Posts

Showing posts from April, 2015

ಒಂದು ಹನಿ

Image
"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ
ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!"
ಇನಿಯ ನುಡಿದಿರಲಿಂತು ಮರುಮಾತನಾಡದೆಯೆ
ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ!

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩೫  ):

ಸುತನು ಜಹಿಹಿ ಕೋಪಂ ಪಶ್ಯ ಪಾದನತಂ ಮಾಮ್
ನ ಖಲು ತವ ಕದಾಚಿತ್ಕೋಪ ಏವಮ್ ವಿಧೋಭೂತ್
ಇತಿ ನಿಗದತಿ ನಾಥೇ ತಿರ್ಯಗಾಮೀಲಿತಾಕ್ಷ್ಯಾ
ನಯನಜಲಮನಲ್ಪಮ್ ಮುಕ್ತಮುಕ್ತಮ್ ನ ಕಿಂಚಿತ್

-ಹಂಸಾನಂದಿ

ಕೊ: ಈ ಪದ್ಯದ ಒಂದೆರಡು ಸಾಲು ಅನುವಾದ ಮಾಡಿಟ್ಟು ೪ ವರ್ಷಗಳೇ ಕಳೆದಿವೆ ಅನ್ನುವುದು ನೋಡಿ, ಇವತ್ತು ಪೂರ್ತಿ ಮಾಡಿದೆ :)

ಕೊ.ಕೊ: ಅಮರು ಶತಕದಲ್ಲಿ, ಪ್ರಿಯೆಯ ಕೋಪವನ್ನು ತಗ್ಗಿಸಲು ಅವಳ ಕಾಲಿಗೆ ಬೀಳುವ ಹಲವು ದೃಷ್ಟಾಂತಗಳಿವೆ. ಅವುಗಳಲ್ಲಿ ಇದೊಂದು.

ಕೊ.ಕೊ.ಕೊ: ಹಿಂದೂಸ್ತಾನಿ ಸಂಗೀತದ ರಾಗ ರಾಮಕಲಿಯ ರಾಗಿಣಿಯನ್ನು ಚಿತ್ರಿಸುವ ಈ ರಾಗಮಾಲಾ ಚಿತ್ರ ಈ ಅನುವಾದಕ್ಕೆ ಸೂಕ್ತವಾಗಿ ಕಂಡಿದ್ದರಿಂದ ಅದನ್ನೇ ಬಳಸಿಕೊಂಡೆ. ಸುಮಾರು ೫೦೦ ವರ್ಷ ಹಿಂದೆ ಚಿತ್ರಿತವಾ ಇದು,  $4000 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ!

ಚಿತ್ರದ ಮೂಲ ಇಲ್ಲಿಂದ:  http://www.bonhams.com/auctions/21787/lot/104/ನಾಟ್ಯ ಗುರುವಿಗೆ

Image
"ಕುಡಿಹುಬ್ಬಿನಾಚೆಲುವೆ! ಬಳ್ಳಿದೋಳುಗಳನ್ನುನೀಡು! ನಿಲುವಿರಲಿಯಿಂತು ಬಗ್ಗುವಾಗಿಷ್ಟುಕೈಚಾಚದಿರು, ಕಾಲ್ಬೆರಳುಬಾಗಿರಲಿ, ನನ್ನನೋಡು!" ಮೋಡಮೊರೆದಿರುವಂಥಕಂಠಮೃದಂಗದಲಿಪರಶಿವನುನುಡಿಯುತಿರಲು ಅವನನರ್ತನದಲಯಮುರಿವಚಪ್ಪಾಳೆಸದ್ದೆಮ್ಮನ್ನುಕಾಯುತಿರಲಿ
ಸಂಸ್ಕೃತಮೂಲ:
ಏವಂಸ್ಥಾಪಯಸುಭ್ರುಬಾಹುಲತಿಕಾಂಏವಂಕುರುಸ್ಥಾನಕಂ ನಾತ್ಯುಚ್ಚೈರ್ನಮಕುಂಚಯಾಗ್ರಚರಣೌಮಾಮ್ಪಶ್ಯತಾವತ್ಕ್ಷಣಮ್। ಏವಂನರ್ತಯತಃಸ್ವವಕ್ತ್ರಮುರಜೇನಾಂಬೋಧರಧ್ವಾನಿನಾ
ಶಂಭೋರ್ವಃಪರಿಪಾಂತುನರ್ತಿತಲಯಚ್ಛೇದಾಹತಾಸ್ತಾಲಿಕಾ॥

ಕೊ: ಈ ಹಿಂದೆಯೇ ಈ ಪದ್ಯವನ್ನು ಅನುವಾದಿಸಿದ್ದೆ. ಆದರೆ ಇವತ್ತು " ನೃತ್ಯ ದಿನ" ಎಂದು ತಿಳಿಸುಬಂದದ್ದರಿಂದ ಈ ಬಾರಿ ಸ್ವಲ್ಪ ಛಂದಸ್ಸಿನ ಕಟ್ಟಿನಲ್ಲಿ ಅನುವಾದಿಸಿದ್ದೇನೆ.

ಕೊ.ಕೊ: ಮೂಲವು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರೆಯ ನಡಿಗೆಯಲ್ಲಿದೆ ( ಪೂರ್ತಿ ಚೌಪದಿ ಲಕ್ಷಣವನ್ನೂ, ಪ್ರಾಸವನ್ನೂ ಪಾಲಿಸಿಲ್ಲ)

ವಸುಂಧರೆಗೆ

Image
ಧರಣಿ ದೇವಿಯೆ ನಿನ್ನ ಮಕ್ಕಳ
ಮರೆತೆಯೇತಕೆ? ನಡುಕವೇತಕೆ?
ತೊರೆದೆಯೇನಿದು ನಿನ್ನ ಕರುಣೆಯ ಸಹಜ ಗುಣವನ್ನು?
ತೆರೆದೆಯೇಕೀ ಬಾಯಿ ತುಸುವೂ
ಮರುಕವಿಲ್ಲದೆ? ಹೊತ್ತಿಯುರಿದರೆ
ಧರೆಯು ನಿಲುವವರಾರು! ತಾಯೇ ಶಾಂತವಾಗಮ್ಮ!


ಮೈಯ ಕೊಡವಿದೆಯೇಕೆ? ಸಾಸಿರ ಜೀವತೆಗೆದಿಹೆಯೇಕೆ ನೀ?
ತಾಯ ಬುದ್ಧಿಯ ಮರೆತೆಯೇತಕೆ? ತರವೆ ತರುವುದು ಸಂಕಟ?
ಮಾಯಗಾತಿಯೆ! ಬಲಿಯಕೊಂಡೆಯ ತಾಳ್ದು ಮಾರಿಯ ರೂಪವ?
ಸಾಯ ಬಿಡುತಲಿ ನಿನ್ನ ಮಕ್ಕಳನೆಂತು ನೆಮ್ಮದಿ ಹೊಂದುವೆ?
-ಹಂಸಾನಂದಿ
ಕೊ: ನೇಪಾಳದಲ್ಲಿ ಈಚೆಗೆ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ, ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ
ಕೊ.ಕೊ: ಮೊದಲ ಪದ್ಯವು ಭಾಮಿನಿ ಷಟ್ಪದಿಯಲ್ಲೂ, ಎರಡನೆಯದು ಮಾತ್ರಾ ಮಲ್ಲಿಕಾಮಾಲೆಯಲ್ಲೂ ನಿಬದ್ಧವಾಗಿವೆ

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

Image
ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…

ಭಜಿಸಿ ಬದುಕೆಲೊ ಮನುಜ

Image
ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ?
ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ?
ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ 
ಬಿಡಿಸುವುದೆ? ಶಿವನಪದಕಮಲವನೆ ನಂಬು!

ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭): 

ಘಟೋ ವಾ ಮೃತ್ಪಿಂಡೋsಪಿ ಅಣುರಪಿ ಚ ಧೂಮೋ ಅಗ್ನಿರಚಲಃ
ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರ ಶಮನಂ
ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕ ವಚಸಾ
ಪದಾಂಭೋಜಂ ಶಂಭೋರ್ಭಜ ಪರಮಸೌಖ್ಯಂ ವ್ರಜ ಸುಧೀಃ

-ಹಂಸಾನಂದಿ

ಕೊ: ಇವತ್ತು ಶಂಕರ ಜಯಂತಿಯಾದ್ದರಿಂದ ಮಾಡಿದ ಆದಿಶಂಕರರ ಶಿವಾನಂದ ಲಹರಿಯ ಒಂದು ಪದ್ಯದ ಅನುವಾದವಿದು

ಕೊ.ಕೊ: ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಪ್ರಾಸವಿಟ್ಟಿಲ್ಲ. ಮೂಲವು ಶಿಖರಿಣೀ ಎಂಬ ವೃತ್ತದಲ್ಲಿದೆ. ಮೂಲದ ಕೊನೆಯ ಸಾಲನ್ನು, "ಶಿವನಪದಕಮಲವನೆ ನಂಬು" ಎಂದು ಚಿಕ್ಕದಾಗಿ ಅನುವಾದಿಸಬೇಕಾಯ್ತು. ಆದರೂ ಭಾವಕ್ಕೆ ಕುಂದಾಗಿಲ್ಲವೆಂದು ಎಣಿಸುತ್ತೇನೆ.

ಕೊ.ಕೊ.ಕೊ: ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಹರಿಯ ಅನ್ನುವುದೊಂದು ಪ್ರಸಿದ್ಧವಾದ ದಾಸರ ಪದ. ಅದರ ಭಾಗವನ್ನೇ ಇಲ್ಲಿ ತಲೆಬರಹವನ್ನಾಗಿಸಿದ್ದೇನೆ.

ಚಿತ್ರ ಕೃಪೆ: ಹಳೇಬೀಡಿನ ಹೊಯ್ಸಳೇಶ್ವರ ದೇಗುಲದಲ್ಲಿರುವ ನಟರಾಜ ( http://www.agefotostock.com/en/Stock-Images/Rights-Managed/TIP-008LIT01724

ನಿನ್ನ ಮೊಗ

Image
ಹುಣ್ಣಿಮೆಯ ಚಂದಿರನು  ಈ ನಿನ್ನ ಮೊಗವನ್ನು
ಹೋಲದೇ ಹೋಯ್ತೆಂದು ಆ ಬೊಮ್ಮನು
ಮತ್ತೊಮ್ಮೆ  ಮಾಡಿನೋಡುವೆನೆಂದು ಯೋಚಿಸುತ
ಪೂರ್ಣ ಚಂದ್ರಮನನ್ನು ಮುರಿದಿಟ್ಟನು

ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭) 

ತುಹ ಮುಹಸಾರಿಚ್ಛಂ ಣ ಲಹಇ ತ್ತಿ ಸಂಪುಣ್ಣಮಂಡಲೋ ವಿಹಿಣಾ |
ಅಣ್ಣಮಅಂ ವ ಘಡಇಉಂ ಪುಣೋ ವಿ ಖಂಡಿಜ್ಜಇ ಮಿಅಂಕೋ ||

ನಿರ್ಣಯಸಾಗರ ಆವೃತ್ತಿಯ ಸಂಸ್ಕೃತಾನುವಾದ:

ತವಮುಖಸಾದೃಶ್ಯಂ ನ ಲಭತ ಇತಿ ಸಂಪೂರ್ಣಮಂಡಲೋ ವಿಧಿನಾ
ಅನ್ಯಮಯಮಿವ ಘಟಯಿತುಂ ಪುನರಪಿ ಖಂಡ್ಯತೇ ಮೃಗಾಂಕಃ ||

-ಹಂಸಾನಂದಿ

ಕೊ: ಸಾಮಾನ್ಯವಾಗಿ  ಮುಖವನ್ನು ಚಂದಿರನಿಗೆ ಹೋಲಿಸುವುದು ಭಾರತೀಯ ಭಾಷೆಗಳಲ್ಲಿ ಕಂಡುಬರುವ ಉಪಮೆ. ಆದರೆ ಇಲ್ಲಿ ವ್ಯತಿರೇಕವಾಗಿ ಚಂದಿರನನ್ನೇ ನಾಯಕಿಯ ಮುಖಕ್ಕೆ ಹೋಲಿಸಿರುವುದನ್ನು ಕಾಣಬಹುದು.

ಕೊ.ಕೊ: ಬ್ರಹ್ಮನು, ಈ ಪದ್ಯದ ವಸ್ತುವಾದ ಹೆಣ್ಣಿನ ಮೊಗಕ್ಕೆ ಸಾಟಿಯಾಗುವಂತೆ ಚಂದಿರನನ್ನು ಮಾಡಲು ಯತ್ನಿಸುತ್ತಾನೆ. ಆದರೂ ಅದು ಸಾಧ್ಯವಾಗುವುದಿಲ್ಲ, ಹಾಗಾಗಿ ಹುಣ್ಣಿಮೆಯ ಚಂದ್ರನ ಮುಖವನ್ನು ಕ್ಷಯಿಸಿ, ಮತ್ತೆ ಹೊಸದಾಗಿ ಮಾಡಲು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ ಅನ್ನುವ ಭಾವಾರ್ಥ. ಚಂದಿರನು ಪ್ರತಿ ತಿಂಗಳು ತಿಂಗಳೂ ಹೆಚ್ಚುವುದನ್ನು, ಕ್ಷಯಿಸುವುದನ್ನೂ ಕವಿ ಚಮತ್ಕಾರಿಕವಾಗಿ ಇಲ್ಲಿ ಬಳಸಿಕೊಂಡಿದ್ದಾನೆ.

ಕೊ.ಕೊ.ಕೊ: ಅನುವಾದವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ, ಪ್ರಾಸವನ್ನಿಟ್ಟಿಲ್ಲ. ಅನುವಾದದಲ್ಲಿ ಕೆಲವು ಸಲಹೆಗಳನ್ನು ನೀಡಿದ ಮಿತ್ರ, ಅಷ್ಟಾವಧಾನಿ  ಗಣೇಶಭಟ್ಟ …

ಶ್ರೀ ಚೆನ್ನಕೇಶವ ಶೃಂಗಾರಭಾವ

Image
ಮುನ್ನ ವೇಲಾಪುರದಿ ನಿಂತಿಹ  ಚೆನ್ನಿಗನ ಚೆಲುವೆಂತು ಬಣ್ಣಿಪೆ ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? | ಚೆನ್ನಕೇಶವನೆಂಬ ಹೆಸರವ -ನನ್ನೆ ನೆಚ್ಚಿದ ಮದನಿಕಾ ಮನ ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧||
ತನ್ನ ಭಕುತರ ಸಕಲ ದುಃಖದ  ಬಿನ್ನಪವ ಕೇಳುತ್ತಲೆಲ್ಲರ- ವುನ್ನತಿಗೆ ತಾ ಮಿಗಿಲು ಕಾರಣ ಮಾರ ಚೆನ್ನಿಗನ | ಸನ್ನಿಧಾನವು ಸಕಲ ಜನಪದ ಕನ್ನಡದ ನೆಲಕೆಲ್ಲ ಒಬ್ಬನೆ  ಚನ್ನಕೇಶವ ರಾಯನೆಂಬುದು ನಿತ್ಯ ನಿಚ್ಚಳವು ||೨||
ವಿಜಯ ಪಡೆದಿರೆ ಧೀರ ಬಿಟ್ಟಿಗ  ಸುಜನಪತಿ ಪೂರಯಿಸೆ ಹರಕೆಯ ವಿಜಯ ನಾರಾಯಣನ ಮೂರುತಿಯನ್ನು ಕೆತ್ತಿಸಿದ | ನಿಜದಿ ಭಾಗ್ಯವುದವನ ಸನ್ನಿಧಿ ಭಜಿಸುವಂತಹ ದಶೆಯು ದೊರೆವುದು! ಋಜುತನದಿ ಚೆನ್ನಿಗನ ಮೀರುವ ದೇವನೆಲ್ಲಿಹನು? ||೩||
ತಾವರೆಯ ಮೊಗದಲ್ಲಿ ಕಂಗಳ  ತಾವರೆಯೆರಡು ನಕ್ಕು ಅರಳಿರೆ ಕಾವದೇವನ ಮೀರುವಂತಹ ಚೆಲುವು ಕಂಡಿರಲು | ದೇವಿ ಶಾಂತಲೆಯಂದು ಮಾಡಿದ ಹಾವ ಭಾವದ ನೃತ್ತ ಗಾನವು  ನೇವುರದ ಕಿಂಕಿಣಿಯ ನಾದವದಿಲ್ಲಿ ಕೇಳುತಿದೆ ||೪||
-ಹಂಸಾನಂದಿ
ಕೊ: ಡಿವಿಜಿ ಯವರು, ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಇರುವ ಮದನಿಕಾ ವಿಗ್ರಹ (ಶಿಲಾಬಾಲಿಕೆ)ಗಳ ಬಗ್ಗೆ ಬರೆದಿರುವ ಅಂತಃಪುರಗೀತೆಗಳಲ್ಲಿ ಮೊದಲದ್ದು , ಚೆನ್ನಕೇಶವನ ಮೇಲೇ. ಚೆನ್ನಕೇಶವನ ಸೊಬಗನ್ನು ವರ್ಣಿಸುವ ಈ ನನ್ನ ಪದ್ಯಗಳಿಗೆ ಆ ಅಂತಃಪುರ ಗೀತೆಯು ಮೊದಲಾಗುವ  "ಶ್ರೀ ಚೆನ್ನಕೇಶವ ಶೃಂಗಾರಭಾವ" ಎಂಬ ತಲೆಬರಹವೇ ಸೂಕ್ತವಾಗಿ ಕಂಡದ್ದರಿಂದ ಹಾಗೇ ಬಳಸಿ…

ತೀರದ ಬಯಕೆ

Image
ಅತ್ತೆ ಹೇಳೇ! ಕಂಡರವನನು ಚಣಕೆ ಮನವದು ತಣಿವುದೆ?
ಬಿದ್ದ ಕನಸೊಳು ಕುಡಿದ ನೀರಲಿ ದಾಹವೆಂದಿಗು ತೊಲಗದೆ!

ಸಂಸ್ಕೃತ ಮೂಲ ( ನಿರ್ಣಯ ಸಾಗರ ಟೀಕೆ,ಸಂಸ್ಕೃತ ಗಾಥಾ ಸಪ್ತಶತಿ - ೧-೯೩):

ಅವಿತೃಷ್ಣ ಪ್ರೇಕ್ಷಣೀಯೇನ  ತತ್ಕ್ಷಣಂ ಮಾತುಲಾನಿ ತೇನ ದೃಷ್ಟೇನ
ಸ್ವಪ್ನ ಪೀತೇನ ಪಾನೀಯೇನ ತೃಷ್ಣಾ ಏವ ನ ಭ್ರಷ್ಟಾ ||


ಮಹಾರಾಷ್ಟ್ರೀ ಪ್ರಾಕೃತ ಮೂಲ  ( ಹಾಲನ ಗಾಹಾ ಸತ್ತಸಯಿ, ೧-೯೩):

ಅವಿಅಣ್ಹ ಪೇಕ್ಖಣಿಜ್ಜೇಣ ತಕ್ಖಣಂ ಮಾಮಿ ತೇನೆ ದಿಟ್ಠೇನ
ಸಿವಿಣಅಪೀಏಣ ವ ಪಾಣಿಏಣ ತಣ್ಹ ವ್ವಿಅ ಣ ಫಿಟ್ಟಾ||

-ಹಂಸಾನಂದಿ

ಕೊ: ಇದು ವಜ್ರ ಎಂಬ ಕವಿಯು ಬರೆದ ಪದ್ಯವೆಂದು ಹೇಳಲಾಗಿದೆ.

ಕೊ.ಕೊ: ಗಾಹಾ ಸತ್ತಸಯಿ ಯಲ್ಲಿ ಹಲವು ಪದ್ಯಗಳು  ಒಂದು ಹೆಣ್ಣು ತನ್ನ ಅತ್ತೆ/ಸೋದರತ್ತೆಯ (ಅಥವಾ ಆ ವಾವೆಯಲ್ಲಿ ಕರೆಯುವ ಇನ್ನೊಂದು ಹೆಣ್ಣಿನ)  ಜೊತೆ ನಡೆಸುವ ಸಂಭಾಷಣೆಯಂತೆ ಇವೆ. ಉದಾಹರಣೆಗೆ ಈ ಹಿಂದೆ ನಾನು ಮಾಡಿದ್ದ ಇನ್ನೊಂದು ಅನುವಾದವನ್ನು ನೋಡಬಹುದು.

ಚಿತ್ರ: ಕಲಾವಿದ ಕೈಲಾಶ್ ರಾಜ್ ಅವರ ಕಾಂಗ್ರಾ ಶೈಲಿಯ ರಾಗಮಾಲ  ಚಿತ್ರ - ರಾಗಿಣಿ ವಾಸಂತಿ. ಈ ಪುಟದಿಂದ ತೆಗೆದುಕೊಂಡಿದ್ದು.