Posts

Showing posts from May, 2016

ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

Image
ಇವತ್ತು ಬೆಳಗ್ಗೆ ಮಿತ್ರರೊಬ್ಬರು ಹೀಗೊಂದು ಸಾಲು ಕಳಿಸಿ, ಇದು ನಿಜವೇ? ಅಥವಾ ಇದು ಸರಿಯೇ ಅಂತ ಕೇಳಿದರು. ಸಾಲು ಹೀಗಿತ್ತು: "ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ"

ನೋಡಿದೊಡನೆ ಇದು ಏನಿರಬೇಕೆಂದು ಹೊಳೆಯಿತಾದರೂ, ಎಲ್ಲಿ ಸಿಕ್ಕಿತು ಇದು ಅಂತ ಕೇಳಿದೆ. ಇದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ, ಇಬ್ಬರು ಮೂರು ಜನ ಇದನ್ನು ಕಳಿಸಿದ್ದಾರೆ, ಹೀಗೇನಾದರೂ ಮಹಾಭಾರತ ರಾಮಾಯಣಗಳಲ್ಲಿ ಕಥೆ ಇದೆಯೇನು ಅಂತ ಕೇಳಿದರು..
ಧಾಟಿ ನೋಡಿದೊಡನೆ ಇದು ಸಮಸ್ಯಾಪೂರಣದ ಸಾಲು, ಭಾಮಿನಿಷಟ್ಪದಿಯಲ್ಲಿದೆ ಅಂತ ಗೊತ್ತಾಗಿದ್ದರಿಂದ ಆಫೀಸಿಗೆ ಡ್ರೈವ್ ಮಾಡುತ್ತ ಸ್ವಲ್ಪ ಯೋಚಿಸುತ್ತಾ ಪ್ರಾಸದ ಪದಗಳನ್ನಿಡುತ್ತಾ ಬಂದೆ. ಬಂದಕೂಡಲೆ ಬರೆದ ಪದ್ಯವಿದು:
ಅಂಗಿತೊಟ್ಟಿರೆ ಸಿಂಗದಾ ಮರಿ
ಮಂಗವಿಕ್ಕಿರೆ ರಂಗವಲ್ಲಿಯ
ಸಂಗತಿಯು ಕೇಳ್ವುದಕೆ ಸೈ! ದಿಟದಲ್ಲಿ ನಡೆಯುವುದೆ?
ಪುಂಗಿ ಬಾರಿಸಿ ಕರಿಯ ಪಳಗಿಸೆ
ಹೊಂಗೆಮರದಲ್ಲಿಂಗು ಬೆಳೆದಿರೆ
ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!
ಈ ರೀತಿ ಸಮಸ್ಯಾ ಪೂರಣಗಳಲ್ಲಿ ಅರ್ಥವಿಲ್ಲದಂತಹ ಸಾಲನ್ನು ಕೊಟ್ಟು ಅದನ್ನು ಸಮರ್ಥಿಸುವಂತೆ ಕೇಳುವುದೇ ವಿಶೇಷ. ಇದರಲ್ಲಿ ಮೊದಲ ಪದಕ್ಕೆ ಪದವೊಂದನ್ನೋ, ಅಕ್ಷರವೊಂದನ್ನೋ ಸೇರಿಸಿ ಅರ್ಥ ಬದಲಾಯಿಸುವುದು ಒಂದು ವಿಧಾನವಾದರೆ ( ಉದಾ: ಕಂತಿಯ ಪ್ರಸಿದ್ಧ ಪೂರಣ - ಇಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ ಅನ್ನು ಚೆಕ್ಕಿಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ ಎಂದು ಬದಲಾಯಿಸಿದಂತೆ), ಅನರ್ಥಕಾರಿಯಾದ ಸಾ…

ಕೋರಿಕೆ

Image
ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ
ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ
ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ
ಒಳ್ಳಿತನು ತೋರೆನಗೆ ಭಾರ್ಗವನ ಕುವರಿ

ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ)

कालाम्बुदालिललितोरसिकैटभारेः
धाराधरे स्फुरति या तटिदङ्गनेव ।
मातुः समस्तजगतां महनीयमूर्तिः
भद्राणि मे दिशतु भार्गवनंदनायाः ॥

ಕಾಲಾಂಬುದಾಲಿಲಲಿತೋರಸಿಕೈಟಭಾರೇಃ
ಧಾರಾಧರೇಸ್ಫುರತಿಯಾತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿಮೇ ದಿಶತು ಭಾರ್ಗವನಂದನಾಯಾಃ ||

-ಹಂಸಾನಂದಿ

ಕೊ:  ಕೆಲವು ವರ್ಷಗಳಿಂದಲೂ ಆದಿ ಶಂಕರರ ಹುಟ್ಟಿದದಿನ - ಶಂಕರ ಜಯಂತಿ, ವೈಶಾಖ ಶುದ್ಧ ಪಂಚಮಿಯಂದು, ಶಂಕರರ ಯಾವುದಾದರೂ ಪದ್ಯವನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ, ಅದೇ ಸಾಲಿನಲ್ಲಿ ಇವತ್ತಿಗೂ ಒಂದು ಅನುವಾದ.

ಕೊ.ಕೊ: ಮೂಲ ಪದ್ಯವು ಶಂಕರರ ಪ್ರಸಿದ್ಧವಾದ ಕನಕಧಾರಾ ಸ್ತೋತ್ರದಲ್ಲಿದೆ. ಇದೇ ಸ್ತೋತ್ರದ ಇನ್ನು ಕೆಲವು ಪದ್ಯಗಳು ನಾನು ಅನುವಾದಿಸಿರುವುದನ್ನು ಇಲ್ಲಿ ಚಿಟಕಿಸಿ ಓದಬಹುದು.

ಕೊ.ಕೊ.ಕೊ: ಮೂಲವು ವಸಂತತಿಲಕ ವೃತ್ತದಲ್ಲಿದೆ. ಅನುವಾದವು ಚೌಪದಿಯಲ್ಲಿದೆ, ಆದರೆ ಪ್ರಾಸವನ್ನು ಪಾಲಿಸಿಲ್ಲ.

ಚಿತ್ರ: ೧೧ನೇ/೧೨ನೇ ಶತಮಾನದ ವಿಷ್ಣು ಮತ್ತು ಲಕ್ಷ್ಮಿ ವಿಗ್ರಹ.  ಈ ವಿಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಕೊಂಡಿಗಳಲ್ಲಿವೆ.

http://www.thehindu.com/…/us-returns-ido…/article5577461…