಓದಬಹುದು.

ಕೊ.ಕೊ: ಮಳೆಗಾಲಕ್ಕೆ ನವಿಲು ಕುಣಿಯುವುದು ಸ್ವಾಭಾವಿಕ. ಆದರೆ ಮಳೆಗಾಲ ಬರುವ ಮುನ್ನ ನವಿಲು ಕುಣಿಯುವುದುಂಟೆ ? ತಾಯಿ ಪ್ರೀತಿಯಿಂದ ಕೊಟ್ಟ ತಿಂಡಿ ಮಗು ತಿನ್ನದೆ ಹೋದಾಗ, ನಾಯಿ ಬಾಲ ಡೊಂಕಾಗಿರದೇ ನೇರವಾದಾಗ, ಸಿಂಹ ಹುಲ್ಲು ತಿಂದಾಗ, ಮರಳಲ್ಲಿ ಮೀನು ಗೂಡು ಕಟ್ಟಿದಾಗ, ಭಾರೀ ದೇಹದ ನೀರಾನೆ ಕುಣಿಯುವಾಗ, ಇಂತಹ ಆಗಲಾರದ  ಘಟನೆಗಳು ಸಂಭವಿಸಿದಾಗ, ನವಿಲೂ ಮಳೆಗಾಲಕ್ಕೆ ಮೊದಲೇ ಕುಣಿದೀತು ಎಂಬುದು ಪದ್ಯದ ಸಾರಾಂಶ.

ಕೊ.ಕೊ.ಕೊ: ಪದ್ಯವು ಮತ್ತೇಭವಿಕ್ರೀಡಿತ ಎಂಬ ವರ್ಣ ಛಂದಸ್ಸಿನಲ್ಲಿದೆ. ಚಿತ್ರ ಕೃಪೆ ವಿಕಿಪೀಡಿಯಾ.

ಹರಿದಾಸ ಸಾಹಿತ್ಯಕ್ಕೊಂದು ಆಂಡ್ರಾಯ್ಡ್ ಸಲಕರಣೆ

Image
ಸುಮಾರು ೧೩ನೇ ಶತಮಾನದಿಂದ ಮೊದಲಾದ ಹರಿದಾಸರ ಪರಂಪರೆ ಇಪ್ಪತ್ತನೇ ಶತಮಾನದ ಮೊದಲ ಭಾಗದವರೆಗೆ ಕನ್ನಡನಾಡಿನಲ್ಲಿ ಹರಿದು ಬಂತು. ಈ ಪರಂಪರೆಯಲ್ಲಿ ಬಂದ ನೂರಾರು ಹರಿದಾಸರು, ಹತ್ತಾರು ಸಾವಿರ ರಚನೆಗಳನ್ನು ಮಾಡಿ ಹೋಗಿದ್ದಾರೆ. ಶ್ರೀಪಾದರಾಯರ, ಪುರಂದರದಾಸರ, ಕನಕದಾಸರ ಹೆಸರು ಕೇಳದ ಕನ್ನಡಿಗರು ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ.ಶತಮಾನಗಳ ಕಾಲ ಮೌಖಿಕವಾಗಿಯೇ ಈ ರಚನೆಗಳು ಒಬ್ಬರಿಂದ ಒಬ್ಬರಿಗೆ ದಾಟಿದವು. ಈ ದಾರಿಯಲ್ಲಿ ಉಳಿದವೆಷ್ಟೋ ಕಳೆದವೆಷ್ಟೋ?

ಕರ್ನಾಟಕ ಸಂಗೀತ ಪಿತಾಮಹರೆಂದು ನಾವು ಹೇಳುವ ಪುರಂದರ ದಾಸರ ರಚನೆಗಳಲ್ಲಿ ಸಾವಿರಕ್ಕೂ ಮೇಲು ಈಗ ಉಳಿದಿವೆಯಾದರೂ, ಹೆಚ್ಚಿನವುಗಳ ಸಂಗೀತ ಹೇಗಿತ್ತೆಂದು ನಮಗೆ ತಿಳಿಯದೇ ಹೋಗಿದೆ. ಆದರೆ ಇಪ್ಪತ್ತನೇ ಶತಮಾನದಲ್ಲಾದ ಪ್ರಯತ್ನಗಳಿಂದ ಹರಿದಾಸರ ಸಾವಿರಾರು ರಚನೆಗಳು ಮುದ್ರಿತವಾಗಿ, ಅವುಗಳು ಇನ್ನಷ್ಟು ಕಳೆದು ಹೋಗುವುದು ತಪ್ಪಿತು.

 ಆದರೆ, ಇಪ್ಪತ್ತೊಂದನೇ ಶತಮಾನಕ್ಕೆ ಇಪ್ಪತ್ತನೇ ಶತಮಾನ ಹುಟ್ಟುಹಾಕಿದ ವಿಧಾನಗಳೂ, ಹುಡುಕಿದ ಪರಿಹಾರಗಳೂ ನಡೆಯುತ್ತವೆಯೇ? ಈಗ ಏನಿದ್ದರೂ ಮಾಹಿತಿ ಯುಗ. ಮಾಹಿತಿ ಎಲ್ಲಿ ಬೇಕೆಂದರಲ್ಲಿ ಸಿಗುವಂತೆ ಮಾಡುವ ಸ್ಮಾರ್ಟ್ ಫೋನ್ಯುಗ. ಈಗ, ಕಪಾಟಿನಲ್ಲಿಟ್ಟು ಜೋಡಿಸಿರುವ ಪುಸ್ತಗಳಿಂದ ಬೇಕಾದ ದಾಸರ ರಚನೆಗಳನ್ನು ಹುಡುಕುವುದು ( ಅದು ಹಾಡುವುದಕ್ಕೇ ಇರಬಹುದು, ಇಲ್ಲ ಸಾಹಿತ್ಯ ಸಂಶೋಧನೆಗೇ ಇರಬಹುದು, ಅಥವಾ ಇನ್ನಾವುದೇ ಕುತೂಹಲವನ್ನು ತಣಿಸುವುದಕ್ಕೂ ಇರಬಹುದು) ಸಾಧ್ಯವಾದರೂ, ಸುಲಭ …